ಬಂಧನ
ಚನ್ನಪಟ್ಟಣ: ತಾಲ್ಲೂಕಿನ ಸಿಂಗರಾಜಪುರ ಗ್ರಾಮದ ಎರಡು ಮೆಡಿಕಲ್ ಸ್ಟೋರ್‌ಗಳಲ್ಲಿ ಮಂಗಳವಾರ ಅಧಿಕಾರಿಗಳು ಎಂದು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಮಹಿಳೆ ಸೇರಿ ನಾಲ್ವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ತುಂಗಾನಗರದ ಅಪ್ಪಣ್ಣಪ್ಪ ಬಡಾವಣೆಯ ಅರ್ಚನಾ (39), ಬೆಂಗಳೂರಿನ ಶಿವನಗರದ ನಿವಾಸಿ,ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿಯ ರವಿಶಂಕರ್ (45), ಹೊಸಗುಡ್ಡದಹಳ್ಳಿಯ ವಿಶ್ವನಾಥ್ ರಾಜೇ ಅರಸ್ (42), ಕಾರು ಚಾಲಕ ರೋಹಿತ್ (22) ಬಂಧಿತ ಆರೋಪಿಗಳು.
ತಮ್ಮನ್ನು ಭ್ರಷ್ಟಾಚಾರ ವಿರೋಧಿ ಹಾಗೂ ಮಾನವ ಹಕ್ಕುಗಳ ಪ್ರತಿಷ್ಠಾನ ಇಲಾಖೆಯ ಅಧಿಕಾರಿಗಳು ಎಂದು ನಕಲಿ ಗುರುತಿನ ಪತ್ರಗಳನ್ನು ತೋರಿಸಿ ಹಣ ವಸೂಲಿ ಮಾಡುತ್ತಿದ್ದರು.
ಈ ನಾಲ್ವರು ಕಾರಿನಲ್ಲಿ ಸಿಂಗರಾಜಪುರಕ್ಕೆ ತೆರಳಿ ಸಂಜು ಮೆಡಿಕಲ್ ಸ್ಟೋರ್ ಮಾಲೀಕರಿಗೆ ತಾವು ಭ್ರಷ್ಟಾಚಾರ ವಿರೋಧಿ ಹಾಗೂ ಮಾನವ ಹಕ್ಕುಗಳ ಪ್ರತಿಷ್ಠಾನ ಇಲಾಖೆ ಅಧಿಕಾರಿಗಳು ಎಂದು ಗುರುತು ಪತ್ರ ತೋರಿಸಿದ್ದಾರೆ. ನಂತರ ಅಂಗಡಿಯ ಅನುಮತಿ ಪತ್ರ ಸೇರಿದಂತೆ ವಿವಿಧ ದಾಖಲೆ ತೋರಿಸಲು ಹೇಳಿದ್ದಾರೆ. ಸೂಕ್ತ ದಾಖಲೆ ಇಲ್ಲ ಎಂದು ₹15 ಸಾವಿರ ದಂಡ ವಿಧಿಸಿದ್ದಾರೆ. ಕೊಡದಿದ್ದರೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾರೆ.
ಮೆಡಿಕಲ್ ಸ್ಟೋರ್ ಮಾಲೀಕ ಸಂಜಯ್ ಅವರು ಅಷ್ಟು ಹಣ ತಮ್ಮ ಬಳಿ ಇಲ್ಲ ಎಂದಾಗ ಸದ್ಯಕ್ಕೆ ₹2,500 ಕೊಡಿ. ಸಂಜೆ ₹10 ಸಾವಿರ ಫೋನ್ ಪೇ ಮಾಡು ಎಂದು ನಂಬರ್ ನೀಡಿದ್ದರು.
ನಂತರ ಸುಬ್ಬಣ್ಣ ಮೆಡಿಕಲ್ ಸ್ಟೋರ್‌ಗೆ ತೆರಳಿ ಅಲ್ಲಿಯೂ ಲೈಸನ್ಸ್ ಕೇಳಿದ್ದಾರೆ. ಅಲ್ಲಿಯೂ ಸೂಕ್ತ ದಾಖಲೆಗಳು ಇಲ್ಲ ಎಂದು ಬೆದರಿಸಿ ₹5 ಸಾವಿರ ಹಣ ಸುಲಿಗೆ ಮಾಡಲು ಮುಂದಾಗಿದ್ದಾರೆ. ಆಗ ಅಲ್ಲಿದ್ದ ಗ್ರಾಮಸ್ಥರು ಅನುಮಾನಗೊಂಡು ಪ್ರಶ್ನಿಸಲು ತೊಡಗಿದಾಗ ಉತ್ತರ ನೀಡಲು ತಡವರಿಸಿದ್ದಾರೆ. ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಗ್ರಾಮಸ್ಥರು ಅವರನ್ನು ಹಿಡಿದು ಅಕ್ಕೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಂಜು ಮೆಡಿಕಲ್ ಸ್ಟೋರಿನ ಮಾಲೀಕ ಸಂಜಯ್ ಅವರು ಅಕ್ಕೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ನಾಲ್ವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ನ್ಯಾಯಾಲಯ ಅವರನ್ನು ಪೊಲೀಸರ ವಶಕ್ಕೆ ನೀಡಿದೆ ಎಂದು ಅಕ್ಕೂರು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.