ADVERTISEMENT

ಆನ್‌ಲೈನ್‌ನಲ್ಲಿ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆ!

ಜಿಲ್ಲಾ ಮಟ್ಟದಲ್ಲಿ ಪರೀಕ್ಷೆಗೆ ಮುಂದಾದ ಸಾರ್ವಜನಿಕ ಶಿಕ್ಷಣ ಇಲಾಖೆ l ಒಟ್ಟು 13,068 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 31 ಮೇ 2021, 2:31 IST
Last Updated 31 ಮೇ 2021, 2:31 IST
.
.   

ರಾಮನಗರ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಆನ್‌ಲೈನ್‌ ಮೊರೆ ಹೋಗಿದ್ದು, ಇಂದಿನಿಂದ ಜಿಲ್ಲಾಮಟ್ಟದ ಮೊದಲ ಪೂರ್ವಭಾವಿ ಪರೀಕ್ಷೆ ನಡೆಯಲಿದೆ.

ಸೋಮವಾರ ವಿದ್ಯಾರ್ಥಿಗಳು ಕನ್ನಡ ಭಾಷೆ ಪರೀಕ್ಷೆ ಬರೆಯಲಿದ್ದಾರೆ. ನಂತರದಲ್ಲಿ ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಆನ್‌ಲೈನ್‌ ಮಾಧ್ಯಮದ ಮೂಲಕ ಈ ಪರೀಕ್ಷೆಗಳಿಗೆ ಉತ್ತರಿಸಲಿದ್ದಾರೆ.

ಶಿಕ್ಷಣ ಇಲಾಖೆಯು ಈಗಾಗಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಒಳಗೊಂಡ ವಾಟ್ಸ್‌ಆ್ಯಪ್‌ ಗುಂಪುಗಳನ್ನು ರಚಿಸಿದೆ. ಈ ಗುಂಪುಗಳಿಗೆ ಪ್ರಶ್ನೆಪತ್ರಿಕೆಗಳು ರವಾನೆ ಆಗಲಿವೆ. ಮೊದಲ ಹಂತದಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ಬಿಇಒಗಳಿಗೆ ಪ್ರಶ್ನೆಪತ್ರಿಕೆ ತಲುಪಲಿದ್ದು, ಅಲ್ಲಿಂದ ಶಾಲಾ ಶಿಕ್ಷಕರ ವಾಟ್ಸ್‌ಆ್ಯಪ್‌ ಗುಂಪಿಗೆ ಹಾಗೂ ಶಾಲಾ ಮುಖ್ಯ ಶಿಕ್ಷಕರ ಮೂಲಕ ವಿದ್ಯಾರ್ಥಿ–ಪೋಷಕರ ಗುಂಪಿಗೆ ಈ ಪ್ರಶ್ನೆಪತ್ರಿಕೆ ರವಾನೆ ಆಗಲಿದೆ.

ADVERTISEMENT

ಮೊಬೈಲ್‌ನಲ್ಲಿ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿಕೊಳ್ಳಲಿರುವ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿಯೇ ಪರೀಕ್ಷೆ ಬರೆಯಲಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ 13,068 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 680 ವಿದ್ಯಾರ್ಥಿಗಳ ಬಳಿ ಆಂಡ್ರಾಯ್ಡ್ ಮೊಬೈಲ್ ಇಲ್ಲ. ಇಂತಹವರಿಗೆ ಸ್ಥಳೀಯ ಸ್ನೇಹಿತರ ಪತ್ರಿಕೆಯನ್ನೇ ನೋಡಿಕೊಂಡು ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಹೀಗೆ ಪರೀಕ್ಷೆ ಬರೆದ ಬಳಿಕ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳನ್ನು ತಮ್ಮ ಬಳಿಯೇ ಇರಿಸಿಕೊಳ್ಳಲಿದ್ದು, ಅದನ್ನು ಶಾಲೆ ಪುನಾರಂಭವಾದಾಗ ಮೌಲ್ಯಮಾಪನ ಮಾಡಲಾಗುತ್ತದೆ. ಪರೀಕ್ಷೆ ಬರೆದ ಬಳಿಕ ಸುರಕ್ಷಿತವಾಗಿ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳಬೇಕು ಎಂದು ಶಿಕ್ಷಕರು ಸಲಹೆ ನೀಡಿದ್ದಾರೆ.

ಜೂಮ್‌ ಮೀಟಿಂಗ್‌: ಪೂರ್ವಭಾವಿ ಪರೀಕ್ಷೆ ಸಂಬಂಧ ಜಿಲ್ಲಾ ಶಿಕ್ಷಣಾ ಇಲಾಖೆ ಅಧಿಕಾರಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಮಾಡಿದ್ದಾರೆ. ಜೂಮ್ ಆ್ಯಪ್‌ ಮೂಲಕ ಈ ಸಭೆಗಳು ನಡೆದಿದ್ದು, ಪೋಷಕರ ಅನುಮಾನಗಳನ್ನು ಬಗೆಹರಿಸಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.