
ಕನಕಪುರ ತಾಲ್ಲೂಕಿನ ಕೂನೂರು ಗ್ರಾಮದಲ್ಲಿರುವ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಮೃತಪಟ್ಟ ಎರಡು ಕಾಡಾನೆಗಳ ಕಳೇಬರ
ಕನಕಪುರ (ರಾಮನಗರ): ‘ರಾತ್ರಿ 8 ಗಂಟೆ ಸುಮಾರಿಗೆ ಮನೆ ಸಮೀಪ ದಬದಬನೇ ಹೋಗುವ ಸದ್ದು ಕೇಳಿತು. ಏನಿರಬಹುದು ಎಂದು ಸದ್ದು ಆಲಿಸಿ ಮನೆ ಹೊರಕ್ಕೆ ಬಂದೆವು. ಆಗ ಆನೆಗಳ ಹಿಂಡು ಮನೆ ಎದುರಿಗಿರುವ ಹಿನ್ನೀರಿನತ್ತ ಹೋದವು. ಅಧಿಕಾರಿಗಳು, ಆನೆ ಕಾರ್ಯಪಡೆ (ಇಟಿಎಫ್) ಸಿಬ್ಬಂದಿಯ ಜೋರು ಮಾತುಗಳು, ವಾಹನಗಳ ಶಬ್ದ ಕೇಳತೊಡಗಿತು. ಕೆಲ ಹೊತ್ತಿನಲ್ಲೇ ಸಿಬ್ಬಂದಿ ಮತ್ತು ಅಧಿಕಾರಿಗಳ ಗುಂಪು ಮನೆಯತ್ತ ಬಂತು. ಆನೆಗಳು ಇನ್ನೇನು ನೀರು ದಾಟಿ ಕಾಡಿಗೆ ಹೋಗುತ್ತವೆ ಎಂದು ಮಾತನಾಡಿಕೊಳ್ಳುತ್ತಿದ್ದರು...’
ತಾಲ್ಲೂಕಿನ ಕೂನೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಅರ್ಕಾವತಿ ನದಿಯ ಹಾರೋಬೆಲೆ ಜಲಾಶಯದ ಹಿನ್ನೀರಿಗೆ ನ. 7ರಂದು ರಾತ್ರಿ ಕಾಡಾನೆಗಳು ಇಳಿಯುವುದಕ್ಕೆ ಮುಂಚಿನ ಕ್ಷಣಗಳನ್ನು, ಕೂಗಳತೆ ದೂರದಲ್ಲಿರುವ ಮನೆಯವರು ಹಾಗೂ ಕೆಲ ಸ್ಥಳೀಯರು ‘ಪ್ರಜಾವಾಣಿ’ ಜೊತೆಗೆ ಹಂಚಿಕೊಂಡರು. ಆ ದಿನದ ಬೆಳವಣಿಗೆಗಳ ಜೊತೆಗೆ ಹೆಚ್ಚಾಗಿರುವ ಕಾಡಾನೆಗಳ ಹಾವಳಿ ಬಗ್ಗೆಯೂ ಅಳಲು ತೋಡಿಕೊಂಡರು.
‘ಆನೆಗಳು ಹಿನ್ನೀರು ದಾಟುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಕೆಲ ಸಿಬ್ಬಂದಿ, ಕತ್ತಲೆ ಹಾಗೂ ಕೊರೆಯುವ ಚಳಿ ಲೆಕ್ಕಿಸದೆ ರಾತ್ರಿ 12ರವರೆಗೆ ಬೀಡು ಬಿಟ್ಟಿದ್ದರು. ಬ್ಯಾಟರಿ ಲೈಟ್‌ಗಳನ್ನು ಬಿಟ್ಟು ಗಮನಿಸುತ್ತಿದ್ದರು. ಆನೆಗಳು ನೀರಿಗಿಳಿದಿದ್ದು ಬೆಳಿಗ್ಗೆ ಮತ್ತೆ ಬಂದು ನೋಡೋಣ ಎಂದುಕೊಂಡು ಸ್ಥಳದಿಂದ ಹೊರಟರು’ ಎಂದು ಮನೆಯ ಶಿವಕುಮಾರ್ ಹೇಳಿದರು.
ಸಾತನೂರು ಅರಣ್ಯ ವಲಯದ ಕಬ್ಬಾಳು ಪ್ರದೇಶದಲ್ಲಿದ್ದ ಆನೆಗಳನ್ನು ಅಚ್ಚಲು ಅರಣ್ಯದ ಮೂಲಕ, ಎಂದಿನಂತೆ ಬನ್ನೇರುಘಟ್ಟ ಅರಣ್ಯಕ್ಕೆ ಓಡಿಸಲು ಇಟಿಎಫ್ ಕಾರ್ಯಾಚರಣೆ ಕೈಗೊಂಡಿತ್ತು. ಕೂನೂರು ಬಳಿಯ ಅರಣ್ಯ, ಜಮೀನುಗಳನ್ನು ದಾಟಿದ ಆನೆಗಳು ರಸ್ತೆ ದಾಟಿ ಹಿನ್ನೀರಿಗೆ ಬಂದಿದ್ದವು. ಈಜಿ ದಡ ಸೇರುವ ಆನೆಗಳು, ನಂತರ ಕೆರಳಾಳುಸಂದ್ರ ಗುಡ್ಡದ ಮಾರ್ಗವಾಗಿ ತಮ್ಮ ಆವಾಸಸ್ಥಾನವಾದ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ ಬಿಳಿಕಲ್ ಕಾಡಿಗೆ ಹೋಗುವುದು ಸಾಮಾನ್ಯವಾಗಿದೆ.
ಕೈ ಕೊಟ್ಟಿದ್ದ ಬ್ಯಾಟರಿ: ಕಾರ್ಯಾಚರಣೆ ಸಂದರ್ಭದಲ್ಲಿ ಆನೆಗಳ ಹಿಂಡು ನಿರ್ದಿಷ್ಟ ಸ್ಥಳಗಳಲ್ಲೇ ಹೋಗುವಂತೆ ಮಾಡಲು ಸಾಧ್ಯವಿಲ್ಲ. ಅವುಗಳೇ ಹೋಗಿ ಬರುವ ಮಾರ್ಗವನ್ನು ಅರಣ್ಯದಲ್ಲಿ ಕಂಡುಕೊಂಡಿರುತ್ತವೆ. ಆ ಮಾರ್ಗದ ಅಕ್ಕಪಕ್ಕದ ಸಿಗುವ ಬೆಳೆಗಳನ್ನು ತಿನ್ನುತ್ತವೆ. ನಾವು ಕಾರ್ಯಾಚರಣೆ ಶುರು ಮಾಡಿದಾಗ 7 ಆನೆಗಳ ಪೈಕಿ ಒಂದು ಅಚ್ಚಲು ಅರಣ್ಯದಲ್ಲೇ ತಪ್ಪಿಸಿಕೊಂಡಿತು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಕಾರ್ಯಾಚರಣೆ ಮೂಲಕ 6 ಆನೆಗಳ ಹಿಂಡು ಕೂನೂರು ಕಡೆ ಬಂತು. ಅದರಲ್ಲಿ 4 ಆನೆಗಳು ಒಂದು ಕಡೆ ಹಾಗೂ 2 ಆನೆ ಮತ್ತೊಂದು ಕಡೆ ನೀರಿಗಿಳಿದ್ದಿದ್ದು ಥರ್ಮಲ್ ಡ್ರೋನ್‌ನಿಂದ ಗೊತ್ತಾಯಿತು. ಕಾರ್ಯಾಚರಣೆ ಸಂದರ್ಭದಲ್ಲಿ ಅಲ್ಲಲ್ಲಿ ಡ್ರೋನ್ ಬಳಸಿದ್ದರಿಂದ ಅದರ ಬ್ಯಾಟರಿ ಕೆಲ ಹೊತ್ತಿನಲ್ಲೇ ಮುಗಿದಿತ್ತು’ ಎಂದು ಕನಕಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಚೈತ್ರಾ ತಿಳಿಸಿದರು.
‘ಮಾರನೇಯ ದಿನ (ನ. 8) ಸಿಬ್ಬಂದಿ ಸ್ಥಳದಲ್ಲಿ ಆನೆಗಳು ಸಾಗಿದ ಮಾರ್ಗ ಪರಿಶೀಲಿಸಿದಾಗ, 2 ಈಜಿ ದಡ ಸೇರಿರುವುದು ಹಾಗೂ ಇನ್ನೆರಡು ನೀರಿಗೆ ಸ್ವಲ್ಪ ಮಾತ್ರ ಇಳಿದು ಹಿಂದಕ್ಕೆ ಬಂದಿರುವುದು ಗಮನಕ್ಕೆ ಬಂದಿದೆ. ಉಳಿದೆರಡು ಎಲ್ಲಿ ಹೋಗಿವೆ ಎಂಬುದನ್ನು ಪತ್ತೆ ಹಚ್ಚಲು ಸಿಬ್ಬಂದಿ ಸುತ್ತಮುತ್ತ ಹುಡುಕಿದ್ದರೂ ಸುಳಿವು ಸಿಕ್ಕಿರಲಿಲ್ಲ. ಮಾರನೇಯ ದಿನ (ನ. 9ರ) ಸ್ಥಳೀಯ ರೈತರು ನದಿ ಮಧ್ಯೆ ಆನೆಗಳ ಕಳೇಬರ ತೇಲುತ್ತಿರುವುದನ್ನು ಇಲಾಖೆಯ ಸಿಬ್ಬಂದಿಯ ಗಮನಕ್ಕೆ ತಂದರು’ ಎಂದು ಹೇಳಿದರು.
ಆನೆಗಳ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಘಟನಾ ಸ್ಥಳದ ಆಸುಪಾಸು ಆನೆಗಳು ದಾಟುವ ಜಾಗವೂ ಹೌದು. ಹಾಗಾಗಿಯೇ, ಈ ಆರೋಪವನ್ನು ಅರಣ್ಯ ಇಲಾಖೆ ಸ್ಪಷ್ಟವಾಗಿ ಅಲ್ಲಗಳೆದಿದೆ. ಸ್ಥಳೀಯರು ಸಹ ಆನೆಗಳ ಎಂದಿನಂತೆ ಈ ಮಾರ್ಗದಲ್ಲೇ ಹೋಗುತ್ತವೆ. ಅಲ್ಲದೆ, ಇಲ್ಲಿಂದ ಅರ್ಧ ಕಿ.ಮೀ. ದೂರವಿರುವ ಮತ್ತೊಂದು ಜಾಗದಲ್ಲೂ ದಾಟುತ್ತವೆ ಎಂದು ಸ್ಥಳೀಯರಾದ ವೀರಪ್ಪ, ವೀರಭದ್ರಪ್ಪ ತಿಳಿಸಿದರು.
ಗುಂಪಿನಲ್ಲಿರುವ ಆನೆಗಳನ್ನು ಕಾರ್ಯಾಚರಣೆ ಸಂದರ್ಭದಲ್ಲಿ ದಾರಿ ತಪ್ಪಿಸಲು ಸಾಧ್ಯವಿಲ್ಲ. ಅವುಗಳು ಎಂದಿನಂತೆ ತಮ್ಮ ಮಾರ್ಗದ್ಲಲಿ ಸಾಗುವಾಗ ಗುಂಪು ಚದುರದಂತೆ ಇಟಿಎಫ್ ನಿಗಾ ವಹಿಸಿ ಆನೆಗಳು ತಮ್ಮ ಮಾರ್ಗದಲ್ಲೇ ಅರಣ್ಯ ಸೇರುವಂತೆ ಮಾಡುತ್ತದೆ– ಪ್ರಭಾಸ್‌ಚಂದ್ರ ರೇ ಪಿಸಿಸಿಎಫ್ ಅರಣ್ಯ ಇಲಾಖೆ (ವನ್ಯಜೀವಿ ವಲಯ)
ಆನೆಗಳ ಹಿಂಡು ಪ್ರತ್ಯೇಕವಾಗಿ ಒಂದೊಂದು ಕಡೆ ಹಿನ್ನೀರಿಗೆ ಇಳಿದಿವೆ. ಅದರಲ್ಲಿ ಎರಡು ಹೊಸದಾಗಿ ಹಿಂಡಿನೊಂದಿಗೆ ಬಂದಿದ್ದವು. ಅವುಗಳೇ ಪ್ರತ್ಯೇಕ ಜಾಗದಲ್ಲಿ ಹಿನ್ನೀರಿಗೆ ಇಳಿದು ಕಳೆಗಳ ಮಧ್ಯೆ ಸಿಲುಕಿ ಮುಳುಗಿ ಮೃತಪಟ್ಟಿವೆ– ರಾಮಕೃಷ್ಣಪ್ಪ ಡಿಸಿಎಫ್ ಬೆಂಗಳೂರು ದಕ್ಷಿಣ ಜಿಲ್ಲೆ
ದಂತ ಸೊಂಡಿಲಿಗೆ ಸುತ್ತಿಕೊಂಡಿದ್ದ ಕಳೆ
‘ಆಳವಾಗಿರುವ ಹಿನ್ನೀರಿನ ಜಾಗದಲ್ಲಿ ನೀರಿಗಿಳಿದಿದ್ದ ಎರಡೂ ಆನೆಗಳು ಈಜಿಕೊಂಡು ಸ್ವಲ್ಪ ಮುಂದಕ್ಕೆ ಹೋಗಿವೆ. ಆಗ ನೀರಿನಲ್ಲಿದ್ದ ಕಳೆಯು ಆನೆಗಳ ದಂತ ಸೊಂಡಿಲು ಹಾಗೂ ಕಾಲಿಗೆ ಸುತ್ತಿಕೊಂಡಿದೆ. ಸೊಂಡಿಲಿನಿಂದ ಬಿಡಿಸಿಕೊಳ್ಳಲು ಯತ್ನಿಸಿದಾಗ ಹಗ್ಗದಂತೆ ಉದ್ದವಾಗಿರುವ ಕಳೆ ಮತ್ತಷ್ಟು ಸುತ್ತಿಕೊಂಡಿದೆ. ಉಸಿರಾಟಕ್ಕೂ ತೊಂದರೆಯಾಗಿದ್ದರಿಂದ ಈಜಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿವೆ. ಆನೆಗಳನ್ನು ಹೊರತೆಗೆಯುವಾಗ ಆವುಗಳ ದಂತ ಸೊಂಡಿಲು ಹಾಗೂ ಕಾಲುಗಳಲ್ಲಿ ಕಳೆ ಸುತ್ತಿಕೊಂಡಿತ್ತು ’ ಎಂದು ಎಸಿಎಫ್ ಚೈತ್ರಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.