ರಾಮನಗರದ ಜಿಲ್ಲಾ ಪಂಚಾಯಿತಿ ಭವನದಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ಶನಿವಾರ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಗೌಡ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ರಾಮನಗರ: ‘ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ರೈತ ಸಮುದಾಯದ ನಡುವಣ ಕೊಂಡಿಯಾಗಿ ಕೃಷಿಕರ ಹಿತಾಸಕ್ತಿಗಾಗಿ ಕೃಷಿಕ ಸಮಾಜ ಕೆಲಸ ಮಾಡಿಕೊಂಡು ಬರುತ್ತಿದೆ. ನಿರ್ದೇಶಕರು, ಸದಸ್ಯರು ಕೃಷಿಕ ಸಮಾಜದ ಕಾರ್ಯವ್ಯಾಪ್ತಿ ಬಗ್ಗೆ ಅರಿತುಕೊಂಡು ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು’ ಎಂದು ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಗೌಡ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಭವನದಲ್ಲಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ನಡೆದ ಕೃಷಿಕ ಸಮಾಜದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಂಡು, ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಅವುಗಳನ್ನು ಪರಿಹರಿಸುವತ್ತ ಗಮನ ಹರಿಸಬೇಕು’ ಎಂದರು.
‘ನಮ್ಮ ಸಮಾಜಕ್ಕೆ ಸರ್ಕಾರದ ಎಲ್ಲಾ ಇಲಾಖೆಗಳು ಸದಸ್ಯ ಸಂಸ್ಥೆಗಳಾಗಿವೆ. ಇಲಾಖೆಗಳು ಕೈಗೊಳ್ಳುವ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಕೃಷಿಕ ಸಮಾಜದ ಪ್ರತಿನಿಧಿಗಳನ್ನು ಸಹ ಒಳಗೊಳ್ಳಬೇಕು. ಆಗ, ಜನರಿಗೂ ನಮ್ಮ ಸಮಾಜದ ಕುರಿತು ಪರಿಚಯವಾಗುತ್ತದೆ’ ಎಂದು ತಿಳಿಸಿದರು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ನಿಂಗಪ್ಪ ಮಾತನಾಡಿ, ‘ಕೆಲವರ ರಾಜಕೀಯ ಮುನಿಸು ಮತ್ತು ನಿರಾಸಕ್ತಿಯಿಂದಾಗಿ ಕಳೆದ 15 ವರ್ಷಗಳಿಂದ ಜಿಲ್ಲೆಯಲ್ಲಿ ಕೃಷಿಕ ಸಮಾಜ ನಿಷ್ಕ್ರಿಯವಾಗಿತ್ತು. ಕೃಷಿಕ ಸಮಾಜದ ಸವಲತ್ತುಗಳು ಕೆಲವು ಮಂದಿಗೆ ಮಾತ್ರ ಸಿಗುತ್ತಿವೆ. ನಿಜವಾದ ರೈತರು ವಂಚಿತರಾಗುತ್ತಿದ್ದಾರೆ. ಅರ್ಹರಿಗೆ ಸವಲತ್ತುಗಳನ್ನು ತಲುಪಿಸುವ ಪ್ರಯತ್ನವಾಗಲಿ’ ಎಂದು ಸಲಹೆ ನೀಡಿದರು.
ಸಭೆಯಲ್ಲಿದ್ದ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿಯನ್ನು ಸಭೆಯ ಗಮನಕ್ಕೆ ತಂದರು. ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ನಟರಾಜು, ಕನಕಪುರ ತಾಲ್ಲೂಕು ಅಧ್ಯಕ್ಷ ದೊಡ್ಡವೀರೇಗೌಡ, ಮಾಗಡಿ ಅಧ್ಯಕ್ಷ ರಂಗಸ್ವಾಮಿ, ರಾಮನಗರ ಅಧ್ಯಕ್ಷ ಶ್ರೀನಿವಾಸ್, ಹಾರೋಹಳ್ಳಿಯ ರಾಮಣ್ಣ, ಉದಯ್ ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಕಿ ಅಂಬಿಕಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮುನೇಗೌಡ, ಮೀನುಗಾರಿಕೆ ಇಲಾಖೆಯ ಶಾಂತಿಪ್ರಿಯ ಹಾಗೂ ಇತರರು ಇದ್ದರು.
ಕೃಷಿಕ ಸಮಾಜಕ್ಕೆ ಜಿಲ್ಲಾ ಕೇಂದ್ರದಲ್ಲಿ ಸ್ವಂತ ಕಚೇರಿಗಾಗಿ ನಿವೇಶನ ಒದಗಿಸುವಂತೆ ಈಗಾಗಲೇ ಸ್ಥಳೀಯ ಶಾಸಕರು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ. ನಿವೇಶನ ಮಂಜೂರಾದರೆ ಕಟ್ಟಡ ನಿರ್ಮಾಣಕ್ಕೆ ಸಿಎಸ್‌ಆರ್ ಅನುದಾನ ಪಡೆಯಲಾಗುವುದು– ಬಿ. ಗೋಪಾಲ್ ಜಿಲ್ಲಾ ಅಧ್ಯಕ್ಷ ಕೃಷಿಕ ಸಮಾಜ ಬೆಂಗಳೂರು ದಕ್ಷಿಣ ಜಿಲ್ಲೆ
ಸ್ವಂತ ಕಚೇರಿಗೆ ಒತ್ತು ನೀಡಲು ಸಲಹೆ:
‘ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಕೃಷಿಕ ಸಮಾಜ ಇದ್ದೂ ಇಲ್ಲದಂತಿದೆ. ಸಮಾಜವು ಸಕ್ರಿಯವಾಗಿ ಕೆಲಸ ಮಾಡಲು ಸ್ವಂತ ಕಚೇರಿ ಅಗತ್ಯ. ಈಗಾಗಲೇ ರಾಜ್ಯದಾದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲೂ ಕಚೇರಿ ಇದೆ. ಆದರೆ ಬೆಂಗಳೂರು ದಕ್ಷಿಣದಲ್ಲಿ ಎಲ್ಲೂ ಇಲ್ಲದಿರುವುದು ಬೇಸರದ ಸಂಗತಿ. ರೈತರ ಪ್ರಾತಿನಿಧಿಕ ಸಂಸ್ಥೆಯಾದ ಕೃಷಿಕ ಸಮಾಜದ ಕಚೇರಿಗಾಗಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸ್ವಂತ ನಿವೇಶನ ಹೊಂದಲು ಪ್ರಯತ್ನಿಸಬೇಕು. ಅದಕ್ಕಾಗಿ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ತಹಶೀಲ್ದಾರ್ ಜೊತೆ ಸಮಾಜದ ಅಧ್ಯಕ್ಷರಾದ ಬಿ. ಗೋಪಾಲ್ ಅವರ ನೇತೃತ್ವದಲ್ಲಿ ಮನವಿ ನೀಡಿ. ನಿವೇಶನ ಮಂಜೂರಾದ ಬಳಿಕ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸಮಿತಿಯಿಂದಲೂ ನೆರವು ಒದಗಿಸಲಾಗುವುದು’ ಎಂದು ಡಾ. ಆರ್. ಮಂಜುನಾಥ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.