ADVERTISEMENT

ರೇಷ್ಮೆಗೂಡು ಮಾರುಕಟ್ಟೆ: ಸುಧಾರಣೆ ಕಾಣದ ಆನ್‌ಲೈನ್‌ ಪಾವತಿ ವ್ಯವಸ್ಥೆ

ನಿತ್ಯ ರೀಲರ್‌, ರೈತರು–ಅಧಿಕಾರಿಗಳ ನಡುವೆ ಜಟಾಪಟಿ

ಆರ್.ಜಿತೇಂದ್ರ
Published 27 ಸೆಪ್ಟೆಂಬರ್ 2019, 19:31 IST
Last Updated 27 ಸೆಪ್ಟೆಂಬರ್ 2019, 19:31 IST
ರಾಮನಗರದ ರೇಷ್ಮೆಗೂಡು ಮಾರುಕಟ್ಟೆ
ರಾಮನಗರದ ರೇಷ್ಮೆಗೂಡು ಮಾರುಕಟ್ಟೆ   

ರಾಮನಗರ: ಇಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಆನ್‌ಲೈನ್‌ ಪಾವತಿ ವ್ಯವಸ್ಥೆ ಜಾರಿಗೆ ಬಂದು 9 ತಿಂಗಳು ಕಳೆದಿದ್ದರೂ ಇನ್ನೂ ತೆವಳುತ್ತಾ ಸಾಗಿದೆ. ಇದರಿಂದ ಯೋಜನೆ ಪೂರ್ಣ ಸಾಕಾರಗೊಳ್ಳದಂತೆ ಆಗಿದೆ.

ಇಲ್ಲಿನ ಗೂಡು ಮಾರುಕಟ್ಟೆಯಲ್ಲಿ ನಿತ್ಯ ಸರಾಸರಿ 40–50 ಟನ್‌ನಷ್ಟು ಗೂಡು ಖರೀದಿ ನಡೆದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ವ್ಯವಹಾರವಾಗುತ್ತಿದೆ. ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ರೇಷ್ಮೆ ಇಲಾಖೆಯು ಇದೇ ವರ್ಷ ಜನವರಿ 8ರಿಂದ ಆನ್‌ಲೈನ್‌ ಪಾವತಿ ವ್ಯವಸ್ಥೆಯನ್ನು ಆರಂಭಿಸಿದೆ. ಆದರೆ ಈವರೆಗೆ ಕೇವಲ ಶೇ 15–20ರಷ್ಟು ವಹಿವಾಟು ಮಾತ್ರ ಬ್ಯಾಂಕಿಂಗ್‌ ಮೂಲಕ ನಡೆದಿದ್ದು, ₨20–25 ಲಕ್ಷದಷ್ಟು ಹಣ ರೈತರ ಬ್ಯಾಂಕ್‌ ಖಾತೆ ಸೇರುತ್ತಿದೆ. ಉಳಿದಂತೆ ನಗದು ರೂಪದ ವ್ಯವಹಾರವೇ ಮುಂದುವರಿದಿದೆ.

ಏಷ್ಯಾದಲ್ಲೇ ದೊಡ್ಡ ಗೂಡಿನ ಮಾರುಕಟ್ಟೆ ಎಂಬ ಖ್ಯಾತಿ ಹೊಂದಿರುವ ಈ ಮಾರುಕಟ್ಟೆಗೆ ರಾಜ್ಯ–ಹೊರರಾಜ್ಯಗಳಿಂದ ರೈತರು ಗೂಡು ಹೊತ್ತು ತರುತ್ತಾರೆ. ಮರಳಿ ಹಣ ಒಯ್ಯುವಾಗ ಸಾಕಷ್ಟು ರೈತರು ತೊಂದರೆ, ಲೂಟಿಗೆ ಒಳಗಾಗಿದ್ದಾರೆ. ಅದನ್ನು ತಪ್ಪಿಸುವ ಸಲುವಾಗಿ ಮಾರುಕಟ್ಟೆಯಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಸದ್ಯ ಎಚ್‌ಡಿಎಫ್‌ಸಿ ಬ್ಯಾಂಕ್‌ ರೈತರ ಖಾತೆಗೆ ಹಣ ವರ್ಗಾಯಿಸುವ ಹೊಣೆ ಹೊತ್ತುಕೊಂಡಿದೆ.

ADVERTISEMENT

ರೀಲರ್‌ಗಳ ಹಿಂದೇಟು: ಮಾರುಕಟ್ಟೆಯಲ್ಲಿ 1200 ನೋಂದಾಯಿತ ರೀಲರ್‌ಗಳು ಇದ್ದಾರೆ. ಇವರ ಪೈಕಿ ನಿತ್ಯ 700–800 ಮಂದಿ ನಿತ್ಯ ಇ–ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಇವರಲ್ಲಿ ಕೆಲವರು ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗೆ ನೋಂದಾಯಿಸಿಕೊಂಡಿದ್ದಾರೆ.

‘ಕೆಲವು ರೀಲರ್‌ಗಳು ಗೂಡು ಖರೀದಿಸಿ ಹೋದವರು 2–3 ದಿನ ಬಿಟ್ಟು ಹಣ ನೀಡುತ್ತಾರೆ. ಇನ್ನೂ ಕೆಲವರು ನಗದು ರೂಪದಲ್ಲೇ ಕೊಡುತ್ತಾರೆ. ಕೆಲವರು ರೈತರಿಗೆ ಪಾವತಿಗೆ ಸಮಯ ಕೇಳುತ್ತಾರೆ. ಎಲ್ಲ ರೀಲರ್‌ಗಳು ಬ್ಯಾಂಕ್‌ ಖಾತೆ ಮೂಲಕ ವ್ಯವಹರಿಸುವಂತಾದಲ್ಲಿ ಮಾತ್ರ ಆನ್‌ಲೈನ್‌ ವಹಿವಾಟು ಸುಗಮಗೊಳ್ಳಲು ಸಾಧ್ಯ’ ಎನ್ನುತ್ತಾರೆ ಮಾರುಕಟ್ಟೆಯ ಉಪ ನಿರ್ದೇಶಕ ಮುನ್ಶಿಬಸಯ್ಯ.

ರೈತರ ಹಿಂದೇಟು: ಬ್ಯಾಂಕ್‌ ಖಾತೆ ಮೂಲಕ ಹಣ ಪಡೆಯಲು ರೇಷ್ಮೆ ಬೆಳೆಗಾರರು ಸಹ ನೋಂದಾಯಿಸಿಕೊಳ್ಳಬೇಕಿದೆ. ಮಾರುಕಟ್ಟೆ ವ್ಯಾಪ್ತಿಯಲ್ಲಿ ಸುಮಾರು 98 ಸಾವಿರ ಬೆಳೆಗಾರರು ಇದ್ದಾರೆ. ಇವರಲ್ಲಿ ಕೇವಲ 24–25 ಸಾವಿರ ರೈತರು ಈವರೆಗೆ ಬ್ಯಾಂಕ್‌ ಖಾತೆಯ ವಿವರಗಳನ್ನು ನೀಡಿದ್ದಾರೆ. ಕೆಲವು ರೈತರು ಕಡೆಯ ಕ್ಷಣದಲ್ಲಿ ಅಸ್ಪಷ್ಟವಾಗಿ ಖಾತೆಗಳ ವಿವರಗಳನ್ನು ನೀಡುತ್ತಿದ್ದಾರೆ. ಕೆಲವರು ನಿಷ್ಕ್ರಿಯ ಖಾತೆಗಳ ವಿವರ ನೀಡಿ ಹೋಗುತ್ತಾರೆ. ಅಂತಹ ಖಾತೆಗಳಿಗೆ ಹಣ ವರ್ಗಾಯಿಸುವುದು ತಲೆನೋವಾಗಿ ಪರಿಣಮಿಸಿದೆ ಎನ್ನುತ್ತಾರೆ ಅಧಿಕಾರಿಗಳು.

**
ಪಾವತಿ ವಿಳಂಬ: ವಾಗ್ವಾದ
ರೈತರ ಖಾತೆಗಳಿಗೆ ಹಣ ವರ್ಗಾವಣೆಯು ಕೆಲವೊಮ್ಮೆ ವಿಳಂಬವಾಗುತ್ತಿದೆ. ಇದರಿಂದಾಗಿ ಬೆಳೆಗಾರರು ಸಿಟ್ಟಿಗೆದ್ದು ಅಧಿಕಾರಿಗಳ ಜೊತೆ ವಾಗ್ವಾದ ನಡೆಸುವ ದೃಶ್ಯ ಸಾಮಾನ್ಯವಾಗಿದೆ.

‘ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸುವುದಾಗಿ ಮಾರುಕಟ್ಟೆ ಸಿಬ್ಬಂದಿ ಹೇಳುತ್ತಾರೆ. ಆದರೆ ಒಮ್ಮೊಮ್ಮೆ ವಾರ ಆದರೂ ಹಣ ಬಂದಿರುವುದಿಲ್ಲ. ಮತ್ತೆ ಮಾರುಕಟ್ಟೆಗೆ ಬಂದು ಅಲೆಯಬೇಕು.ಕೆಲವು ರೀಲರ್‌ಗಳೂ ಬ್ಯಾಂಕಿಗೆ ಹಣ ತುಂಬಲು ವಾರಗಟ್ಟಲೆ ವಿಳಂಬ ಮಾಡುತ್ತಾರೆ. ಹಣ ಪಾವತಿಯಲ್ಲಿ ಆಗುತ್ತಿರುವ ವಿಳಂಬವನ್ನು ಬಗೆಹರಿಸಲು ಹಿರಿಯ ಅಧಿಕಾರಿಗಳು ಮನಸ್ಸು ಮಾಡಬೇಕು’ ಎನ್ನುತ್ತಾರೆ ರಾಮನಗರದ ರೇಷ್ಮೆ ಬೆಳೆಗಾರ ರವಿ.

‘ಗೂಡು ಮಾರಿದ ರೈತರ ಖಾತೆ ವಿವರವನ್ನು ಅಂದೇ ಬ್ಯಾಂಕಿಗೆ ನೀಡಲಾಗುತ್ತಿದೆ. ರೈತರ ಬ್ಯಾಂಕ್‌ ಖಾತೆಗಳ ವಿವರಗಳನ್ನು ಸದ್ಯ ಮ್ಯಾನ್ಯುಯೆಲ್‌ ಆಗಿ ತುಂಬಲಾಗುತ್ತಿದೆ. ಕೆಲವೊಮ್ಮೆ ಖಾತೆಗಳ ಸಂಖ್ಯೆ ಅಸ್ಪಷ್ಟವಾಗಿದ್ದು, ತಪ್ಪಾಗಿ ನಮೂದಿಸಲ್ಪಟ್ಟಿರುತ್ತದೆ. ಅಂತಹ ಸಂದರ್ಭಗಳಲ್ಲಿ ಖಾತೆಗೆ ಹಣ ವರ್ಗಾವಣೆ ಆಗಿರುವುದಿಲ್ಲ. ಇನ್ನೂ ಕೆಲವೊಮ್ಮೆ ನೆಟ್‌ವರ್ಕ್‌ ಸಮಸ್ಯೆ ಇರುತ್ತದೆ. ಹೀಗಾಗಿ ವಿಳಂಬ ಆಗುತ್ತಿದೆ. ವ್ಯವಸ್ಥೆ ಸರಿದಾರಿಗೆ ಬರಲು ಇನ್ನೂ ಕೆಲವು ದಿನಗಳು ಬೇಕು’ ಎನ್ನುತ್ತಾರೆ ಮಾರುಕಟ್ಟೆ ಉಪನಿರ್ದೇಶಕ ಮುನ್ಶಿಬಸಯ್ಯ.

**

ದೂರದೂರುಗಳ ಬೆಳೆಗಾರರಿಗೆ ಕಡ್ಡಾಯವಾಗಿ ಬ್ಯಾಂಕ್‌ ಖಾತೆಗೆ ಹಣ ಪಾವತಿಸಬೇಕು. ಗೂಡು ಮಾರಿದ ದಿನವೇ ಹಣ ಸಂದಾಯ ಆಗಬೇಕು
- ರವಿ,ರೇಷ್ಮೆ ಬೆಳೆಗಾರ, ರಾಮನಗರ

**
ಸದ್ಯ ಶೇ 15–20ರಷ್ಟು ರೈತರಿಗೆ ಬ್ಯಾಂಕ್‌ ಮೂಲಕವೇ ಹಣ ಪಾವತಿಸಲಾಗುತ್ತಿದೆ. ಇನ್ನೂ ರೀಲರ್‌ಗಳು–ರೈತರು ನೋಂದಾಯಿಸಿಕೊಳ್ಳಬೇಕಿದೆ
- ಮುನ್ಶಿಬಸಯ್ಯ,ಉಪನಿರ್ದೇಶಕ, ರಾಮನಗರ ರೇಷ್ಮೆಗೂಡು ಮಾರುಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.