
ರಾಮನಗರ: ‘ಜಿಲ್ಲೆಯಲ್ಲಿ ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಾವು-ನೋವು ಸಾಮಾನ್ಯವಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡಾನೆ ಹಾವಳಿ ತಡೆಯದಿದ್ದರೆ, ಅರಣ್ಯ ಸಚಿವರ ನಿವಾಸದ ಎದುರು ಹೋರಾಟ ನಡೆಸಲಾಗುವುದು’ ಎಂದು ರೈತ ಸಂಘದ ಅಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ಎಚ್ಚರಿಕೆ ನೀಡಿದರು.
ನಗರದ ಎಪಿಎಂಸಿಯ ರೈತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಒಂದೂವರೆ ದಶಕದಿಂದ ಆನೆಗಳ ಕಾಟ ಏರುಗತಿಯಲ್ಲೇ ಸಾಗುತ್ತಿದೆ. ಹಲವು ಜೀವಗಳು ಬಲಿಯಾಗಿವೆ. ಲಕ್ಷಾಂತರ ಎಕರೆ ಬೆಳೆ ನಾಶವಾಗಿದೆ. ಆದರೂ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕಾಡಾನೆಗಳಿಂದಾಗಿ ರೈತರು ಬೆಳೆದ ಬೆಳೆ ಕೈ ಸೇರುತ್ತಿಲ್ಲ. ಜೀವಹಾನಿ ಮತ್ತು ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾದರೂ ಅನ್ನದಾತರಿಗೆ ಬಿಡಿಗಾಸಿನ ಪರಿಹಾರ ಮಾತ್ರ ಸಿಗುತ್ತಿದೆ. ಇದರಿಂದಾಗಿ ರೈತರು ಜಮೀನುಗಳನ್ನು ಪಾಳು ಬಿಡುತ್ತಿದ್ದಾರೆ. ಅರಣ್ಯ ಇಲಾಖೆಯ ಆನೆ ಕಾರ್ಯಾಚರಣೆಯು ಕಾಟಾಚಾರಕ್ಕೆ ನಡೆಯುತ್ತಿದೆ’ ಎಂದರು.
‘ನಾಡಿಗೆ ಬರುವ ಆನೆಗಳನ್ನು ನಿಯಂತ್ರಿಸಲು ಆನೆ ಕಾರ್ಯಪಡೆ ಇದ್ದರೂ, ಆನೆಗಳು ಬರುವುದು ತಪ್ಪಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆನೆಗಳನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟರೂ ಮತ್ತೆ ಬರುತ್ತಿವೆ. ಇದರಿಂದಾಗಿ ಅರಣ್ಯದಂಚಿನ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ. ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.
ಸಂಘದ ರಾಮನಗರ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಖಾತೆ ಮಾಡಿಕೊಡಲು ಅಧಿಕಾರಿಗಳು ಸಾವಿರಾರು ರೂಪಾಯಿ ಕೇಳುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ರೈತರ ಕೆಲಸಗಳು ಲಂಚವಿಲ್ಲದೆ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹಿಂದಿನ ಜಿಲ್ಲಾಧಿಕಾರಿಗಳು ರೈತರ ಸಭೆ ಕರೆದು, ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಇತ್ತೀಚೆಗೆ ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅನ್ನದಾತರ ಕಷ್ಟ–ಸುಖ ಕೇಳುತ್ತಿಲ್ಲ. ರೈತ ಸುಭಿಕ್ಷವಾಗಿದ್ದರೆ ಮಾತ್ರ ಈ ಜಗತ್ತು ಸುಭಿಕ್ಷವಾಗಿರುತ್ತದೆ ಎಂಬುದನ್ನು ಎಲ್ಲರೂ ಮರೆತಿದ್ದಾರೆ’ ಎಂದರು.
ಸಂಘದ ಮುಖಂಡರಾದ ರವಿಕುಮಾರ್, ಶಿವಣ್ಣ, ಲೋಕೇಶ್, ಅಮ್ಮಣ್ಣಮ್ಮ ಹಾಗೂ ಇತರರು ಇದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.