ADVERTISEMENT

ಪದವೀಧರರ ಹಿತ ಕಾಯದ ದೇವೇಗೌಡ

ಮತದಾರರಿಗೆ ಆಮಿಷವೊಡ್ಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ: ಸಿಂಗ್ ಆರೋಪ

​ಪ್ರಜಾವಾಣಿ ವಾರ್ತೆ
Published 28 ಮೇ 2024, 6:21 IST
Last Updated 28 ಮೇ 2024, 6:21 IST
ಬೆಂಗಳೂರು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್.ಎಸ್. ಉದಯ್ ಸಿಂಗ್ ಅವರು ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಪ್ರಚಾರ ನಡೆಸಿದರು
ಬೆಂಗಳೂರು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್.ಎಸ್. ಉದಯ್ ಸಿಂಗ್ ಅವರು ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಪ್ರಚಾರ ನಡೆಸಿದರು   

ಬಿಡದಿ: ‘ಬೆಂಗಳೂರು ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬಂದಿರುವ ಬಿಜೆಪಿಯ ಅ. ದೇವೇಗೌಡ ಅವರು, ಪದವೀಧರರ ಹಿತ ಕಾಯದೆ ಸ್ವಹಿತವನ್ನಷ್ಟೇ ಕಾಯ್ದುಕೊಂಡು ಬಂದಿದ್ದಾರೆ. ತಮಗೆ ಮತ ಹಾಕಿ ವಿಧಾನಸೌಧಕ್ಕೆ ಕಳಿಸಿದವರ ಸಮಸ್ಯೆಗಳ ಕುರಿತು ಒಮ್ಮೆಯೂ ದನಿ ಎತ್ತದ ಅವರನ್ನು ಈ ಸಲ ಮನೆಗೆ ಕಳಿಸುವ ಕಾಲ ಬಂದಿದೆ’ ಎಂದು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್.ಎಸ್. ಉದಯ್ ಸಿಂಗ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸಂಜೆ ವಿವಿಧೆಡೆ ಮತಯಾಚಿಸಿ ಮಾತನಾಡಿದ ಅವರು, ‘ಪದವೀಧರರ ಪ್ರತಿನಿಧಿಯೊಬ್ಬರು ಇದ್ದಾರೆ ಎಂಬ ವಿಷಯದ ಬಹುತೇಕರಿಗೆ ಗೊತ್ತೇ ಇಲ್ಲ. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಅವರು ಅಪರಿಚಿತರಾಗಿದ್ದಾರೆ. ಪದವೀಧರರ ದನಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಮತದಾರರು ನನ್ನನ್ನು ಬೆಂಬಲಿಸಿ ಮೊದಲ ಪ್ರಾಶಸ್ತ್ಯದ ಮತ ಹಾಕಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

‘ನಾನೂ ಸಹ ಶಿಕ್ಷಕನಾಗಿದ್ದೆ ಎಂದ ಹೇಳಿಕೊಳ್ಳುವ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಅವರು, ಮತದಾರರಿಗೆ ಗಿಫ್ಟ್ ಜೊತೆಗೆ ಮದ್ಯ ಮತ್ತು ಮಾಂಸಾಹಾರದ ವ್ಯವಸ್ಥೆ ಮಾಡುತ್ತಾ ಪದವೀಧರರ ಮಾನ ಕಳೆಯುತ್ತಿದ್ದಾರೆ. ಇಂತಹವರು ಪದವೀಧರರ ಪ್ರತಿನಿಧಿಯಾಗಲು ಅರ್ಹರಲ್ಲ. ಈ ಸಲ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದು, ಪದವೀಧರರ ಪರವಾಗಿ ಕೆಲಸ ಮಾಡುತ್ತಾ ಬಂದಿರುವ ನನಗೆ ಎಲ್ಲಾ ಕಡೆ ಉತ್ತಮ ಸ್ಪಂದನೆ ಸಿಗುತ್ತಿದೆ. ಚುನಾವಣೆಯಲ್ಲಿ ನನ್ನ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಬೆಂಗಳೂರಿನ ಉಜ್ವಲ ಅಕಾಡೆಮಿಯ ಮಂಜುನಾಥ್ ಕೆ.ಯು ಹಾಗೂ ಸ್ಥಳೀಯ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.