ADVERTISEMENT

ಅನ್ನದಾತರಿಗೆ ಬೇಡುವ ಪರಿಸ್ಥಿತಿ ಬರಬಹುದು: ಅನ್ನದಾನೇಶ್ವರ ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 2:26 IST
Last Updated 21 ಆಗಸ್ಟ್ 2025, 2:26 IST
ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಪುರ ಗ್ರಾಮದಲ್ಲಿ ನಡೆದ ಜಿಲ್ಲಾಮಟ್ಟದ ವಿಚಾರ ಸಂಕಿರಣಕ್ಕೆ ಅರ್ಚಕರಹಳ್ಳಿ ಆದಿಚುಂಚನಗಿರಿ  ಶಾಖಾಮಠದ ಅನ್ನದಾನೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ರೈತಸಂಘದ ಸಿ.ಪುಟ್ಟಸ್ವಾಮಿ ಇತರರು ಭಾಗವಹಿಸಿದ್ದರು
ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಪುರ ಗ್ರಾಮದಲ್ಲಿ ನಡೆದ ಜಿಲ್ಲಾಮಟ್ಟದ ವಿಚಾರ ಸಂಕಿರಣಕ್ಕೆ ಅರ್ಚಕರಹಳ್ಳಿ ಆದಿಚುಂಚನಗಿರಿ  ಶಾಖಾಮಠದ ಅನ್ನದಾನೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ರೈತಸಂಘದ ಸಿ.ಪುಟ್ಟಸ್ವಾಮಿ ಇತರರು ಭಾಗವಹಿಸಿದ್ದರು   

ಚನ್ನಪಟ್ಟಣ: ರೈತಸಂಕುಲ ಇಂದು ಸಂಕಷ್ಟದಲ್ಲಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ಎರಡು ವರ್ಷದಲ್ಲಿ ರೈತರಿಗೆ ನೀಡುವ ಬದಲು ಬೇಡುವ ಪರಿಸ್ಥಿತಿ ಬರಬಹುದು ಎಂದು ಅರ್ಚಕರಹಳ್ಳಿಯ ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ ವಿಷಾದಿಸಿದರು.

ತಾಲ್ಲೂಕಿನ ಸಿಂಗರಾಜಪುರ ಗ್ರಾಮದ ಲಕ್ಷ್ಮಿದೇವಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ರೈತ ಸಂಘದ(ಸಮಾನ ಮನಸ್ಕರ ಸಹಭಾಗಿತ್ವ) ಜಿಲ್ಲಾ ಘಟಕ, ಸಿಂಗರಾಜಪುರದ ವೇಣುಗೋಪಾಲಕೃಷ್ಣಸ್ವಾಮಿ ರೈತ ಸಂಘದ ಜಂಟಿಯಾಗಿ ಈ ವಿಚಾರ ಸಂಕಿರಣ ಏರ್ಪಡಿಸಿದ್ದವು.

ಕಷ್ಟ ಪರಿಹರಿಸುವಂತೆ ರೈತರು ಒಂದು ದಿನ ಪ್ರತಿಭಟನೆ ಮಾಡಿ ಸುಮ್ಮನಾಗುತ್ತಾರೆ. ಇದರಿಂದ ರೈತರ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ರೈತರು ಮೊದಲು ಸಂಘಟಿತರಾಗುವ ಅವಶ್ಯಕತೆ ಇದೆ. ತಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. 79 ವರ್ಷದಿಂದ ಹಳೆ ಕೃಷಿ ನೀತಿ ಜಾರಿಯಲ್ಲಿದ್ದು, ರೈತರಿಗೆ ಅನುಕೂಲವಾಗುವಂತೆ ತಿದ್ದುಪಡಿಯಾಗಬೇಕು. ಆಗ ಮಾತ್ರ ರೈತರು ಸಬಲರಾಗಲು ಸಾಧ್ಯ ಎಂದು ರೈತಸಂಘದ ಸಿ.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.

ಪೊಲೀಸರು ಮತ್ತು ಜನಸಾಮಾನ್ಯರ ನಡುವಿನ ಸಂಬಂಧ ಕುರಿತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಎಚ್. ರಾಮಚಂದ್ರಯ್ಯ, ಗ್ರಾಮೀಣ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಬ್ಯಾಂಕುಗಳ ಕಾರ್ಯಯೋಜನೆ ಕುರಿತು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ವೈ.ಎನ್. ಮೋಹನ್ ಕುಮಾರ್,  ಭೂ ಸರ್ವೆ ವಿಧಾನ ಕುರಿತು ಡಿ.ಕೆ.ಪುಟ್ಟಸ್ವಾಮಿಗೌಡ ಉಪನ್ಯಾಸ ನೀಡಿದರು.

ಪಿಎಂಎಫ್ ಎಂಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಅಭಿಷೇಕ್, ಪತ್ರಕರ್ತ ಗೋ.ರಾ. ಶ್ರೀನಿವಾಸ್, ರೈತಸಂಘದ  ಹಾರೋಹಳ್ಳಿ ದೇವರಾಜು, ಉಯ್ಯಂಬಳ್ಳಿ ಸತೀಶ್, ಸಂಪತ್ ಕುಮಾರ್, ಪುಟ್ಟಲಿಂಗಪ್ಪ, ಮೊಗೇನಹಳ್ಳಿ ದೇವೇಗೌಡ, ರವಿ, ನಿವೃತ್ತ ಸಬ್ ಇನ್‌ಸ್ಪೆಕ್ಟರ್ ನಾಗೇಶ್, ವೇಣುಗೋಪಾಲಕೃಷ್ಣಸ್ವಾಮಿ ರೈತಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.