
ರಾಮನಗರ: ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘದವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಕಚೇರಿ ಪ್ರವೇಶಿಸಲು ಯತ್ನಿಸಿದರು.
ಡಿ.ಸಿ ಕಚೇರಿ ಆವರಣದಲ್ಲಿ ಯಾವುದೇ ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ ಇರುವುದರಿಂದ ಪೊಲೀಸರು ಪ್ರತಿಭಟನಾನಿರತ ರೈತ ಮುಖಂಡರು ಹಾಗೂ ಸದಸ್ಯರನ್ನು ವಶಕ್ಕೆ ಪಡೆದರು.
ಪ್ರತಿಭಟನೆಗಾಗಿ ಡಿ.ಸಿ ಕಚೇರಿಯಿಂದ ಅನತಿ ದೂರದಲ್ಲಿ ನಿಗದಿಪಡಿಸಿರುವ ಜಾಗದಲ್ಲಿ ಧರಣಿ ನಡೆಸಲು ನಿರಾಕರಿಸಿದ ರೈತರು, ಕಚೇರಿಯ ಪ್ರವೇಶದ್ವಾರದ ಎದುರಿನ ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯಲ್ಲೇ ಕುಳಿತರು. ಪೊಲೀಸರ ಮನವೊಲಿಸಲು ಯತ್ನಿಸಿದರೂ ಪ್ರತಿಭಟನಾಕಾರರು ಜಗ್ಗದೆ ಪ್ರತಿಭಟನೆ ಮುಂದುವರಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ದಲಿತ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಸಹ ಪ್ರತಿಭಟನೆಗೆ ಸಾಥ್ ನೀಡಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು ಡಿ.ಸಿ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಕೆಲ ಹೊತ್ತಿನ ಬಳಿಕ ಪ್ರತಿಭಟನಾಕಾರರಿಮದ ಮನವಿ ಸ್ವೀಕರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಸ್ಥಳಕ್ಕೆ ಬಂದರು. ಆಗ ಮುಖಂಡರು, ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಲು ಕೆಲ ನಿಮಿಷ ಕಾದ ಎಡಿಸಿ, ಮುಖಂಡರು ಪಟ್ಟು ಸಡಿಲಿಸದಿದ್ದರಿಂದ ವಾಪಸ್ ಹೋದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಬರಲೇಬೇಕು ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಕಚೇರಿಯ ಗೇಟ್ ಎಳೆದಾಡಿ ಒಳಕ್ಕೆ ಹೋಗಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಗೇಟ್‌ಗೆ ಅಡ್ಡವಾಗಿ ನಿಂತು ತಡೆದು ಶಾಂತಿಯುತವಾಗಿ ಪ್ರತಿಭಟಿಸುವಂತೆ ಮನವೊಲಿಸಲು ಯತ್ನಿಸಿದರು. ರೈತರು ಪೊಲೀಸರ ಮಾತಿಗೆ ಕ್ಯಾರೇ ಎನ್ನದಿದ್ದಾಗ, ಮಾತಿನ ಚಕಮಕಿ ನಡೆಯಿತು. ಕಡೆಗೆ ಪೊಲೀಸರು ಪ್ರಮುಖ ಮುಖಂಡರನ್ನು ವಶಕ್ಕೆ ಪಡೆದು ವಾಹನಕ್ಕೆ ತುಂಬಿದರು.
ಬೇರೆ ವಾಹನ ತರಿಸಿ!: ಪುರುಷರನ್ನು ಒಂದು ವಾಹನಕ್ಕೆ ತುಂಬಿಸಿದ ಪೊಲೀಸರು, ರೈತ ಮಹಿಳೆಯರನ್ನು ಸಹ ಅದೇ ವಾಹನಕ್ಕೆ ತುಂಬಲು ಮುಂದಾದರು. ವಾಹನ ಹತ್ತಲು ನಿರಾಕರಿಸಿದ ಮಹಿಳೆಯರು, ನಮಗೆ ಬೇರೆ ವಾಹನ ತರಿಸಿ ಎಂದು ಒತ್ತಾಯಿಸಿದರು. ಆಗ ಪಕ್ಕದಲ್ಲಿದ್ದ ಮತ್ತೊಂದು ಪೊಲೀಸ್ ವಾಹನದಲ್ಲಿ ಮಹಿಳೆಯರನ್ನು ಕರೆದೊಯ್ಯಲಾಯಿತು. ಬಳಿಕ ಎಲ್ಲರನ್ನೂ ಬಿಟ್ಟು ಕಳಿಸಿದರು.
ರೈತ ಸಂಘದ ಯುವ ಘಟಕದ ಕಾರ್ಯದರ್ಶಿ ಚೀಲೂರು ಮುನಿರಾಜು, ಮುಖಂಡರಾದ ಎಚ್. ಕೃಷ್ಣಯ್ಯ, ತಿಮ್ಮೇಗೌಡ, ರವಿ, ಪುಟ್ಟಸ್ವಾಮಯ್ಯ, ರತ್ನಮ್ಮ, ವಿಜಯ್ ಕುಮಾರ್ ತೇಜಸ್ವಿ, ವೆಂಕಟೇಶ್, ರಮ್ಯ ರಾಮಣ್ಣ ಹಾಗೂ ಇತರರು ಇದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಇನ್‌ಸ್ಪೆಕ್ಟರ್‌ಗಳಾದ ಕೃಷ್ಣ, ರಮೇಶ್, ಎಸ್‌ಐಗಳಾದ ತನ್ವೀರ್ ಹುಸೇನ್, ಮಹಮದ್ ಅಲ್ಲಾವುದೀನ್ ಸೇರಿದಂತೆ ಹಲವು ಪೊಲೀಸರು ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಏಜೆಂಟರ ಹಾವಳಿ ಮಿತಿ ಮೀರಿದೆ. ರೈತರ ಯಾವುದೇ ಕೆಲಸಗಳು ಆಗುತ್ತಿಲ್ಲ. ಅನ್ನದಾತರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಡಿ.ಸಿ ರೈತ ವಿರೋಧಿಯಾಗಿದ್ದಾರೆ.– ಕೆ. ಮಲ್ಲಯ್ಯ, ರಾಜ್ಯ ಉಪಾಧ್ಯಕ್ಷ ರೈತ ಸಂಘ
ಶಾಸಕ ಇಕ್ಬಾಲ್ ಹುಸೇನ್ ಆಪ್ತನೊಬ್ಬ ಕನಕಪುರ ತಾಲ್ಲೂಕಿನಲ್ಲಿ ನಕಾಶೆ ರಸ್ತೆ ಒತ್ತುವರಿ ಮಾಡಿಕೊಂಡು ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ. ಈ ಬಗ್ಗೆ ದೂರು ಕೊಟ್ಟರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ.– ಕುಮಾರಸ್ವಾಮಿ, ಅಧ್ಯಕ್ಷ ಪ್ರಗತಿಪರ ಸಂಘಟನೆ ಒಕ್ಕೂಟ
ರೈತ ಸಂಘದ ಬೇಡಿಕೆಗಳೇನು?
* ಹಾರೋಹಳ್ಳಿ ತಾಲ್ಲೂಕಿನ ಗಂಡಕನದೊಡ್ಡಿಯ ರಸ್ತೆ ತೆರವುಗೊಳಿಸಬೇಕು.
* ಕಾಡು ಪ್ರಾಣಿಗಳ ಉಪಟಳ ನಿಯಂತ್ರಿಸಬೇಕು.
* ಬೀದಿ ನಾಯಿಗಳ ದಾಳಿ ಹೆಚ್ಚಾಗಿದ್ದು ಅವುಗಳಿಗೆ ಕಡಿವಾಣ ಹಾಕಬೇಕು.
* ಹಾಲಿಗೆ ವೈಜ್ಞಾನಿಕ ದರ ನಿಗದಿಪಡಿಸಿ ರೈತರಿಗೆ ಹೆಚ್ಚಿನ ಲಾಭ ನೀಡಬೇಕು.
* ಹಾವು ಕಡಿತಕ್ಕೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸಬೇಕು.
* ಕನಕಪುರ ತಾಲ್ಲೂಕಿನ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ಸ್ಥಳೀಯರ ಒಕ್ಕಲೆಬ್ಬಿಸುವಿಕೆ ನಿಲ್ಲಿಸಬೇಕು.
* ಜಲಜೀವನ್ ಮಿಷನ್ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆಯಾಗಬೇಕು.
* ರೈತರ ಪಂಪ್‌ಸೆಟ್‌ಗಳಿಗೆ 7 ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು.
* ಸರ್ಕಾರಿ ಸ್ಮಶಾನ ಕೆರೆ ಹಾಗೂ ಗುಂಡು ತೋಪುಗಳ ಒತ್ತುವರಿ ತೆರವುಗೊಳಿಸಬೇಕು.
* ಬಗರ್‌ಹುಕುಂ ಸಾಗುವಳಿ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು.
* ಗೋಮಾಳ ಜಮೀನುಗಳನ್ನು ದುರಸ್ತಿ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.