
ಚನ್ನಪಟ್ಟಣ: ತಾಲ್ಲೂಕಿನ ಮಂಗಳವಾರಪೇಟೆ ಬಳಿ ಜಮೀನು ವಿವಾದವೊಂದರ ಹಿನ್ನೆಲೆಯಲ್ಲಿ ಶುಕ್ರವಾರ ರೈತನೊಬ್ಬರು ಪೊಲೀಸರ ಮುಂದೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪ್ರಕರಣ ನಡೆದಿದೆ.
ಮಂಗಳವಾರಪೇಟೆ ವಾಸಿ ವಿಶ್ವನಾಥ್ (45), ತಮ್ಮ ಒಂದು ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದರು. ಆದರೆ, ಆ ಜಮೀನು ತಮ್ಮದೆಂದು ಸಿದ್ದೇಗೌಡ ಎಂಬ ವ್ಯಕ್ತಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ವಿವಾದ ಇನ್ನೂ ನ್ಯಾಯಾಲಯದಲ್ಲಿ ಇದೆ.
ಭತ್ತದ ಕಟಾವು ಸಮಯದಲ್ಲಿ ವಿಶ್ವನಾಥ್ ಶುಕ್ರವಾರ ಬೆಳಗ್ಗೆ ಕಾರ್ಮಿಕರೊಂದಿಗೆ ಗದ್ದೆಗೆ ಬಂದಿದ್ದರು. ಅದೇ ಸಮಯದಲ್ಲಿ ಸಿದ್ದೇಗೌಡ ಪೊಲೀಸರೊಂದಿಗೆ ಅಲ್ಲಿಗೆ ಬಂದು, ಭತ್ತ ಕೊಯ್ಲು ತಡೆಯಲು ಪ್ರಯತ್ನಿಸಿದರು. ಇಬ್ಬರ ನಡುವೆ ಜಗಳ ನಡೆಯಿತು. ಪೊಲೀಸರು ಇಬ್ಬರ ನಡುವೆ ಸಂಧಾನ ಮಾಡಲು ಪ್ರಯತ್ನಿಸಿದರು. ಆದರೆ, ಇಬ್ಬರೂ ಒಪ್ಪಿಕೊಳ್ಳಲಿಲ್ಲ. ಕಟಾವು ಮಾಡಲು ಅವಕಾಶ ಸಿಗದೆ ನಿರಾಶೆಗೊಂಡ ವಿಶ್ವನಾಥ್, ಪೊಲೀಸರ ಎದುರಲ್ಲೇ ವಿಷ ಸೇವಿಸಲು ಮುಂದಾದರು. ಪೊಲೀಸರು ತುರ್ತಾಗಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಡ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.