ಮಾಗಡಿ: ತಾಲ್ಲೂಕಿನಲ್ಲಿ ಪರಿಸರ ಸ್ನೇಹಿ ಗಣಪನಿಗೆ ಭಾರಿ ಬೇಡಿಕೆಯಿದ್ದು, ರಾಜ್ಯ, ಹೊರ ರಾಜ್ಯಗಳಲ್ಲೂ ಪರಿಸರ ಸ್ನೇಹಿ ಗಣಪನನ್ನು ಖರೀದಿಸಿ ಪೂಜಿಸುತ್ತಿದ್ದಾರೆ.
ಗೌರಿ, ಗಣೇಶ ಹಬ್ಬದ ಹಿನ್ನೆಲೆ ಗಣೇಶ ಮೂರ್ತಿ ತಯಾರಿಸುವವರು ಗಣಪತಿ ಮೂರ್ತಿ ತಯಾರಿಸುವಲ್ಲಿ ನಿರತರಾಗಿದ್ದಾರೆ. ಮಾಗಡಿಯಲ್ಲಿ ಐದು ತಲೆ ಮಾರುಗಳಿಂದ ಗಣಪತಿ ವಿಗ್ರಹ ತಯಾರಿಸುತ್ತಿರುವ ದಿ.ಎಂ.ಎನ್.ಮುದ್ದಣ್ಣ ಕುಟುಂಬದವರು 15 ಅಡಿಯ ಬೃಹತ್ ಗಣೇಶ ಮೂರ್ತಿಯನ್ನು ಹಾಗೂ ಬೇಡಿಕೆಗೆ ತಕ್ಕಂತೆ ವಿಗ್ರಹ ತಯಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದವರು ಇಲ್ಲಿಗೆ ಬಂದು ಗಣೇಶ ಮೂರ್ತಿಯನ್ನು ಖರೀದಿಸುತ್ತಿರುವುದು ವಿಶೇಷವಾಗಿದೆ.
ಗಣಪತಿ ತಯಾರಿಸಲು ಮೂರು ತಿಂಗಳು ಮುಂಚಿತವಾಗಿ ಸಿದ್ಧತೆ ಆರಂಭಿಸಬೇಕು. ಬಸವ ಜಯಂತಿಯಿಂದ ಮಣ್ಣನ್ನು ಸಿದ್ಧಪಡಿಸಲಾಗುವುದು. ವಿಶ್ವನಾಥಪುರ ಹಾಗೂ ಬಿಸ್ಕೂರು ಕೆರೆಯಿಂದ ಜೇಡಿಮಣ್ಣನ್ನು ಹದ ಮಾಡಿಕೊಂಡು ಹುಲ್ಲಿನಲ್ಲಿ ಬೇಕಾದ ಆಕೃತಿ ಮಾಡಿಕೊಂಡು ಗೋಣಿಚೀಲದಲ್ಲಿ ಸಂಗ್ರಹಿಸಿ ಪರಿಸರ ಸ್ನೇಹಿ ಗಣಪತಿ ತಯಾರಿಸಲಾಗುವುದು. ಇದರಿಂದ ಪರಿಸರಕ್ಕೆ ಯಾವುದೇ ರೀತಿ ಹಾನಿ ಸಂಭವಿಸದಂತಹ ಬಣ್ಣ ಬಳಸಿ ತಯಾರಿಸಲಾಗುತ್ತಿದೆ. ಮೂರು ತಿಂಗಳ ಮುಂಚಿತವಾಗಿ ಗಣಪತಿ ತಯಾರಿಸಲು ಆರ್ಡರ್ ನೀಡುವವರಿಗೆ ಗಣಪತಿ ತಯಾರಿಸಿ ನೀಡಲಾಗುವುದು’ ಎಂಬುದು ಕಲಾವಿದ ಉಮಾಶಂಕರ್ ಅವರ ಮಾತಾಗಿದೆ.
ವಿವಿಧ ಆಕೃತಿಯ ಗಣಪ: ಕಲಾವಿದ ಉಮಾಶಂಕರ್ ಅವರ ಕೈಯಲ್ಲಿ ವಿವಿಧ ಆಕೃತಿಯ ಗಣಪತಿಗಳು ಮೂಡಿಬಂದಿವೆ. ಅದರಲ್ಲಿ ಲಕ್ಷ್ಮಿ ನರಸಿಂಹಸ್ವಾಮಿ ಗಣಪ, ಚಂದ್ರನ ಮೇಲೆ ಕುಳಿತಿರುವುದು, ಎಂಟು ಪ್ರಾಣಿಗಳನ್ನೊಳಗೊಂಡ ಗಣಪ, ವೆಂಕಟೇಶ್ವರಸ್ವಾಮಿ, ಬಸವಣ್ಣ, ಪ, ಗರುಡನ ಮೇಲೆ ಕುಳಿತ ಗಣಪ, ಡಾ.ಶಿವಕುಮಾರ ಸ್ವಾಮೀಜಿ, ಶಿವ ಗಣಪ, ದುಷ್ಟರ ಸಂಹಾರ ಗಣಪ ಹೀಗೆ ಬೇಡಿಕೆಗೆ ತಕ್ಕಂತೆ ಗಣಪತಿಗಳನ್ನು ತಯಾರಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಮಣ್ಣಿನ ಗಣಪತಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಂಗಳೂರು, ರಾಮನಗರ, ತುಮಕೂರು ದೊಡ್ಡಬಳ್ಳಾಪುರ, ದೇವನಹಳ್ಳಿ, ಕೋಲಾರ, ಗೌರಿಬಿದನೂರು, ಆಂಧ್ರಪ್ರದೇಶದಲ್ಲಿ ಇಲ್ಲಿನ ಗಣಪತಿಗೆ ಹೆಸರುವಾಸಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.