
ಪುಟ್ಟಮಾದೇಗೌಡ ಮೃತ ರೈತ
ರಾಮನಗರ (ಹಾರೋಹಳ್ಳಿ): ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆ ನಡುವಣ ಸಂಘರ್ಷ ಮುಂದುವರಿದಿದ್ದು, ತಾಲ್ಲೂಕಿನ ದುಮ್ಮಸಂದ್ರ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಪುಟ್ಟಮಾದೇಗೌಡ ಮೃತ ರೈತ.
ಗ್ರಾಮದಲ್ಲಿರುವ ತಮ್ಮ ಜಮೀನಿಗೆ ನೀರು ಹರಿಸುವುದಕ್ಕಾಗಿ ಪುಟ್ಟಮಾದೇಗೌಡ ಅವರು, ಬೆಳಿಗ್ಗೆಯೇ ಹೋಗಿದ್ದರು. ನೀರು ಹಾಯಿಸುತ್ತಿರುವಾಗ ಏಕಾಏಕಿ ಕಾಡಾನೆ ದಾಳಿ ನಡೆಸಿ, ತುಳಿದು ಹಾಕಿದೆ. ದಾಳಿಯ ತೀವ್ರತೆಗೆ ಪುಟ್ಟಮಾದೇಗೌಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು.
ಜಮೀನಿಗೆ ಹೋದ ಪುಟ್ಟಮಾದೇಗೌಡ ಅವರು ಎಷ್ಟೊತ್ತಾದರೂ ಮನೆಗೆ ಬಾರದಿದ್ದರಿಂದ ಹಾಗೂ ಮೊಬೈಲ್ ಫೋನ್ ಕರೆ ಸಹ ಸ್ವೀಕರಿಸದಿದ್ದರಿಂದ, ಕುಟುಂಬದವರು ಜಮೀನಿಗೆ ಹುಡುಕಿಕೊಂಡು ಹೋಗಿದ್ದಾರೆ. ಆಗ, ಜಮೀನಿನಲ್ಲಿ ಪುಟ್ಟಮಾದೇಗೌಡ ಅವರ ಶವವು ಅರೆನಗ್ನಾವಸ್ಥೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಘಟನೆ ಖಂಡಿಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದರು. ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ, ಕುಟುಂಬದವರಿಗೆ ಸಮಾಧಾನಪಡಿಸಿ, ಶವವನ್ನು ಆಸ್ಪತ್ರೆಗೆ ಸಾಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.