
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆಗಳ ನಡುವಣ ಸಂಘರ್ಷಕ್ಕೆ ಕೊನೆ ಇಲ್ಲದಂತಾಗಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಹಾರೋಹಳ್ಳಿಯಲ್ಲಿ ರೈತರೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು ಸೇರಿದಂತೆ, 2025ನೇ ವರ್ಷದಲ್ಲಿ ಮೂವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಆನೆಗಳ ಆವಾಸ ಸ್ಥಾನವೂ ಆಗಿರುವ ಜಿಲ್ಲೆಯಲ್ಲಿ ಕಳೆದ 14 ವರ್ಷಗಳಲ್ಲಿ 48 ಮಂದಿ ಕಾಡಾನೆಗಳಿಗೆ ಬಲಿಯಾಗಿದ್ದಾರೆ. ಆಹಾರ ಅರಸಿ ಕಾಡಂಚಿನ ಜಮೀನಿಗೆ ಬರುವ ಹಾಗೂ ಅರಣ್ಯ ಪ್ರದೇಶದಲ್ಲಿರು ರಸ್ತೆಯಲ್ಲಿ ಸಂಚರಿಸುವಾಗ ಎದುರಾದ ಆನೆಗಳಿಂದಾದ ದಾಳಿಗೆ ಇದುವರೆಗೆ 149 ಮಂದಿ ಗಾಯಗೊಂಡಿದ್ದಾರೆ.
ಇಟಿಎಫ್ ಸಿಬ್ಬಂದಿಯೂ ಸಾವು: ಕಾಡಾನೆ ದಾಳಿಯಿಂದಾಗಿ ಈ ವರ್ಷ ಮೂವರು ಜೀವ ಕಳೆದುಕೊಂಡಿದ್ದಾರೆ. ಅದರಲ್ಲಿ ಇಬ್ಬರು ರೈತರು. ಉಳಿದ ಒಬ್ಬರು ಅರಣ್ಯ ಇಲಾಖೆಯ ಆನೆ ಕಾರ್ಯಪಡೆಯ ಸಿಬ್ಬಂದಿ ಎಂಬುದು ಗಮನಾರ್ಹ. ಅರಣ್ಯದಂಚಿನಲ್ಲಿರುವ ಜನರಷ್ಟೇ ಅಲ್ಲದೆ, ಆನೆಗಳನ್ನು ಹಿಮ್ಮೆಟ್ಟಿಸುವ ಸಿಬ್ಬಂದಿ ಜೀವ ರಕ್ಷಣೆ ಇಲ್ಲದಂತಾಗಿದೆ.
ಅಂದಹಾಗೆ, ಮೂರು ಜೀವಗಳನ್ನು ಬಲಿ ಪಡೆದ ಕಾಡಾನೆ ದಾಳಿ ಪೈಕಿ ಒಂದು ಬನ್ನೇರುಘಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹಾಗೂ ಉಳಿದೆರಡು ಬೆಂಗಳೂರು ದಕ್ಷಿಣ ಜಿಲ್ಲಾ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಬನ್ನೇರುಘಟ್ಟ ಅರಣ್ಯ ಪ್ರದೇಶ, ಕಾವೇರಿ ವನ್ಯಜೀವಿಧಾಮದ ಜೊತೆಗೆ ಬೆಟ್ಟಗುಡ್ಡಳಿಂದ ಆವೃತ್ತವಾಗಿರುವ ಅರಣ್ಯ ಪ್ರದೇಶವು ಕಾಡಾನೆಗಳ ಆವಾಸ ಸ್ಥಾನವಾಗಿದೆ.
ಕನಕಪುರದಲ್ಲೇ ಹೆಚ್ಚು: ಕಾವೇರಿ ವನ್ಯಜೀವಿಧಾಮದ ಜೊತೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಚಾಚಿಕೊಂಡಿರುವ ಕನಕಪುರ ತಾಲ್ಲೂಕಿನಲ್ಲೇ ಕಾಡಾನೆ ದಾಳಿ ಪ್ರಕರಣಗಳು ಹೆಚ್ಚು. ಜಿಲ್ಲೆಯಲ್ಲಿ ಕಳೆದ 7 ವರ್ಷಗಳಲ್ಲಿ ಕಾಡಾನೆಗಳ ದಾಳಿಯಿಂದ ಮೃತಪಟ್ಟಿರುವ 25 ಮಂದಿ ಪೈಕಿ, 21 ಮಂದಿ ಕನಪುರದವರೇ ಆಗಿದ್ದಾರೆ.
ಜಿಲ್ಲೆಯು ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು, ಹೆಚ್ಚಿನ ಅರಣ್ಯ ಪ್ರದೇಶವನ್ನು ಸಹ ಹೊಂದಿದೆ. ಗಡಿಭಾಗದಲ್ಲಿ ಕಾವೇರಿ ನದಿ, ಜಿಲ್ಲೆಯೊಳಗೆ ಅರ್ಕಾವತಿ, ವೃಷಭಾವತಿ, ಕಣ್ವ ನದಿಗಳು ಹರಿಯುತ್ತವೆ. ಇತ್ತೀಚೆಗೆ ಕೆರೆಗಳಿಗೆ ನೀರು ಹರಿಸಲಾಗಿದೆ.
ಜನವಸತಿ ಮತ್ತು ಕೃಷಿ ಪ್ರದೇಶಕ್ಕೆ ಹೊಂದಿಕೊಂಡಂತೆ ಅರಣ್ಯವಿರುವುದರಿಂದ ಕಾಡಾನೆಗಳು ಆಹಾರ ಅರಸಿ ಊರಿನತ್ತ ಬರುವುದು ಸಾಮಾನ್ಯವಾಗಿದೆ. ಈ ವೇಳೆ, ಕಾಡಾನೆ ದಾಳಿಗೆ ರೈತರು ಸಿಲುಕಿ ಸಾಯುವ ಮತ್ತು ಗಾಯಗೊಳ್ಳುವ ಘಟನೆಗಳು ಸಂಭವಿಸುತ್ತವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
ಕಾವೇರಿ ವನ್ಯಜೀವಿಧಾಮದ ಜೊತೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕಾಡಾನೆಗಳ ಆವಾಸಸ್ಥಾನ. ಅಲ್ಲಿಂದ ಜಿಲ್ಲೆಯ ಅರಣ್ಯಕ್ಕೆ ಬಂದಾಗ ಮರಳಿ ಕಾಡಿಗೆ ಓಡಿಸುತ್ತೇವೆ. ಅನಿವಾರ್ಯವಾದಾಗ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುತ್ತೇವೆ– ಎಂ. ರಾಮಕೃಷ್ಣಪ್ಪ ಡಿಸಿಎಫ್ ಬೆಂಗಳೂರು ದಕ್ಷಿಣ ಜಿಲ್ಲೆ
ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯ ದಾಟಿ ಕಾಡಾನೆಗಳು ನಾಡಿನತ್ತ ಹೋಗದಂತೆ ಈಗಾಗಲೇ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಉಳಿದೆಡೆಯೂ ಹಂತ ಹಂತವಾಗಿ ನಿರ್ಮಿಸಲಾಗುತ್ತಿದೆ– ನಾಗೇಂದ್ರ ಎಸಿಎಫ್ ಕಾವೇರಿ ವನ್ಯಜೀವಿಧಾಮ
ಈ ವರ್ಷ ಎಲ್ಲೆಲ್ಲಿ ಸಾವು?
* ಆ. 12: ಕನಕಪುರ ತಾಲ್ಲೂಕಿನ ಕಬ್ಬಾಳು ವ್ಯಾಪ್ತಿಯ ಕಂಚನಹಳ್ಳಿ ಅರಣ್ಯ ಪ್ರದೇಶದಲ್ಲಿ ಆ. 12ರಂದು ರೈತರ ಜಮೀನಿಗೆ ನುಗ್ಗಿದ್ದ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಸಂದರ್ಭದಲ್ಲಿ ಕಾಡಾನೆಯೊಂದು ನಡೆಸಿದ ದಾಳಿಗೆ ಆನೆ ಕಾರ್ಯಪಡೆ ಸಿಬ್ಬಂದಿ ಶ್ರೇಯಸ್ (20) ಮೃತಪಟ್ಟಿದ್ದರು. ಚನ್ನಪಟ್ಟಣದ ಎಲೆಕೇರಿಯ ಅವರು ಡಿಪ್ಲೊಮೊ ಮುಗಿಸಿ ಸಾತನೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಒಂದು ವರ್ಷದಿಂದ ಆನೆ ಕಾರ್ಯಪಡೆಯಲ್ಲಿ ಕೆಲಸ ಮಾಡುತ್ತಿದ್ದರು.
* ಅ. 29: ಹಾರೋಹಳ್ಳಿ ತಾಲ್ಲೂಕಿನ ಬನ್ನೇರುಘಟ್ಟ ಅರಣ್ಯದಲ್ಲಿ ದನ ಮೇಯಿಸುತ್ತಿದ್ದ ದೊಡ್ಡೂರು ಗ್ರಾಮ ರೈತ ವೆಂಕಟಾಚಲಯ್ಯ(65) ಅವರ ಮೇಲೆ ಕಾಡಾನೆ ದಾಳಿ ನಡೆಸಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಊರಿಗೆ ಹೊಂದಿಕೊಂಡಂತಿದ್ದ ಅರಣ್ಯದಂಚಿನಲ್ಲಿ ವೆಂಕಟಾಚಲಯ್ಯ ಬೆಳಿಗ್ಗೆ ದನ ಮೇಯಿಸುತ್ತಿದ್ದರು. ಆಗ ಏಕಾಏಕಿ ಬಂದ ಒಂಟಿ ಸಲಗವೊಂದು ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿತ್ತು. ಗ್ರಾಮದಂಚಿನಲ್ಲಿ ಕಾಣಿಸಿಕೊಂಡ ಆನೆಯನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಹೋಗಿ ಹುಡುಕಾಟ ನಡೆಸಿದಾಗ ವೆಂಕಟಚಾಲಯ್ಯ ಅವರ ಶವ ಸಿಕ್ಕಿತ್ತು.
* ಡಿ. 14: ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ಹೋಬಳಿಯ ದುನ್ನಸಂದ್ರ ಗ್ರಾಮದಲ್ಲಿ ಡಿ. 14ರಂದು ಬೆಳಿಗ್ಗೆ ತಮ್ಮ ಜಮೀನಿಗೆ ಹೋಗಿದ್ದ ಪುಟ್ಟಮಾದೇಗೌಡ ಅವರ ಮೇಲೆ ಕಾಡಾನೆ ದಾಳಿ ನಡೆಸಿ ತುಳಿದು ಸಾಯಿಸಿತ್ತು. ತಮ್ಮ ಮನೆಯಿಂದ ಅನತಿ ದೂರದಲ್ಲಿರುವ ಜಮೀನಿಗೆ ಬೆಳಿಗ್ಗೆ 5.30ರ ಸುಮಾರಿಗೆ ಪುಟ್ಟಮಾದೇಗೌಡ ಹೋಗಿದ್ದರು. ಈ ವೇಳೆ ಪಕ್ಕದ ಮಾವಿನ ತೋಟದಲ್ಲಿದ್ದ ಒಂಟಿಯಾನೆ ಏಕಾಏಕಿ ದಾಳಿ ನಡೆಸಿ ತುಳಿದು ಹಾಕಿದೆ. ದಾಳಿ ತೀವ್ರತೆಗೆ ಪುಟ್ಟಮಾದೇಗೌಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.