ADVERTISEMENT

ಪರಿಸರ ಪರಿಚಾರಕರ ಸಾಧನೆ ಪರಿಚಯಿಸಲು QR ಕೋಡ್‌: ಅರಣ್ಯ ಇಲಾಖೆ ವಿಶೇಷ ಪ್ರಯತ್ನ

ಓದೇಶ ಸಕಲೇಶಪುರ
Published 22 ಫೆಬ್ರುವರಿ 2025, 6:00 IST
Last Updated 22 ಫೆಬ್ರುವರಿ 2025, 6:00 IST
   

ರಾಮನಗರ: ರಾಮನಗರ ಜಿಲ್ಲೆಯು ರೇಷ್ಮೆ, ಚನ್ನಪಟ್ಟಣದ ಬೊಂಬೆ, ಜಾನಪದ ಕಲಾ ಸಂಪತ್ತಿನ ಸಿರಿ, ನದಿಬೆಟ್ಟಗಳ ಪ್ರಾಕೃತಿಕ ಸೊಬಗಿಗಷ್ಟೇ ಪ್ರಸಿದ್ಧಿಯಲ್ಲ. ಬದಲಿಗೆ ಸಾಲು ಮರಗಳನ್ನು ನೆಟ್ಟು ನಿಸ್ವಾರ್ಥವಾದ ಪರಿಸರ ಸೇವೆ ಮಾಡಿ ಜಗತ್ತಿನ ಗಮನ ಸೆಳೆದಂತಹ ಜಿಲ್ಲೆಯ ‘ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕ ಹಾಗೂ ಸಾಲುಮರದ ನಿಂಗಣ್ಣ ಅವರ ಕಾರಣಕ್ಕೂ ಖ್ಯಾತವಾಗಿದೆ.

ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಹುಲಿಕಲ್ ಗ್ರಾಮದ ತಿಮ್ಮಕ್ಕ ಹಾಗೂ ರಾಮನಗರ ತಾಲ್ಲೂಕಿನ ಅರೇಹಳ್ಳಿಯ ನಿಂಗಣ್ಣ ಅವರ ಪರಿಸರ ಪ್ರೇಮ ಹಾಗೂ ಕಾಳಜಿ ಜಗತ್ತಿಗೇ ಮಾದರಿಯಾದುದು. ಅವರ ಸಾಧನೆಯನ್ನು ಜನ ಕೇಳುವುದರ ಜೊತೆಗೆ, ಕಣ್ತುಂಬಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.

ಕ್ಯೂ ಆರ್ ಕೋಡ್‌: ‘ಸಾಲುಮರದ ತಿಮ್ಮಕ್ಕ ಮತ್ತು ಸಾಲುಮರದ ನಿಂಗಣ್ಣ ಅವರು ರಾಮನಗರ ಜಿಲ್ಲೆಯ ಹೆಮ್ಮೆಯ ಸಾಧಕರು. ಗಿಡಗಳನ್ನು ನೆಟ್ಟು ಹೆಮ್ಮರವಾಗಿಸಿ ಪರಿಸರ ಸಂರಕ್ಷಣೆಗೆ ಅವರು ನೀಡಿರುವ ಕೊಡುಗೆ ವಿಶಿಷ್ಟವಾದುದು. ಅಂತಹವರ ಕುರಿತು ಕೇವಲ ಕೇಳಿ ತಿಳಿದುಕೊಂಡರಷ್ಟೇ ಸಾಲದು. ಅದನ್ನು ಕಣ್ಣಾರೆ ಕಣ್ತುಂಬಿಕೊಳ್ಳುವ ಅವಕಾಶವನ್ನೂ ಒದಗಿಸಬೇಕೆಂಬ ಉದ್ದೇಶ ಅರಣ್ಯ ಇಲಾಖೆಯದ್ದು. ಅವರ ಸಾಧನೆಯನ್ನು ಪರಿಚಯಿಸುವ ಚಿತ್ರ ಹಾಗೂ ವಿಡಿಯೊ ಚಿತ್ರೀಕರಿಸಿ, ಅದನ್ನು ಕ್ಯೂ ಆರ್‌ ಕೋಡ್‌ನಲ್ಲಿ ಅಡಕವಾಗಿಸಲಾಗುವುದು’ ಎಂದು ಅರಣ್ಯ ಇಲಾಖೆಯ ರಾಮನಗರದ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕುಮಾರ್ ಎಸ್‌.ಆರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಹಾದು ಹೋಗಿರುವ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರ ಹೆದ್ದಾರಿಗಳ ಬದಿಗಳಲ್ಲಿ ಸಾಧಕರನ್ನು ಪರಿಚಯಿಸುವ ಕ್ಯು ಆರ್‌ ಕೋಡ್‌ ಅನ್ನು ಫ್ಲೆಕ್ಸ್ ಮಾಡಿ ಅಳವಡಿಸಲಾಗುವುದು. ಹೆದ್ದಾರಿಯಲ್ಲಿ ಸಾಗುವ ಸವಾರರು ಹಾಗೂ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಧಕರಿಬ್ಬರು ವಿಡಿಯೊ ಓಪನ್ ಆಗಲಿದೆ’ ಎಂದು ಹೇಳಿದರು.

ರಾಮನಗರ ಜಿಲ್ಲೆಯ ಹೆಮ್ಮೆಯ ಪರಿಸರ ಸಾಧಕರಾದ ಸಾಲುಮರದ ತಿಮ್ಮಕ್ಕ ಹಾಗೂ ಸಾಲುಮರದ ನಿಂಗಣ್ಣ ಅವರ ಸಾಧನೆಯನ್ನು ಚಿತ್ರೀಕರಿಸಿ ಕ್ಯೂ ಆರ್‌ ಕೋಡ್‌ ಮಾಡಿ ಪ್ರಚಾರ ಮಾಡುವ ಯೋಜನೆಯ ಸದ್ಯದಲ್ಲೇ ಕಾರ್ಯರೂಪಕ್ಕೆ ಬರಲಿದೆ
ಪ್ರಸನ್ನ ಕುಮಾರ್ ಎಸ್‌.ಆರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ವಿಭಾಗ ಅರಣ್ಯ ಇಲಾಖೆ ರಾಮನಗರ

ವಿಶ್ವದ ಗಮನ ಸೆಳೆದ ತಿಮ್ಮಕ್ಕ

ಮಾಗಡಿ ತಾಲ್ಲೂಕಿನ ಕುಗ್ರಾಮ ಹುಲಿಕಲ್‌ನ ತಿಮ್ಮಕ್ಕ ಮತ್ತು ಬಿಕ್ಕಲಚಿಕ್ಕಯ್ಯ ಬಡ ದಂಪತಿಗೆ ಮಕ್ಕಳಿರಲಿಲ್ಲ. ಆ ನೋವನ್ನು ಮರೆಯಲು ದಂಪತಿ ಮಾಡಿದ ಕಾಯಕ ಎಂತಹವರೂ ಸಹ ಹುಬ್ಬೇರಿಸುವಂತಹದ್ದು. ತಮ್ಮೂರಿನ ರಸ್ತೆ ಬದಿಯಲ್ಲಿ ದಂಪತಿ ಗಿಡಗಳನ್ನು ನೆಟ್ಟು ಅವುಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ದೂರದಿಂದ ಬಿಂದಿಗೆಯಲ್ಲಿ ನೀರು ತಂದು ಹಾಕಿ ಪೋಷಿಸಿದರು. ಹುಲಿಕಲ್‌ನಿಂದ ಕುದೂರುವರೆಗೆ ಅವರು ನೆಟ್ಟಿದ್ದ ಸಸಿಗಳು ಇಂದು ಹೆಮ್ಮರಗಳಾಗಿ ರಸ್ತೆಗೆ ನೆರಳಿನ ಆಸರೆಯಾಗಿವೆ. ಅವರ ಈ ಸಾಧನೆಯು ವಿಶ್ವದ ಗಮನ ಸೆಳೆಯಿತು. ರಾಜ್ಯ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ಸನ್ಮಾನಗಳು ಸಂದವು. ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಗೂ ತಿಮ್ಮಕ್ಕ ಭಾಜನರಾಗಿದ್ದಾರೆ. ಹುಲಿಕಲ್‌ ಗ್ರಾಮಕ್ಕೆ ಭೇಟಿ ನೀಡಿದರೆ ಅವರ ಸಾಧನೆಯ ದರ್ಶನವಾಗುತ್ತದೆ.

ಮರಗಳ ಪ್ರೇಮಿ ಸಾಲುಮರದ ನಿಂಗಣ್ಣ

ರಾಮನಗರ ತಾಲ್ಲೂಕಿನ ಅರೇಹಳ್ಳಿಯ ಸಾಲುಮರದ ನಿಂಗಣ್ಣ ಸಹ ಬಡತನದ ಹಿನ್ನೆಲೆಯ ಕುಟುಂಬದವರು. ಅನಕ್ಷರಸ್ಥರಾದ ಅವರು ಬಿರುಬಿಸಿಲಿನಿನ ತಮ್ಮೂರಿನ ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದರು. ಜೊತೆಗೆ ಊರಿನ ಅಕ್ಕಪಕ್ಕದ ಸರ್ಕಾರಿ ಜಾಗದಲ್ಲಿ ಸಸಿ ನೆಟ್ಟು ಹಸಿರ ನಗೆ ಚೆಲ್ಲುವಂತೆ ಮಾಡಿದರು. ಬದುಕಿಗಾಗಿ ಕೂಲಿ ಮಾಡುತ್ತಲೇ ಸಂಸಾರದ ನೊಗ ಸಾಗಿಸುವ ಜೊತೆಗೆ ಗಿಡಗಳಿಗೆ ನೀರು ಗೊಬ್ಬರ ಹಾಕಿ ಪಾಲನೆ ಮಾಡಿಕೊಂಡು ಬಂದರು. ಪತಿಯ ಕಾಯಕಕ್ಕೆ ಪತ್ನಿ ಸಾವಿತ್ರಮ್ಮ ಸಹ ಸಾಥ್ ನೀಡಿದರು. ಇದರ ಫಲವಾಗಿ ಅರೇಹಳ್ಳಿ - ಕೂನಮುದ್ದನಹಳ್ಳಿ ರಸ್ತೆ ಬದಿಗಳಲ್ಲಿ 900ಕ್ಕೂ ಹೆಚ್ಚು ಗಿಡಗಳು ಇಂದು ಮರಗಳಾಗಿ ರಸ್ತೆಗೆ ನೆರಳು ಒದಗಿಸುತ್ತಿವೆ. ಇವರ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ 2022ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವು ಸಂಘ–ಸಂಸ್ಥೆಗಳು ಸಹ ಇವರನ್ನು ಗೌರವಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.