ವಂಚನೆ (ಪ್ರಾತಿನಿಧಿಕ ಚಿತ್ರ)
ಚನ್ನಪಟ್ಟಣ: ಪೊಲೀಸ್ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕ ಯುವಕರಿಂದ ರೂ. 2.40 ಲಕ್ಷ ಹಣ ಸುಲಿಗೆ ಮಾಡಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ತಾಲ್ಲೂಕಿನ ಅಕ್ಕೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತಾಲ್ಲೂಕಿನ ಕಲ್ಲಾಪುರ ಗ್ರಾಮದ ಸುದೀಪ್ (35) ಹಾಗೂ ಮಳವಳ್ಳಿ ನಗರದ ಈದ್ಗಾ ಮೈದಾನದ ನಿವಾಸಿ ಇಮ್ರಾನ್ (30) ಬಂಧಿತ ಆರೋಪಿಗಳು. ಇವರಿಬ್ಬರು ತಾಲ್ಲೂಕಿನ ಕಲ್ಲಾಪುರ ಗ್ರಾಮದ ರವಿ ಹಾಗೂ ನಾಗೇಂದ್ರ ಎಂಬುವರಿಂದ ಹಣ ಪಡೆದು ಪೊಲೀಸ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು.
ನಮಗೆ ದೊಡ್ಡಮಟ್ಟದ ಪೊಲೀಸ್ ಅಧಿಕಾರಿಗಳ ಹಾಗೂ ದೊಡ್ಡದೊಡ್ಡ ರಾಜಕಾರಣಿಗಳ ಪರಿಚಯವಿದೆ ಎಂದು ಹೇಳಿ, ತಮ್ಮ ಮೊಬೈಲ್ ನಲ್ಲಿದ್ದ ಪೊಲೀಸ್ ಅಧಿಕಾರಿಗಳ ಫೋಟೋಗಳನ್ನು ತೋರಿಸಿ ನಂಬಿಸಿದ್ದಾರೆ. ಪೊಲೀಸ್ ಆಗುವ ಆಸೆ ಹೊತ್ತ ಯುವಕರಿಬ್ಬರು ಹಂತಹಂತವಾಗಿ ಹಣ ನೀಡಿದ್ದಾರೆ. ಇವರ ಬಳಿ ಹಣ ವಸೂಲಿ ಮಾಡಲು ಆರೋಪಿಗಳು ಪೊಲೀಸ್ ಸಮವಸ್ತ್ರ, ಬೆಲ್ಟ್, ಷೂ, ಲಾಟಿಗಳನ್ನು ತಂದು ಕೊಟ್ಟು ಕೆಲವೇ ದಿನಗಳಲ್ಲಿ ಕೆಲಸಕ್ಕೆ ಹೋಗಲು ಸಿದ್ಧರಾಗುವಂತೆಯೂ ತಿಳಿಸಿದ್ದಾರೆ.
ಆದರೆ ಹಣ ನೀಡಿ ಒಂದು ವರ್ಷ ಕಳೆಯುತ್ತಾ ಬಂದರೂ ಕೆಲಸದ ಪ್ರಮಾಣಪತ್ರ ಬಾರದೆ ಅನುಮಾನಗೊಂಡ ಯುವಕರು ಅವರನ್ನು ವಿಚಾರಿಸಿದಾಗ ಸೂಕ್ತ ಸ್ಪಂದನೆ ನೀಡಿಲ್ಲ. ನಂತರ ಯುವಕರು ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಅಕ್ಕೂರು ಪೊಲೀಸರು, ಇಬ್ಬರು ಆರೋಪಿಗಳ ವಿಳಾಸ ಪಡೆದು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.