ಕನಕಪುರ: ರೇಷ್ಮೆ ಸೊಪ್ಪು ತರಲು ಜಮೀನಿನ ಕಡೆ ಹೋದ ರೈತರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ, ಗಾಯಗೊಳಿಸಿರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ನಾರಾಯಣಪುರ ಗ್ರಾಮದ ಶ್ರೀನಿವಾಸ್ (48) ಎಂಬುವರ ಮೇಲೆ ಗುರುವಾರ ಬೆಳಿಗ್ಗೆ ಕಾಡಾನೆ ದಾಳಿ ನಡೆಸಿದೆ. ಇದರಿಂದ ಕೆರಳಿದ ಗ್ರಾಮಸ್ಥರು ಕೋಡಿಹಳ್ಳಿ ರಸ್ತೆಯಲ್ಲಿ ಧರಣಿ ಕುಳಿತು, ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಆನೆ ದಾಳಿಯಲ್ಲಿ ಗಾಯಗೊಂಡಿದ್ದ ಶ್ರೀನಿವಾಸ್ ಅವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ದಯಾನಂದ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
15 ದಿನಗಳ ಹಿಂದೆ ಗೊಲ್ಲಳ್ಳಿಯಲ್ಲಿ ರೈತರ ಮೇಲೆ ಕಾಡಾನೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿತ್ತು. ಆಗ ರೈತರು ಕಾಡಾನೆಯನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು. ಆದರೆ, ಅರಣ್ಯಾಧಿಕಾರಿಗಳು ಕಾಡಾನೆಯನ್ನು ಕಾಡಿಗೂ ಓಡಿಸದೆ, ಸೆರೆ ಹಿಡಿಯದ ಕಾರಣ ಕಾಡಾನೆ ತನ್ನ ದಾಳಿಯನ್ನು ಮುಂದುವರಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆ 8.30ಕ್ಕೆ ನಾರಾಯಣಪುರ ಗ್ರಾಮಸ್ಥರು ಕೋಡಿಹಳ್ಳಿ ರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದ್ದರಿಂದ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವಿಕಾಸ್ ಮತ್ತು ಅನಂತ್‌ರಾಮ್ ಹಾಗೂ ಠಾಣೆಯ ಎಸ್ಐಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಬರುವುದಾಗಿ ತಿಳಿಸಿ ಪ್ರತಿಭಟನೆಕಾರರ ಮನವೊಲಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಬನ್ನೇರುಘಟ್ಟ ವನ್ಯಜೀವಿ ವಲಯದ ಎಸಿಎಫ್ ರವಿಕುಮಾರ್ ಟಿ.ಎಂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ, ಆನೆಗಳನ್ನು ತಡೆಗಟ್ಟುವಂತೆ ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಪ್ರಯೋಜನವಿಲ್ಲದಂತಾಗಿದೆ. ನಮಗೆ ಶಾಶ್ವತವಾಗಿ ಕಾಡಾನೆಗಳು ಹೊರಗಡೆ ಬರದಂತೆ ತಡೆಗಟ್ಟಿ ಎಂದು ಎಂದು ಒತ್ತಾಯಿಸಿದರು.
ಕಾಡಾನೆ ದಾಳಿಯಿಂದ ರೈತರು ಸಾವನಪ್ಪಿದ್ದರೆ ಪರಿಹಾರ ನೀಡುತ್ತೀರಾ, ಆದರೆ ಗಾಯಗೊಂಡು ಅಂಗವಿಕಲರಾದರೆ ಯಾವುದೇ ಪರಿಹಾರವಿಲ್ಲ. ಘಟನೆಯಲ್ಲಿ ಬದುಕುಳಿದವರು ಜೀವನಪರ್ಯಂತ ಜೀವಂತ ಶವವಾಗಿ ಬದುಕುತ್ತಾರೆ. ಅವರಿಗೂ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.
ಎಸಿಎಫ್ ರವಿಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಆನೆಗಳು ಹೊರಗಡೆ ಬರದಂತೆ ತಡೆಗಟ್ಟಲಾಗುವುದು. ಗಾಯಗೊಂಡಿರುವವರಿಗೆ ಆಸ್ಪತ್ರೆಯ ವೆಚ್ಚವನ್ನು ಸಂಪೂರ್ಣವಾಗಿ ಬರಿಸಲಾಗುವುದು ಹಾಗೂ ಶಾಶ್ವತವಾಗಿ ಅಂಗವಿಕಲತೆ ಆದರೆ ಅವರಿಗೆ ಸರ್ಕಾರದಿಂದ ಪರಿಹಾರ ದೊರಕಲಿದೆ ಎಂದು ತಿಳಿಸಿದರು.
ಸದ್ಯಕ್ಕೆ ಕಾಡಿನಿಂದ ಹೊರಗಡೆ ಇರುವಂತ ಆನೆಗಳನ್ನು ವಾಪಸ್ ಅರಣ್ಯಕ್ಕೆ ಓಡಿಸಲಾಗುವುದು. ಒಂಟಿ ಆನೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಲಾಗುವುದು. ಅರಣ್ಯ ಸಿಬ್ಬಂದಿಗಳ ಗಸ್ತನ್ನು ಹೆಚ್ಚಿಸಲಾಗುವುದು. ಆನೆಗಳನ್ನು ಓಡಿಸಲು ರೈತರಿಗೆ ಪಟಾಕಿ ನೀಡಲಾಗುವುದು. ಆನೆ ದಾಳಿಯಿಂದ ತೊಂದರೆಗೊಳಗಾದವರು ಇಲಾಖೆಗೆ ಅರ್ಜಿ ನೀಡಿದರೆ ಪರಿಹಾರ ದೊರಕಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.