ಚನ್ನಪಟ್ಟಣ: ಶಿಕ್ಷಣ, ಆರೋಗ್ಯ ಪ್ರತಿಯೊಬ್ಬರ ಮೂಲಭೂತ ಹಕ್ಕು. ಶಿಕ್ಷಣ ಹಾಗೂ ಆರೋಗ್ಯ ಸರ್ಕಾರದ ಆದ್ಯತೆಯಾಗಬೇಕು. ಇವುಗಳನ್ನು ನೀಡದ ಸರ್ಕಾರ ಇದ್ದರೂ ಪ್ರಯೋಜನವಿಲ್ಲ ಎಂದು ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ನಿರಂಜನಾರಾಧ್ಯ ಅಭಿಪ್ರಾಯಪಟ್ಟರು.
ನಗರದ ಶತಮಾನೋತ್ಸವ ಭವನದಲ್ಲಿ ರಾಮನಗರ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಸಾರ್ವತ್ರಿಕವಾಗಿ ಶಿಕ್ಷಣ ಹಾಗೂ ಆರೋಗ್ಯ ದೊರೆಯಬೇಕು. ಆಗ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಜನೋಪಯೋಗಿ ಕಾಯಿದೆಗಳು ಸರ್ಕಾರದ ಅಸಡ್ಡೆಯಿಂದ ಅವನತಿ ಹೊಂದುತ್ತಿವೆ ಎಂದರು.
ಸರ್ಕಾರಿ ಶಾಲೆಗಳ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ಸುಮಾರು 2 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚಲಾಗಿದೆ. 2014–15ರ ಅವಧಿಯಲ್ಲಿ ರಾಮನಗರದಲ್ಲಿ 1473 ಶಾಲೆಗಳಿದ್ದವು, ಆದರೆ ಈಗ 1295 ಶಾಲೆಗಳಿವೆ. ಸುಮಾರು 178 ಶಾಲೆಗಳನ್ನು ಮುಚ್ಚಲಾಗಿದೆ. ಹೀಗೇ ಮುಂದುವರಿದರೆ ಸರ್ಕಾರಿ ಶಾಲೆಗಳ ಅವನತಿ ಖಂಡಿತ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಪಿ.ಆರ್. ಸವಿತಾ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಕಷ್ಟು ಯೋಜನೆಗಳು ಜಾರಿಗೆ ಬಂದಿವೆ. ಆದರೆ, ಅವುಗಳನ್ನೆಲ್ಲಾ ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದರು. ಹಿರಿಯ ಸಾಹಿತಿ ಕಾಳೇಗೌಡ ನಾಗವಾರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜೇಗೌಡ, ಬಿಇಒ ಮರೀಗೌಡ, ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಶಂಭೂಗೌಡ ನಾಗವಾರ, ಇಒ ಶಿವಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.