
ಮಾಗಡಿ: ತಾಲ್ಲೂಕಿನ ವಿಠಲಪುರ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸತ್ತಿರುವವರ ಹೆಸರು ಬಳಸಿ ಜಮೀನು ನೋಂದಣಿ ಮಾಡಿಸಿಕೊಂಡಿರುವ ಘಟನೆ ನಡೆದಿದೆ.
ಈ ಸಂಬಂಧ ಮೂಲ ಜಮೀನಿನ ಮಾಲೀಕರ ಮಗ ಗೋವಿಂದರಾಜು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ನನ್ನ ತಂದೆ ಮುನಿವೆಂಕಟಯ್ಯ ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದು ಜಮೀನನ್ನು ಸಂಬಂಧವಿಲ್ಲದ ಬೇರೊಬ್ಬ ಮುನಿವೆಂಕಟಪ್ಪ ಎಂಬುವರು ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಕ್ರಯ ಮಾಡಿಸಿಕೊಂಡಿದ್ದಾರೆ. ಜಮೀನಿನ ಖಾತೆ, ಪಹಣಿ ತಂದೆ ಹೆಸರಿನಲ್ಲಿಯೇ ಇದೆ. ತಂದೆ ಮರಣ ಹೊಂದಿದ್ದು, ಕೆಲವು ವ್ಯಕ್ತಿಗಳು ಸೇರಿಕೊಂಡು ಮತ್ತೊಬ್ಬ ವೆಂಕಟರಮಣಯ್ಯ ಎಂಬುವರನ್ನು ಸೃಷ್ಟಿಸಿ ನಕಲಿ ದಾಖಲೆ ತಯಾರಿಸಿ ಇವರೇ ಮುನಿವೆಂಕಟಯ್ಯ ಎಂದು ತೋರಿಸಿ ಅವರ ಹೆಸರಿಗೆ ಖಾತೆ ಮಾಡಿಸಿದ್ದಾರೆ’ ಎಂದು ತಿಳಿಸಿದರು.
‘ಮಾಗಡಿ ಉಪ ನೋಂದಣಿ ಕಚೇರಿಯಲ್ಲಿ ತಂದಗೆ ಸೇರಿದ ಜಮೀನನ್ನು ಬೇರೊಬ್ಬರಿಗೆ ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಜಮೀನಿನನ್ನು ಖರೀದಿಸಿದ ವ್ಯಕ್ತಿ ತಾಲ್ಲೂಕು ಕಚೇರಿಯಲ್ಲಿ ಅವರ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಜಮೀನು ಖರೀದಿಸಿದ ವ್ಯಕ್ತಿಯನ್ನು ಕೇಳಿದಾಗ ನನಗೆ ಹಾಗೂ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜಮೀನಿನ ನೋಂದಣಿ ರದ್ದುಪಡಿಸುವಂತೆ ಸಂಬಂಧಪಟ್ಟ ಕಚೇರಿಗೆ ದೂರು ಸಲ್ಲಿಸಿದ್ದು, ಮಾಗಡಿ ಪೋಲಿಸ್ ಠಾಣೆಗೂ ದೂರು ಸಲ್ಲಿಸಿದ್ದೇನೆ ಎಂದು ಗೋವಿಂದರಾಜು ತಿಳಿಸಿದರು.
ತಾ.ಪಂ ಮಾಜಿ ಅಧ್ಯಕ್ಷ ಚಂದುರಾಯನಹಳ್ಳಿ ಕೃಷ್ಣ ಮಾತನಾಡಿ, ಕೆಲವು ವ್ಯಕ್ತಿಗಳು ಪ್ರಭಾವ ಬಳಸಿಕೊಂಡು ದಲಿತರ ಜಮೀನನ್ನು ಸತ್ತವರ ಹೆಸರಿನಲ್ಲಿ ಬೇರೆ ವ್ಯಕ್ತಿಯನ್ನು ತಂದು ಜಮೀನನ್ನು ಅನಧಿಕೃತವಾಗಿ ಖಾತೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಠಾಣೆಗೆ ದೂರು ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.