ADVERTISEMENT

ಕನಕಪುರ| ಪಾಳು ಬಾವಿಗೆ ಬಿದ್ದ ಕಾಡಾನೆ ಮರಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:09 IST
Last Updated 15 ಜನವರಿ 2026, 7:09 IST
ಕನಕಪುರ ತಾಲ್ಲೂಕಿನ ರಂಗಪ್ಪನದೊಡ್ಡಿ ಗ್ರಾಮದಲ್ಲಿ ಪಾಳುಬಾವಿಗೆ ಬಿದ್ದಿದ್ದ ಎರಡು ತಿಂಗಳ ಕಾಡಾನೆ ಮರಿ
ಕನಕಪುರ ತಾಲ್ಲೂಕಿನ ರಂಗಪ್ಪನದೊಡ್ಡಿ ಗ್ರಾಮದಲ್ಲಿ ಪಾಳುಬಾವಿಗೆ ಬಿದ್ದಿದ್ದ ಎರಡು ತಿಂಗಳ ಕಾಡಾನೆ ಮರಿ   

ಕನಕಪುರ (ರಾಮನಗರ): ತಾಲ್ಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೋಡಿಹಳ್ಳಿ ವನ್ಯಜೀವಿ ವಲಯದ ರಂಗಪ್ಪನದೊಡ್ಡಿ ಗ್ರಾಮದಲ್ಲಿ ಮಧ್ಯರಾತ್ರಿ ರಾತ್ರಿ ಪಾಳುಬಾವಿಗೆ ಬಿದ್ದಿದ್ದ ಎರಡು ತಿಂಗಳ ಕಾಡಾನೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.

ತಾಯಿ ಆನೆ, ಮರಿಯಾನೆ ಸೇರಿದಂತೆ ಮೂರು ಆನೆಗಳು ಬುಧವಾರ ರಾತ್ರಿ 2 ಗಂಟೆಗೆ ಅರಣ್ಯಕ್ಕೆ ಹೊಂದಿಕೊಂಡಂತಿರುವ ರಂಗಪ್ಪನದೊಡ್ಡಿಗೆ ಆಹಾರ ಅರಸಿ ಬಂದಿದ್ದವು. ಮನೆಯೊಂದಕ್ಕೆ ಹೊಂದಿಕೊಂಡಂತಿರುವ ಜಮೀನಿನಲ್ಲಿ ಆಹಾರ ಹುಡುಕುವಾಗ ಮರಿಯಾನೆ ಕತ್ತಲಲ್ಲಿ ಪಾಳುಬಾವಿಗೆ ಬಿದ್ದಿದೆ. ಬಾವಿಯಲ್ಲಿ ಕಡಿಮೆ ನೀರು ಇತ್ತು. ಹಾಗಾಗಿ ಆನೆ ಮರಿ ನೀರಿನಲ್ಲಿ ಮುಳುಗಿರಲಿಲ್ಲ.

ಬಾವಿಗೆ ಬಿದ್ದ ಮರಿಯನ್ನು ರಕ್ಷಿಸಲು ಉಳಿದೆರಡು ಆನೆಗಳು ಜೋರಾಗಿ ಘೀಳಿಡುತ್ತಿದ್ದವು. ಅದನ್ನು ಕೇಳಿ ಹೊರ ಬಂದ ಮನೆಯವರಿಗೆ ಮರಿಯಾನೆ ಬಾವಿಗೆ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಸ್ಥಳೀಯರು ಆನೆ ಕಾರ್ಯಪಡೆ (ಇಟಿಎಫ್‌) ನಿಯಂತ್ರಣ ಕೊಠಡಿಗೆ ಕರೆ ಮಾಡಿದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ADVERTISEMENT

‘ವಿಷಯ ತಿಳಿದು ಇಟಿಎಫ್ ಸಿಬ್ಬಂದಿ ಹಾಗೂ ಅಧಿಕಾರಿಗಳು ರಾತ್ರಿಯೇ ಸ್ಥಳಕ್ಕೆ ತೆರಳಿದೆವು. ಮೊದಲಿಗೆ ಎರಡು ದೊಡ್ಡ ಆನೆಗಳನ್ನು ಸ್ಥಳದಿಂದ ಸ್ವಲ್ಪ ದೂರಕ್ಕೆ ಓಡಿಸಿದೆವು. ಜೆಸಿಬಿ ತಂದು ಬಾವಿಯಲ್ಲಿದ್ದ ಮರಿಯಾನೆಯನ್ನು ಮೇಲಕ್ಕೆತ್ತಿ ರಕ್ಷಿಸಿ, ಅನತಿ ದೂರದಲ್ಲಿದ್ದ ತಾಯಿಯಾನೆ ಮಡಿಲಿಗೆ ಸೇರಿಸಲಾಯಿತು. ಕೆಲ ಹೊತ್ತು ಸ್ಥಳದಲ್ಲೇ ಇದ್ದ ಆನೆಗಳು, ಬಳಿಕ ಅರಣ್ಯದೊಳಕ್ಕೆ ಹೋದವು’ ಎಂದು ಅಧಿಕಾರಿಗಳು ಹೇಳಿದರು.

ರಾತ್ರಿ 2.30ರ ಸುಮಾರಿಗೆ ಶುರುವಾದ ಕಾರ್ಯಾಚರಣೆ ಬೆಳಗಿನ ಜಾವ 4 ಗಂಟೆವರೆಗೆ ನಡೆಯಿತು. ಆನೆಗಳು ಸುರಕ್ಷಿತವಾಗಿಯೇ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಬುಧವಾರ ಮಧ್ಯಾಹ್ನ ಆನೆಗಳು ಸಾಗಿದ ಮಾರ್ಗದಲ್ಲಿ ಇಟಿಎಫ್ ಸಿಬ್ಬಂದಿ ಡ್ರೋನ್ ಹಾರಿಸಿದರು. ಆಗ ಮರಿಯಾನೆ ಸೇರಿದಂತೆ ಮೂರೂ ಆನೆಗಳು ಒಟ್ಟಿಗೆ ಅರಣ್ಯದಲ್ಲಿ ಕ್ಷೇಮವಾಗಿರುವುದು ಖಚಿತವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಕೋಡಿಹಳ್ಳಿ ವಲಯ ಅರಣ್ಯಾಧಿಕಾರಿ ಅಂತೋಣಿ ರೇಗೊ, ಅರಣ್ಯ ರಕ್ಷಕರಾದ ಯತೀಶ್, ಶ್ರೀಕಾಂತ್, ವಾಹನ ಚಾಲಕ ರವಿ, ಅರಣ್ಯ ವೀಕ್ಷಕರಾದ ಮುತ್ತುರಾಜ್, ನಾಗೇಶ್ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.