ADVERTISEMENT

ಹಾರೋಹಳ್ಳಿ: ಆನೆ ದಾಳಿಗೆ ಬಾಳೆ, ಅಡಿಕೆ, ತೆಂಗು ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:29 IST
Last Updated 24 ಜನವರಿ 2026, 6:29 IST
ಆನೆಗಳು ತೆಂಗು ಬೆಳೆ ನಾಶಪಡಿಸಿರುವುದು 
ಆನೆಗಳು ತೆಂಗು ಬೆಳೆ ನಾಶಪಡಿಸಿರುವುದು    

ಹಾರೋಹಳ್ಳಿ: ತಾಲ್ಲೂಕಿನ ಯಲಚವಾಡಿ ಗ್ರಾಮದಲ್ಲಿ ರೈತರ ಬೆಳೆಯನ್ನು ಆನೆಗಳ ಹಿಂಡು ನಾಶಪಡಿಸಿವೆ. ರಾತ್ರಿ ಸಮಯದಲ್ಲಿ ನಡೆದ ಈ ಘಟನೆಯಲ್ಲಿ ಬಾಳೆ, ತೆಂಗು ಮತ್ತು ಅಡಿಕೆ ಬೆಳೆ ಹಾಳಾಗಿದೆ.

ಕಿರಣ್ (ಕೆಂಚೇಗೌಡ) ಮತ್ತು ಪುಟ್ಟರಾಜು ಎಂಬ ರೈತರ ಒಟ್ಟು ಸುಮಾರು 2.17 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಆನೆಗಳು ತುಳಿದು ಹಾಕಿದ್ದರಿಂದ ಸುಮಾರು ₹10 ಲಕ್ಷ ನಷ್ಟ ಉಂಟಾಗಿದೆ.

ಕಳೆದ ನಾಲ್ಕು ದಿನಗಳಿಂದ ರಾತ್ರಿ ಹೊತ್ತು ಈ ದಾಳಿ ನಡೆಯುತ್ತಿದೆ. ರೈತರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ತಕ್ಷಣವೇ ಗಮನಹರಿಸಿ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  

ADVERTISEMENT

ಯಲಚವಾಡಿ ಗ್ರಾಮಕ್ಕೆ ರಾತ್ರಿ ವೇಳೆಯಲ್ಲಿ ನುಗ್ಗಿರುವ ಆನೆಗಳ ಹಿಂಡು ರೈತರು ಬೆಳೆದಿದ್ದ ಬಾಳೆ,ತೆಂಗು,ಅಡಿಕೆ ಬೆಳೆಗಳನ್ನು ತುಳಿದು ನಾಶಪಡಿಸಿವೆ.

ಹಾರೋಹಳ್ಳಿ ತಾಲೂಕಿನ ಯಲಚವಾಡಿ ಗ್ರಾಮದ ಕೆಂಚೇಗೌಡ(ಕಿರಣ್) 1.17ಎಕರೆಯಲ್ಲಿ ಬೆಳೆದಿದ್ದ ಬಾಳೆ,ಅಡಿಕೆ,20ತೆಂಗಿನ ಮರ, ಪುಟ್ಟರಾಜು ಎಂಬುವರಿಗೆ ಸೇರಿದ 1ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ,ತೆಂಗು ಆನೆಗಳ ಹಿಂಡು ತುಳಿದು ಹಾಕಿದ್ದು ರೈತರಿಗೆ ಒಟ್ಟು 10ಲಕ್ಷದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಬನ್ನೇರುಘಟ್ಟ ವಲಯ ಅರಣ್ಯ ಪ್ರದೇಶದ ಹತ್ತಿರದಲ್ಲೇ ಯಲಚವಡಿ ಗ್ರಾಮವಿದ್ದು ಆನೆಗಳ ಹಿಂಡು ಪದೇಪದೇ ದಾಳಿ ನಡೆಸಿ ರೈತರ ಜೀವ ಹಿಂಡುತ್ತಿವೆ. ವರ್ಷದ ಕೂಳಿಗಾಗಿ ಬೆಳೆದಿದ್ದ ಬೆಳೆಗಳನ್ನು ಆನೆಗಳ ಹಿಂಡು ಕ್ಷಣಾರ್ಧದಲ್ಲೇ ತಿಂದು ತೇಗುತ್ತಿವೆ. ತಿನ್ನುವುದಲ್ಲವೇ ಎಕರೆಗಟ್ಟಲೆ ಬೆಳೆಗಳನ್ನು ತುಳಿದು ನಾಶಪಡಿಸುತ್ತಿದ್ದು ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

೪ದಿನಗಳಿಂದಲೂ ನಿರಂತರ ದಾಳಿ; ಇನ್ನು ಯಲಚವಾಡಿ ಗ್ರಾಮದಲ್ಲಿ ಕಳೆದ ೪ದಿನಗಳಿಂದಲೂ ರಾತ್ರಿ ವೇಳೆ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಿರುವ ಆನೆಗಳ ಹಿಂಡು ರೈತರಿಗೆ ಇನ್ನಿಲ್ಲದ ಪರಿಪಾಟಲೆ ತಂದೊಡ್ಡಿವೆ ಹಸುಗಳಿಗಾಗಿ ಬೆಳೆದಿದ್ದ ಹುಲ್ಲು,ರಾಗಿ ಹುಲ್ಲಿನ ಮೆದೆ ಸೇರಿದಂತೆ ಇನ್ನಿತರೆ ಬೆಳೆಗಳನ್ನು ತುಳಿದು ನಾಶಪಡಿಸುತ್ತಿದ್ದು,ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬAಧವೇ ಇಲ್ಲ ಎಂಬAತೆ ವರ್ತಿಸುತ್ತಿದ್ದಾರೆ.

ಆನೆಗಳ ದಾಳಿಗೆ ಬೆಳೆ ಕಳೆದುಕೊಂಡಿರುವ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜೀವನದ ಜತೆ ಚೆಲ್ಲಾಟವಾಡುವ ಕೆಲಸ ಮಾಡುತ್ತಿದ್ದಾರೆ ಮೊದಲು ಅರಣ್ಯ ಇಲಾಖೆ ಅಧಿಕಾರಿಗಳ ವಿರುಧ್ಧ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕು. ರೈತರ ಕಾಳಜಿಯನ್ನು ಅಧಿಕಾರಿಗಳು ಮರೆತಿದ್ದಾರೆ ಮೊದಲೇ ಇಲಾಖೆ ನೀಡುವ ಪರಿಹಾರ ಅರೆಕಾಸಿನ ಮಜ್ಜಿಗೆ ಹೀಗಿರಬೇಕಾದರೆ ೫೦ ಬಾರಿ ಕಚೇರಿಗಳಿಗೆ ಅಲೆಯಬೇಕು, ಅಲೆದರೂ ಸರಿಯಾದ ಸಮಯಕ್ಕೆ ಪರಿಹಾರವೂ ಸಿಗುವುದಿಲ್ಲ. ರೈತರು ಬೆಳೆದ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದೇ ತಿಳಿಯುತ್ತಿಲ್ಲ ಜಿಲ್ಲಾಡಳಿತ ಇತ್ತ ಗಮನಹರಿಸಿ ಸೂಕ್ತ ಪರಿಹಾರ ಒದಗಿಸಿಕೊಡುವ ಕೆಲಸ ಮಾಡಬೇಕು ಎಂದು ಯಲಚವಾಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಾಳೆ ಬೆಳೆ ನಾಶಪಡಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.