ಚನ್ನಪಟ್ಟಣ: ದೇಶದಲ್ಲಿ ಪ್ರಜಾಪ್ರಭುತ್ವದ ಅಧಿಕಾರ ಕಸಿದುಕೊಂಡಿರುವ ಕಾರ್ಪೋರೇಟ್ ಸಂಸ್ಥೆಗಳ ವಿರುದ್ಧ ರೈತ ಸಂಘ ಹೋರಾಟ ರೂಪಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ತಾಲ್ಲೂಕಿನ ಮೊಗೇನಹಳ್ಳಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕಿನ ರೈತ ನಾಯಕರಾದ ದಿ.ಎಂ.ರಾಮು ಹಾಗೂ ಜಿ.ಟಿ.ರಾಮಸ್ವಾಮಿ ಅವರ 4ನೇ ವರ್ಷದ ಪುಣ್ಯಸ್ಮರಣೆ ಮತ್ತು ಎಂ.ರಾಮು ಪ್ರತಿಷ್ಠಾನ, ಎಂ.ರಾಮು ಸರ್ಕಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಮುಂದೆ ರಾಜ್ಯ ಸರ್ಕಾರ ಪುರಸಭೆಯಾಗುತ್ತದೆ. ಸಂಸತ್ತು ಕಾರ್ಪೋರೆಟ್ ಕೈ ಸೇರುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಈಗ ನಿಜವಾಗುತ್ತಿದೆ. ಇಂದು ದೇಶದಲ್ಲಿ ಸರ್ಕಾರಗಳು ಯಾವುದೇ ನಿಯಮ, ಕಾಯ್ದೆ ಜಾರಿ ಮಾಡಿದರೂ ಸಹ ಅದಕ್ಕೆ ಕಾರ್ಪೋರೇಟ್ ಸಂಸ್ಥೆಗಳ ಅಂಕಿತ ಹಾಕುತ್ತಿವೆ. ಹಾಗಾಗಿ ಈ ನಿಟ್ಟಿನಲ್ಲಿ ರೈತ ಸಂಘಟನೆ ಕಾರ್ಪೋರೆಟ್ ಸಂಸ್ಥೆಗಳ ವಿರುದ್ಧ ಬೃಹತ್ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.
ಜನಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಮಾತನಾಡಿ, ದಿ. ಎಂ.ರಾಮು ಹಾಗೂ ಜಿ.ಟಿ.ರಾಮಸ್ವಾಮಿ ಅವರು ಹೋರಾಟದಲ್ಲಿ ಶಿಸ್ತಿನ ನಾಯಕರಾಗಿದ್ದರು. ರೈತ ಹೋರಾಟಗಳ ಜೊತೆಗೆ ಸಮಾಜದಲ್ಲಿ ಯಾವುದೇ ಸಮುದಾಯಕ್ಕೂ ಅನ್ಯಾಯವಾದರೂ ಸ್ಪಂದಿಸುತ್ತಿದ್ದರು. ಅಂತಹ ಹೋರಾಟಗಾರರು ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ರಮೇಶ್ ಗೌಡ, ಕುಮಾರಸ್ವಾಮಿ, ಆಣಿಗೆರೆ ಕೆ.ಮಲ್ಲಯ್ಯ, ಮಾಗಡಿ ಲೋಕೇಶ್, ನಿರ್ಮಲ, ಡಾ.ಪದ್ಮರೇಖ, ಕೆ.ಎನ್.ರಾಜಣ್ಣ, ಹೊನ್ನಾಯ್ಕಹಳ್ಳಿ ಕೃಷ್ಣಯ್ಯ, ಮಮತ, ತಿಮ್ಮೇಗೌಡ, ಕೋದಂಡರಾಮು, ರಮ್ಯ ರಾಮಣ್ಣ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.