ADVERTISEMENT

ಸ್ಟೇಟ್ ಫಾರ್ಮರ್ ರಿಜಿಸ್ಟ್ರಿ: ಇ–ಕೆವೈಸಿಗೆ ಕಂಟಕವಾದ ಸರ್ವರ್‌ ಸಮಸ್ಯೆ

ನೋಂದಣಿಗೆ ಇಂದು ಕಡೆಯ ದಿನ; ಕೇಂದ್ರಗಳಲ್ಲಿ ರೈತರ ಪರದಾಟ; ದಿನಾಂಕ ವಿಸ್ತರಣೆಗೆ ಆಗ್ರಹ

ಓದೇಶ ಸಕಲೇಶಪುರ
Published 26 ಫೆಬ್ರುವರಿ 2026, 2:39 IST
Last Updated 26 ಫೆಬ್ರುವರಿ 2026, 2:39 IST
ರಾಮನಗರ ತಾಲ್ಲೂಕಿನ ಕೂಟಗಲ್‌ನಲ್ಲಿರುವ ನಾಡ ಕಚೇರಿಯಲ್ಲಿ ಇ–ಕೆವೈಸಿ ಮಾಡಿಸಲು ಬಂದಿದ್ದ ರೈತರು, ಸರ್ವರ್ ಸಮಸ್ಯೆಯಿಂದಾಗಿ ಸ್ಥಳದಲ್ಲೇ ಕುಳಿತಿದ್ದ ದೃಶ್ಯ ಕಂಡುಬಂತು
ರಾಮನಗರ ತಾಲ್ಲೂಕಿನ ಕೂಟಗಲ್‌ನಲ್ಲಿರುವ ನಾಡ ಕಚೇರಿಯಲ್ಲಿ ಇ–ಕೆವೈಸಿ ಮಾಡಿಸಲು ಬಂದಿದ್ದ ರೈತರು, ಸರ್ವರ್ ಸಮಸ್ಯೆಯಿಂದಾಗಿ ಸ್ಥಳದಲ್ಲೇ ಕುಳಿತಿದ್ದ ದೃಶ್ಯ ಕಂಡುಬಂತು   

ರಾಮನಗರ: ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಅಗ್ರಿಸ್ಟಾಕ್ ಘಟಕದಡಿ, ಭೂ ಹಿಡುವಳಿಗಳನ್ನು ಹೊಂದಿರುವ ರೈತರ ವಿವರ ದಾಖಲಿಸುವುದನ್ನು ಕೃಷಿ ಇಲಾಖೆ ಕಡ್ಡಾಯಗೊಳಿಸಿದೆ. ಆದರೆ, ಫ್ರೂಟ್ (ಸ್ಟೇಟ್ ಫಾರ್ಮರ್ ರಿಜಿಸ್ಟ್ರಿ) ತಂತ್ರಾಂಶದಲ್ಲಿ ರೈತರ ಇ–ಕೆವೈಸಿ ಮತ್ತು ಡಿಜಿಟಲ್ ಸಮ್ಮತಿ ಪ್ರಕ್ರಿಯೆಗೆ ಸರ್ವರ್ ಸಮಸ್ಯೆ ಎದುರಾಗಿದೆ.

ಇ–ಕೆವೈಸಿ ಮಾಡಿಸಲು ಗುರುವಾರ (ಫೆ. 26) ಕಡೆಯ ದಿನವಾಗಿದೆ. ಕೃಷಿ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಕಡ್ಡಾಯವಾಗಿರುವ ಈ ಪ್ರಕ್ರಿಯೆ ಮುಗಿಸಲು ರೈತರು ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖಾ ಕಚೇರಿಗಳಲ್ಲಿ ಸಾಲುಗಟ್ಟಿ ನಿಂತು ಕಾದು ಸಾಕಾಗಿದ್ದಾರೆ.

ಸಂಖ್ಯೆ ಸೃಜನೆ: ಸರ್ಕಾರದ ಮಾನದಂಡಗಳ ಪ್ರಕಾರ ಫ್ರೂಟ್ ಹಾಗೂ ಭೂಮಿಯ (ಲ್ಯಾಂಡ್ ರೆಕಾರ್ಡ್ಸ್ ಸಿಸ್ಟಮ್) ದತ್ತಾಂಶಗಳನ್ನು ನಿಯತವಾಗಿ ಸಿಂಕ್ರೋನೈಜ್ ಮಾಡುವುದು ಅತಿ ಮುಖ್ಯವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಕೇಂದ್ರ ಸರ್ಕಾರದಿಂದ ಒಂದು ಕೇಂದ್ರ ನೋಂದಾಯಿತ ರೈತರ ಸಂಖ್ಯೆ ಸೃಜಿಸಲಾಗುತ್ತದೆ.

ADVERTISEMENT

ನೋಂದಾಯಿತ ರೈತ ಸಂಖ್ಯೆಯನ್ನು ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸುವ ಪಿ.ಎಂ. ಕಿಸಾನ್ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳಲ್ಲೂ ಕಡ್ಡಾಯವಾಗಿ ಬಳಸಲಾಗುತ್ತದೆ. ಅದೇ ಕಾರಣಕ್ಕೆ ರೈತರು ಇ–ಕೆವೈಸಿಯನ್ನು ಮಾಡಿಸಲೇಬೇಕಾಗಿದೆ. ಇಲ್ಲದಿದ್ದರೆ ಸರ್ಕಾರದ ಸೌಲಭ್ಯಗಳು ಕೈ ತಪ್ಪಲಿವೆ.

‘ಪಹಣಿಯಲ್ಲಿರುವ ಹೆಸರುಗಳಲ್ಲಿ ವ್ಯತ್ಯಾಸವಾಗಿರುವುದು, ರೈತರು ಕೊಟ್ಟಿರುವ ಮೊಬೈಲ್ ಸಂಖ್ಯೆಯು ಬದಲಾಗಿರುವುದು ಅಥವಾ ಅಸ್ತಿತ್ವದಲ್ಲಿ ಇಲ್ಲದಿರುವಂತಹದ್ದು ಸೇರಿದಂತೆ ವಿವಿಧ ದೋಷಗಳು ಕಂಡುಬಂದಿವೆ. ಇದರಿಂದಾಗಿ, ಫಲಾನುಭವಿ ರೈತರಿಗೆ ಸೌಲಭ್ಯಗಳು ತಲುಪದೆ ಸಮಸ್ಯೆಯಾಗುತ್ತಿದೆ. ಅದನ್ನು ಸರಿಪಡಿಸಲು ಇ–ಕೆವೈಸಿ ಕಡ್ಡಾಯಗೊಳಿಸಲಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎನ್. ಅಂಬಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ದಿನಾಂಕ ವಿಸ್ತರಣೆಗೆ ಆಗ್ರಹ: ‘ಸರ್ಕಾರಿ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಇ–ಕೆವೈಸಿ ಪ್ರಕ್ರಿಯೆಗೆ ಕೇವಲ ಐದು ದಿನಗಳನ್ನು ಮಾತ್ರ ನೀಡಲಾಗಿದೆ. ಇದರ ನಡುವೆಯೇ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಸೇರಿದಂತೆ ಇಲಾಖೆಯ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದೆ. ಹಾಗಾಗಿ, ದಿನಾಂಕ ವಿಸ್ತರಣೆ ಮಾಡಬೇಕು’ ಎಂದು ರೈತ ಕೃಷ್ಣಪ್ಪ ಒತ್ತಾಯಿಸಿದರು.

‘ಕಡ್ಡಾಯ ಎನಿಸುವ ಇಂತಹ ಪ್ರಕ್ರಿಯೆಗಳನ್ನು ಮಾಡುವಾಗ ರೈತರಿಗೆ ಕನಿಷ್ಠ ಒಂದು ತಿಂಗಳ ಕಾಲಾವಕಾಶ ನೀಡಬೇಕು. ಅಲ್ಲದೆ, ಹೆಚ್ಚಿನ ಪ್ರಚಾರ ನಡೆಸಿ ಅರಿವು ಮೂಡಿಸಬೇಕು. ಆಗ ಮಾತ್ರ ಎಲ್ಲಾ ರೈತರು ಕಡ್ಡಾಯವಾಗಿ ಇ–ಕೆವೈಸಿ ಮಾಡಿಸಿಕೊಂಡು, ತಮಗೆ ಸಿಗಬೇಕಾದ ಸೌಲಭ್ಯ ಪಡೆಯುತ್ತಾರೆ. ಇಲ್ಲದಿದ್ದರೆ, ಸೌಲಭ್ಯಗಳು ಕೆಲವೇ ಮಂದಿಯ ಪಾಲಾಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

20 ನಿಮಿಷ ಬೇಕು: ಪ್ರತಿ ರೈತರ ಫ್ರೂಟ್ ಐಡಿಗೆ ಸಿಂಕ್ರೊನೈಜ್ ಮಾಡುವ ಪ್ರಕ್ರಿಯೆಗೆ ಸರ್ವರ್ ಸಮಸ್ಯೆಯಿಂದಾಗಿ ಕನಿಷ್ಠ 20 ನಿಮಿಷಗಳ ಕಾಲಾವಕಾಶ ಬೇಕಿದೆ. ಕೆಲವೊಮ್ಮೆ ಆಧಾರ್ ಕಾರ್ಡ್ ನಂಬರ್ ಸಲ್ಲಿಕೆ ಮಾಡಿ, ಓಟಿಪಿ ನೀಡಿದರೂ ನಿಧಾನಗತಿಯ ಸರ್ವರ್‌ನಿಂದಾಗಿ ಅದು ತಿರಸ್ಕೃತಗೊಂಡು ಕೆಲವರನ್ನು ಮನೆಗೆ ಕಳುಹಿಸಿದ ಘಟನೆಗಳು ಸಹ ನಡೆದಿವೆ.

ಇದೇ ಕಾರಣಕ್ಕೆ ರೈತರು ಗ್ರಾಮ ಒನ್, ರೈತ ಸಂಪರ್ಕ ಕೇಂದ್ರ ಸೇರಿದಂತೆ ಇಲಾಖೆಯ ಕಚೇರಿಗಳಲ್ಲಿ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸುವುದು ಸಾಮಾನ್ಯವಾಗಿದೆ. ಇ–ಕೆವೈಸಿ ಕಾರಣಕ್ಕಾಗಿ ದೂರದ ಊರುಗಳಿಂದ ಕೆಲಸ ಕಾರ್ಯ ಬಿಟ್ಟು ಬರುವ ರೈತರು, ಸರ್ವರ್ ಸಮಸ್ಯೆಯಿಂದಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ಹಿಂದಿರುಗುತ್ತಿದ್ದಾರೆ.

––––

ಜಿಲ್ಲೆಯಾದ್ಯಂತ ಸರ್ವರ್ ಸಮಸ್ಯೆ ತಲೆದೋರಿರುವುದರಿಂದ ಇ–ಕೆವೈಸಿ ಪ್ರಕ್ರಿಯೆಯ ದಿನಾಂಕವನ್ನು ಕೃಷಿ ಇಲಾಖೆ ಕೂಡಲೇ ವಿಸ್ತರಿಸಬೇಕು. ಇಲ್ಲದಿದ್ದರೆ ಬಹುತೇಕ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ

– ಸಿ. ಪುಟ್ಟಸ್ವಾಮಿ ಹಿರಿಯ ರೈತ ಮುಖಂಡ ಚನ್ನಪಟ್ಟಣ ತಾಲ್ಲೂಕು

ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಇ–ಕೈವೈಸಿಯನ್ನು ಇಷ್ಟೊಂದು ತರಾತುರಿಯಲ್ಲಿ ಮಾಡಿಸುವ ಅಗತ್ಯವೇನಿತ್ತು? ಈ ಕುರಿತು ರೈತರಿಗೆ ಜಾಗೃತಿ ಮೂಡಿಸಿದ ಬಳಿಕ ಹೆಚ್ಚಿನ ಕಾಲಾವಕಾಶ ನೀಡಿ ಮಾಡಿಸಬಹುದಿತ್ತಲ್ಲವೆ?

– ನಲ್ಲಹಳ್ಳಿ ಶ್ರೀನಿವಾಸ್ ರೈತ ಮುಖಂಡ ಕನಕಪುರ ತಾಲ್ಲೂಕು

ರೈತರು ತಮ್ಮ ಕೆಲಸಗಳನ್ನು ಬಿಟ್ಟು ಇ–ಕೆವೈಸಿಗಾಗಿ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ವಿವಿಧ ಇಲಾಖೆಗಳ ಕಚೇರಿ ಬಳಿ ಕಾಯುತ್ತಾ ಕೂರುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದಾಗಿ ಅಧಿಕಾರಿಗಳು ಸಹ ಅಸಹಾಯಕರಾಗಿದ್ದಾರೆ. ಹಾಗಾಗಿ ದಿನಾಂಕ ವಿಸ್ತರಿಸಬೇಕು

– ಕೃಷ್ಣಪ್ಪ ರೈತ ಸಂಘ ರಾಮನಗರ ತಾಲ್ಲೂಕು

––––

1.18 ಲಕ್ಷ ಪೈಕಿ ಆಗಿದ್ದು ಕೇವಲ 35 ಸಾವಿರ!

ಜಿಲ್ಲೆಯಾದ್ಯಂತ ಒಟ್ಟು 1.18 ಲಕ್ಷ ಭೂ ಹಿಡುವಳಿ ಹೊಂದಿರುವವರ ಇ –ಕೆವೈಸಿ ಆಗಬೇಕಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಕೇವಲ 35 ಸಾವಿರ ಮಂದಿ ಮಾತ್ರ ಯಶಸ್ವಿಯಾಗಿ ಇ–ಕೆವೈಸಿ ಮುಗಿಸಿದ್ದಾರೆ. ಸರ್ವರ್ ಸಮಸ್ಯೆ ತಲೆದೋರಿದಾಗ ಇ–ಆಡಳಿತ ಸಿಬ್ಬಂದಿ ತಕ್ಷಣ ಸ್ಪಂದಿಸಿ ಸರಿಪಡಿಸಿದ್ದಾರೆ. ಆದರೂ ಇ–ಕೆವೈಸಿ ಪ್ರಕ್ರಿಯೆ ಹೇಳಿಕೊಳ್ಳುವಂತಹ ಪ್ರಗತಿ ಸಾಧಿಸಿಲ್ಲ. ಪ್ರಕ್ರಿಯೆಗೆ ಫೆ. 26 ಕಡೆಯ ದಿನವಾಗಿರುವುದರಿಂದ ದಿನಾಂಕ ವಿಸ್ತರಣೆ ಮಾಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎನ್. ಅಂಬಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾಕೆ ಅನಿವಾರ್ಯ?

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಬರ ಪರಿಹಾರ ಬೆಳೆ ವಿಮೆ ಹಾಗೂ ಪಿಎಂ ಕಿಸಾನ್ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಇ–ಕೆವೈಸಿ ಅತ್ಯಗತ್ಯವಾಗಿದೆ. ಅದಕ್ಕಾಗಿ ರೈತರು ವಿದ್ಯುನ್ಮಾನ ಸಹಮತಿ ಪತ್ರ ನೀಡುವ ಜೊತೆಗೆ ಎಲ್ಲಾ ಭೂಹಿಡುವಳಿಗಳನ್ನು ಕಡ್ಡಾಯವಾಗಿ ತಮ್ಮ ಎಫ್‌ಐಡಿಯಲ್ಲಿ ಸೇರಿಸಬೇಕು. ತಪ್ಪಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಅದಕ್ಕಾಗಿ ರೈತ ಸಂಪರ್ಕ ಕೇಂದ್ರ ಗ್ರಾಮ ಒನ್ ಕೇಂದ್ರ ಕಂದಾಯ ಕೃಷಿ ತೋಟಗಾರಿಕೆ ರೇಷ್ಮೆ ಇಲಾಖಾ ಕಚೇರಿಗಳಲ್ಲಿ ಆಧಾರ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಹಾಗೂ ಎಲ್ಲಾ ಪಹಣಿಗಳನ್ನು ಇ–ಕೆವೈಸಿ ಮಾಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.