ADVERTISEMENT

ಆನೆ ದಾಳಿ: ಶಾಶ್ವತ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 10:07 IST
Last Updated 7 ಜುಲೈ 2021, 10:07 IST
ಕಾಡಾನೆಗಳ ದಾಳಿಯಿಂದ ರೈತರ ತೆಂಗಿನ ಮರಗಳು ನಾಶವಾಗಿರುವುದು
ಕಾಡಾನೆಗಳ ದಾಳಿಯಿಂದ ರೈತರ ತೆಂಗಿನ ಮರಗಳು ನಾಶವಾಗಿರುವುದು   

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದರು.

ಜಿಲ್ಲಾ ಅರಣ್ಯ ಇಲಾಖೆ ಕಚೇರಿ ಮುಂಭಾಗ ಜಮಾಯಿಸಿದ ಗ್ರಾಮಸ್ಥರು, 9 ವರ್ಷಗಳಿಂದ ನಿರಂತರ ಆನೆ ದಾಳಿಗೆ ತುತ್ತಾಗುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಬಿ.ವಿ.ಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಆನೆ ದಾಳಿ ಹೆಚ್ಚಾಗಿದೆ. ಇದರಿಂದಾಗಿ ಕೈಗೆ ಬಂದಿರುವ ಫಸಲು ಸಂಪೂರ್ಣ ನಾಶವಾಗುತ್ತಿದೆ. ಹಿಂಡು ಹಿಂಡಾಗಿ ಆಗಮಿಸುವ ಆನೆಗಳು ಹೊಲದಲ್ಲಿನ ತೆಂಗಿನ ಮರ ಹಾಗೂ ಬಾಳೆಗೊನೆಗಳನ್ನು ನಾಶ ಮಾಡಿ ತೆರಳುತ್ತಿದೆ. ಹೀಗಾಗಿ ರೈತ ಬೆಳೆದಿದ್ದ ಫಸಲು ಆನೆ ಕಾಲ್ತುಳಿತದಿಂದಾಗಿ ನಾಶವಾಗುತ್ತಿದೆ ಎಂದು ಹೇಳಿದರು.

ADVERTISEMENT

ಆನೆ ದಾಳಿಯಿಂದಾಗಿ 120ಕ್ಕೂ ಹೆಚ್ಚು ತೆಂಗಿನ ಮರ ಬಾಳೆಗೊನೆಗಳು, ಶುಂಠಿ ಮತ್ತು ಟೊಮೆಟೊ ಗಿಡಗಳು ನಾಶವಾಗಿದೆ. ಕಳೆದವಾರ ಆನೆದಾಳಿಂದಾಗಿ ಕೈಗೆ ಬಂದಿದ್ದ ಶುಂಠಿ ಸಂಪೂರ್ಣ ಮಣ್ಣುಪಾಲಾಗಿವೆ. ಇದೇ ರೀತಿ ಮುಂದುವರೆದರೆ ರೈತರು ಸಂಪೂರ್ಣ ನಾಶವಾಗಲಿದ್ದಾರೆ. ಇದಕ್ಕು ಮುನ್ನಾ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿ ಪ್ರದರ್ಶಿಸಿ ಆನೆ ದಾಳಿ ತಡೆಗಟ್ಟುವುದರ ಜತೆಗೆ, ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸ್ಥಳೀಯ ರೈತ ಕುಳ್ಳಪ್ಪ, ‘ಬಿ.ವಿ.ಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ 9 ವರ್ಷಗಳಿಂದಲೂ ನಿರಂತರವಾಗಿ ಆನೆ ದಾಳಿ ನಡೆಯುತ್ತಲೇ ಬರುತ್ತಿದೆ. ದಾಳಿಯಿಂದಾಗಿ ರೈತರಿಗೆ ಇಲಾಖೆ ನೀಡುವ ಪರಿಹಾರ ಹಣ ಸಾಲುತ್ತಿಲ್ಲ. 25 ತೆಂಗಿನ ಮರ ನಾಶವಾಗಿದ್ದಕ್ಕೆ ಕೇವಲ ₹6 ಸಾವಿರ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆನೆ ದಾಳಿಗೆ ತುತ್ತಾದ ಸ್ಥಳವನ್ನು ಪರಿಶೀಲನೆ ನಡೆಸಲು ಇಲಾಖೆ ಸಿಬ್ಬಂದಿಯನ್ನು ಕಳುಹಿಸಿದ್ದರು. ಈ ವೇಳೆ ಗ್ರಾಮಸ್ಥರು, ಸಿಬ್ಬಂದಿಯನ್ನು ಪ್ರಶ್ನಿಸಿ, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಆಗಮಿಸಬೇಕು ಎಂದು ಆಗ್ರಹಿಸಿದ್ದರು. ಇಂತಹ ಸಮಯದಲ್ಲಿಯೂ ಹಿರಿಯ ಅಧಿಕಾರಿಗಳು ಉದಾಸೀನ ತೋರಿಸಿದ್ದರು. ಇದೇ ಪರಿಸ್ಥಿತಿ ಕಳೆದ ಎರಡು ದಿನದ ಹಿಂದೆಯೂ ನಡೆದಿತ್ತು. ಪೊಲೀಸರೊಂದಿಗೆ ಬಂದ ಅಧಿಕಾರಿಗಳು ರೈತರ ಮೇಲೆ ಕೇಸು ದಾಖಲಿಸುವುದಾಗಿ ಬೆದರಿಸಿದ್ದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಒಟ್ಟಾಗಿ ಅಧಿಕಾರಿಗಳನ್ನು ಪ್ರಶ್ನಿಸಿದ್ದ ಕಾರಣಕ್ಕೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಬಿ.ವಿ.ಹಳ್ಳಿ ಗ್ರಾಮದ ರೈತರಾದ ಟಿ.ನಾಗೇಶ್, ಶಿವಮಲ್ಲೇಗೌಡ ಜಯಶಾಮಣ್ಣ, ಶಿವಮಲಣ್ಣ, ಪ್ರವೀಣ, ಜೊಮದೇಗೌಡ, ಶ್ರೀನಿವಾಸ್, ಚಂದ್ರು, ಧನಂಜಯ್, ಲೋಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.