ADVERTISEMENT

‘ಹೈನೋದ್ಯಮದಲ್ಲಿ ತೊಡಗಿ ಸಬಲತೆ ಸಾಧಿಸಿ’

ಕಲ್ಯ: ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 19:45 IST
Last Updated 12 ಸೆಪ್ಟೆಂಬರ್ 2019, 19:45 IST
ಮಾಗಡಿ ತಾಲ್ಲೂಕಿನ ಕಲ್ಯದಲ್ಲಿ ನೂತನ ಡೈರಿ ಕಟ್ಟಡ ಉದ್ಘಾಟಿಸಿ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು
ಮಾಗಡಿ ತಾಲ್ಲೂಕಿನ ಕಲ್ಯದಲ್ಲಿ ನೂತನ ಡೈರಿ ಕಟ್ಟಡ ಉದ್ಘಾಟಿಸಿ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು   

ಕಲ್ಯ(ಮಾಗಡಿ): ಹಾಲು ಉತ್ಪಾದಕರ ಸಹಕಾರ ಸಂಘ ಇದ್ದಲ್ಲಿ ಬಡತನ ಇರುವುದಿಲ್ಲ ಎಂದು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಕಲ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನ ವಿಎಸ್‌ಎಸ್‌ಎನ್‌ಗಳಲ್ಲಿ ರೈತರು ಪಡೆದಿದ್ದ ₹100 ಕೋಟಿ 12.ಲಕ್ಷದ 56 ಸಾವಿರ ಸಾಲಮನ್ನಾ ಆಗಿದೆ. ಹೈನುಗಾರಿಕೆಯಲ್ಲಿ ಶ್ರದ್ಧೆಯಿಂದ ತೊಡಗಬೇಕೆಂದು ಹೇಳಿದರು

ADVERTISEMENT

19ರಂದು ನಡೆಯುವ ಒಕ್ಕೂಟದ ಸಮಾರಂಭದಲ್ಲಿ ಸಿ.ರಾಜಣ್ಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌.ಅಶೋಕ್‌ ಮಾತನಾಡಿ, ‘ರಾಗಿ ಬೆಳೆಯುವುದರಿಂದ ಲಾಭವಿಲ್ಲ. ಹೈನೋದ್ಯಮದಿಂದ ಹಣ ಗಳಿಸಿ, ಜೀವನ ಉತ್ತಮಪಡಿಸಿಕೊಳ್ಳಬಹುದು. ನಮ್ಮ ದೊಡ್ಡಪ್ಪ ಎಚ್‌.ಜಿ.ಚೆನ್ನಪ್ಪ ಶಾಸಕರಾಗಿದ್ದರು. ನಮ್ಮ ಮನೆಯಲ್ಲಿ ಟಿ.ವಿ ಇರಲಿಲ್ಲ. ಸಹಕಾರಿ ಸಂಘಗಳು ಜನಪದ ವ್ಯವಹಾರ ಮಾಡಿ ರೈತರ ಬದುಕಿಗೆ ಪೂರಕವಾಗಿವೆ. ವಾಣಿಜ್ಯ ಬ್ಯಾಂಕ್‌ಗಳು ರೈತರಿಗೆ ಅನುಕೂಲ ಮಾಡುವಲ್ಲಿ ಗಾವುದ ದೂರದಲ್ಲಿವೆ. ಸಹಕಾರಿ ಸಂಘಗಳು ರೈತರ ಬಾಳಿನಲ್ಲಿ ಬೆಳಕು ಮೂಡಿಸಿವೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನ ಚಂದ್ರೇಗೌಡ ಮಾತನಾಡಿ, ಕಲ್ಯದಲ್ಲಿ ಹಾಲು ಉತ್ಪಾದಕರ ಸಂಘದ ಕಟ್ಟಡ ಕಟ್ಟಲು ಜಯಶಂಕರ್‌ ನಿವೇಶನ ನೀಡಿದ್ದಾರೆ. ಜುಟ್ಟನಹಳ್ಳಿಯಲ್ಲಿ 15 ವರ್ಷಗಳಿಂದ ಡೈರಿ ನಡೆಯುತ್ತಿದ್ದರೂ ಸ್ವಂತ ಕಟ್ಟಡ ಇಲ್ಲ. ದೊಂಬರಪಾಳ್ಯದಲ್ಲಿ 4 ಗುಂಟೆ ನಿವೇಶನ ಖರೀದಿಸಿ ಕಟ್ಟಡ ನಿರ್ಮಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ನಾರಾಯಣಪ್ಪ ಮಾತನಾಡಿ, ಗುಡ್ಡಗಾಡು ಪ್ರದೇಶ ಮಾಗಡಿ ತಾಲ್ಲೂಕಿನಲ್ಲಿ ನಿರುದ್ಯೋಗ ನಿವಾರಣೆಗೆ ಹೈನುಗಾರಿಕೆ ಸಹಕಾರಿಯಾಗಿದೆ ಎಂದರು.

ಸಂಘದ ಅಧ್ಯಕ್ಷ ಕೆ.ಬಿ.ಯೋಗೀಶ್‌ ಅಧ್ಯಕ್ಷತೆ ವಹಿಸಿದ್ದರು. ಮಾಗಡಿ ಶಿಬಿರದ ಉಪವ್ಯವಸ್ಥಾಪಕ ಡಾ.ಕೆ.ಸಿ.ಶ್ರೀಧರ್‌, ವಿಸ್ತರಣಾಧಿಕಾರಿ ಮಂಜುಳ, ಮುಖಂಡರಾದ ಎಂ.ಕೆ.ಧನಂಜಯ, ಬೆಳಗುಂಬದ ವಿಜಯಕುಮಾರ್‌, ಕಲ್ಯದ ಜಯಶಂಕರ್‌, ಬಸವನಪಾಳ್ಯದ ಕುಮಾರ್‌ ಗಾಂಧಿವೇಷಧಾರಿ ಭಗವಂತಯ್ಯ, ನಿವೃತ್ತ ನೌಕರ ಬಸವರಾಜು ಮಾತನಾಡಿದರು.

ಕಲ್ಯ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ಉಪಾಧ್ಯಕ್ಷೆ ಗೀತಾ, ನಿರ್ದೇಶಕರಾದ ಕೆ.ಎಂ.ಮಂಜುನಾಥ್‌, ಸಂಜೀವಯ್ಯ, ಕೆ.ಡಿ.ರಾಜಣ್ಣ, ಲೋಕೇಶ್‌, ಗಂಗರಾಜು, ಹೇಮರಾಜು, ಆರ್‌.ಟಿ.ಪೂರ್ಣಿಮಾ, ಕೆ.ಜಿ.ಗುರುಪ್ರಸಾದ್‌. ಮುಖ್ಯ ಕಾರ್ಯನಿರ್ವಾಹಕಿ ಗೀತಾ, ಹಾಲು ಪರೀಕ್ಷಕ ಹರ್ಷಿತ್‌.ಕೆ.ಆರ್‌ ಹಾಗೂ ಗ್ರಾಮಸ್ಥರು ಇದ್ದರು.ಸಾಮೂಹಿಕ ಅನ್ನದಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.