
ರಾಮನಗರದ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯಲ್ಲಿ ನಿರ್ಗತಿಕ ಮಕ್ಕಳಿಗೆ ಉಚಿತವಾಗಿ ಆಧಾರ್ ಕಾರ್ಡ್ ವಿತರಿಸಲಾಯಿತು.
ರಾಮನಗರ: ‘ದೇಶದಲ್ಲಿ ಜನಿಸಿದ ಎಲ್ಲಾ ವರ್ಗದ ಜನರಿಗೂ ಸಮಾನ ನ್ಯಾಯ ದೊರಕಿಸಿಕೊಡಲು ಕಾನೂನುಗಳನ್ನು ರಚಿಸಲಾಗಿದೆ. ಜನರು ಕಾನೂನುಗಳ ನೆರವಿನ ಪ್ರಯೋಜನ ಪಡೆಯುವ ಮೂಲಕ, ತಮಗಾಗುವ ಅನ್ಯಾಯದ ವಿರುದ್ಧ ನಾಯ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಚ್. ಅಣ್ಣಯ್ಯ ಹೇಳಿದರು.
ನಗರದ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ವಕೀಲರ ಸಂಘ ಹಾಗೂ ಕಾಲೇಜಿನ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾನೂನಿನ ನೆರವು ಕೋರಿ ಬರುವವರಿಗೆ ಸಕಾಲದಲ್ಲಿ ಕಾನೂನಿನ ನೆರವು ನೀಡುವುದು ಪ್ರಾಧಿಕಾರ ರಚನೆಯ ಉದ್ದೇಶವಾಗಿದೆ. ಉಚಿತ ಕಾನೂನು ನೆರವಿನಡಿ ಮೂರು ಲಕ್ಷಕ್ಕಿಂತ ಕಡಿಮೆ ಆದಾಯವುಳ್ಳ ಜನರಿಗೆ ಉಚಿತ ಕಾನೂನಿನ ನೆರವು ನೀಡಲಾಗುವುದು’ ಎಂದು ತಿಳಿಸಿದರು.
‘ವಿದ್ಯಾ ಪ್ರಸಾರದಡಿ ನುರಿತ ವಕೀಲರ ಮೂಲಕ ಎಲ್ಲಾ ರೀತಿಯ ಕಾನೂನುಗಳ ಕುರಿತು ಪ್ರತಿ ಹಳ್ಳಿಯ ಜನರಿಗೂ ಕಾನೂನಿನ ಅರಿವು ಮೂಡಿಸಬೇಕು. ಜನತಾ ನ್ಯಾಯಾಲಯದ ಮೂಲಕ ಕುಟುಂಬದಲ್ಲಿನ ಸಂಬಂಧಗಳನ್ನು ಗಟ್ಟಿ ಮಾಡಿ ನೆಮ್ಮದಿಯ ಜೀವನ ನಡೆಸಲು ಜನರಿಗೆ ಕಾನೂನಿನ ಜಾಗೃತಿ ಮೂಡಿಸಬೇಕು’ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಸವಿತಾ ಪಿ.ಆರ್ ಮಾತನಾಡಿ, ‘ಬಡವರು, ನಿರ್ಗತಿಕರು, ದುರ್ಬಲ ವರ್ಗದ ಜನರಿಗೆ ಅನುಕೂಲ ಕಲ್ಪಿಸಿಕೊಡಲು ರಾಷ್ಟ್ರೀಯ ಕಾನೂನು ಜಾರಿ ಮಾಡಲಾಯಿತು.ಮಹಿಳೆಯರಿಗೆ, ಮಕ್ಕಳಿಗೆ, ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡದವರಿಗೆ, ವಿಶೇಷ ಚೇತನರಿಗೆ, ಕಾರ್ಮಿಕರಿಗೆ, ಮಾನವ ಕಳ್ಳ ಸಾಕಾಣಿಕೆಗೆ ಒಳಗಾದವರಿಗೆ ಸೇರಿದಂತೆ ಅಶಕ್ತರಿಗೆ ಉಚಿತ ಕಾನೂನು ನೆರವು ಸಿಗಲಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿರ್ಗತಿಕ ಮಕ್ಕಳಿಗೆ ಉಚಿತವಾಗಿ ಆಧಾರ್ ಕಾರ್ಡ್ ವಿತರಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ಶ್ರೀವತ್ಸ, ಉಪಾಧ್ಯಕ್ಷ ವಿ. ಚಂದ್ರಶೇಖರ್, ಕಾರ್ಯದರ್ಶಿ ತಿಮ್ಮೇಗೌಡ, ಖಜಾಂಚಿ ಮಂಜೇಶ್ ಗೌಡ ಆರ್.ಸಿ, ಸಂಪನ್ಮೂಲ ವ್ಯಕ್ತಿ ವಕೀಲ ವೆಂಕಟೇಶ್ ಬಿ.ಸಿ, ಎಂ.ಎಚ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್. ಚಂದ್ರಶೇಖರ್, ಎಂ.ಎಚ್. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಗಂಗರಾಜ ಕೆ.ಎಂ, ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ, ವಕೀಲರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.