ADVERTISEMENT

ಯೂರಿಯಾ ಖರೀದಿಗೆ ಮುಗಿಬಿದ್ದ ರೈತರು

ರಸಗೊಬ್ಬರದ ಕೃತಕ ಅಭಾವ ಸೃಷ್ಟಿಯಿಂದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:05 IST
Last Updated 16 ಸೆಪ್ಟೆಂಬರ್ 2022, 4:05 IST
ಕನಕಪುರ ಹಾರೋಹಳ್ಳಿಯಲ್ಲಿ ಯೂರಿಯಾ ಖರೀದಿಗಾಗಿ ರಸಗೊಬ್ಬರದ ಅಂಗಡಿ ಎದುರು ಸಾಲುಗಟ್ಟಿ ನಿಂತಿರುವ ರೈತರು
ಕನಕಪುರ ಹಾರೋಹಳ್ಳಿಯಲ್ಲಿ ಯೂರಿಯಾ ಖರೀದಿಗಾಗಿ ರಸಗೊಬ್ಬರದ ಅಂಗಡಿ ಎದುರು ಸಾಲುಗಟ್ಟಿ ನಿಂತಿರುವ ರೈತರು   

ಕನಕಪುರ: ಈ ಸಲ ಉತ್ತಮ ಮಳಯಾಗಿದ್ದರಿಂದ ಉತ್ತಮ ಫಸಲು ನಿರೀಕ್ಷೆಯಲ್ಲಿರುವ ಅನ್ನದಾತರು ಇದೀಗ ಯೂರಿಯಾ ಅಭಾವದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಾರೋಹಳ್ಳಿಯಲ್ಲಿ ಯೂರಿಯಾ ಖರೀದಿಗಾಗಿ ನೂರಾರು ಸಂಖ್ಯೆಯ ರೈತರು ರಸಗೊಬ್ಬರ ಅಂಗಡಿ ಮುಂದೆ ಕಾದು ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಕೆಲವು ದಿನಗಳಿಂದ ಯೂರಿಯಾದ ಕೃತಕ ಅಭಾವ ಸೃಷ್ಟಿಯಾಗಿದ್ದು, ಹಾರೋಹಳ್ಳಿಗೆ ಯೂರಿಯಾ ಪೂರೈಕೆಯಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಒಂದು ಲೋಡ್ ಯೂರಿಯಾದಿಂದ 400 ಮಂದಿಗೆ ಪೂರೈಸಬಹುದು. ಹೀಗಾಗಿ ತಮಗೆ ಯೂರಿಯಾ ಸಿಗುವುದಿಲ್ಲ ಎಂಬ ಆತಂಕದಿಂದ ರೈತರು ಬೆಳಗಿನ ಜಾವ 4 ಗಂಟೆಯಿಂದಲೇ ರಸಗೊಬ್ಬರ ಅಂಗಡಿ ಮುಂದೆ ಸಾಲುಗಟ್ಟಿ ನಿಂತರು.ಇದರಿಂದ ರಸ್ತೆಯಲ್ಲಿ ದಟ್ಟಣೆಹೆಚ್ಚಾಗಿ ಸಾರ್ವಜನಿಕರ ಓಡಾಟ, ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ADVERTISEMENT

ಇಂಥ ಸಂದರ್ಭದಲ್ಲಿ ಯಾವುದೇ ಗೊಂದಲವಾಗದಂತೆ ಎಲ್ಲ ರೈತರಿಗೂ ರಸಗೊಬ್ಬರ ಸಿಗುವಂತೆ ಮಾಡಲು ಪೊಲೀಸರನ್ನು ನಿಯೋಜಿಸಬೇಕು. ಆದರೆ, ಇತ್ತ ಒಬ್ಬ ಪೊಲೀಸ್ ಸಿಬ್ಬಂದಿ ಸಹ ಸುಳಿಯಲಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಮಾತನಾಡಿದ ಹಾರೋಹಳ್ಳಿ ಕೋಟೆ ಕುಮಾರ ಮತ್ತು ರುದ್ರೇಶ್, ಈ ವರ್ಷ ಹೆಚ್ಚು ಮಳೆ ಆಗಿದ್ದರಿಂದ ಹಲವು ರೈತರ ಬೆಳೆ ನಾಶವಾಗಿದೆ. ಉಳಿದ ಕೆಲವೇ ರೈತರು ರಸಗೊಬ್ಬರ ಖರೀದಿಗೆಬಂದಿದ್ದಾರೆ. ಅವರಿಗೂಯೂರಿಯಾ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಇದು ಸರ್ಕಾರ ಮತ್ತು ಕೃಷಿ ಇಲಾಖೆಯ ವೈಫಲ್ಯತೆ. ಅಗತ್ಯಕ್ಕೆ ಅನುಗುಣವಾಗಿ ಮೊದಲೇ ಯೂರಿಯಾವನ್ನು ದಾಸ್ತಾನು ಮಾಡಿಸಬೇಕಿತ್ತು. ಇಷ್ಟೆಲ್ಲಾ ಸಮಸ್ಯೆ ಆಗಿದ್ದರೂ ಕೃಷಿ ಇಲಾಖೆಯ ಯಾವೊಬ್ಬ ಅಧಿಕಾರಿ ಇಲ್ಲಿಗೆ ಬಂದಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.