ADVERTISEMENT

ಮಾಗಡಿ | ಹೂವು ಕೃಷಿ: ಸಾಧನೆ ಹಾದಿಯಲ್ಲಿ ವನಜಾಕ್ಷಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 3:05 IST
Last Updated 1 ಅಕ್ಟೋಬರ್ 2025, 3:05 IST
ಮಾಗಡಿ ತಾಲ್ಲೂಕಿನ ಹುಚ್ಚಹನುಮೇಗೌಡನಪಾಳ್ಯದ ವನಜಾಕ್ಷಿ ಹೂ ಕಟ್ಟುತ್ತಿರುವುದು
ಮಾಗಡಿ ತಾಲ್ಲೂಕಿನ ಹುಚ್ಚಹನುಮೇಗೌಡನಪಾಳ್ಯದ ವನಜಾಕ್ಷಿ ಹೂ ಕಟ್ಟುತ್ತಿರುವುದು   

ಮಾಗಡಿ: ತಾಲ್ಲೂಕಿನ ಹುಚ್ಚಹನುಮೇಗೌಡನಪಾಳ್ಯದ ರೈತ ಮಹಿಳೆ ವನಜಾಕ್ಷಿ ಹೂವು ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.

ವನಜಾಕ್ಷಿ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರು ಜೀವನದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬ ಕನಸು ಕಂಡವರು. ಕೃಷಿ ಕ್ಷೇತ್ರದಲ್ಲಿ ಹೊಸದನ್ನು ಮಾಡಲು ಬಯಸಿದ ಅವರು ಹೂವು ಬೆಳೆಯುವತ್ತ ಗಮನ ಹರಿಸಿದರು. ಆರಂಭದಲ್ಲಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಸೇವಂತಿಗೆ ಬೆಳೆಯಲು ಆರಂಭಿಸಿದರು.

ಹೂವಿಗೆ ಸ್ಥಳೀಯ ಹಾಗೂ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಇರುವುದನ್ನು ಕಂಡು, ಬೆಳೆ ವ್ಯಾಪ್ತಿಯನ್ನು ನಿಧಾನವಾಗಿ ವಿಸ್ತರಿಸಿದರು. ಐಶ್ವರ್ಯ ಹಳದಿ, ನೇರಳೆ, ಪಿಂಕ್, ಭಾಗ್ಯಶ್ರೀ ಬಿಳಿ, ಸೆಂಟ್ ಹಳದಿ, ಚಾಕೋಲೇಟ್ ಬಣ್ಣದ ಆಕರ್ಷಕ ಹೂಗಳನ್ನು ಇದೀಗ ಬೆಳೆಯುತ್ತಿದ್ದಾರೆ.

ADVERTISEMENT

ಸಮಗ್ರ ಕೃಷಿ ಪದ್ಧತಿಯಲ್ಲಿ ರಾಗಿ, ತೊಗರಿ, ಅವರೆ, ಅಲಸಂದೆ, ತೋಟಗಾರಿಕಾ ಬೆಳೆ ಅಡಿಕೆ, ತೆಂಗು, ಬಾಳೆ, ಹೀರೆಕಾಯಿ, ಸೌತೆಕಾಯಿ, ಮೆಣಸಿನಕಾಯಿ, ಹುರುಳಿಕಾಯಿ, ಟೊಮೆಟೊ ಹಾಗೂ ಅರಣ್ಯ ಬೆಳೆ ಹೊಂಗೆ, ಬೇವು, ಹಲಸು ಬೆಳೆದಿದ್ದಾರೆ.

ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಸೀಮೆಹುಲ್ಲು, ಮೇವಿನಜೋಳ, ಅಜೋಲಾ ಬೆಳೆದು ರಾಸುಗಳಿಗೆ ಇದರ ಜತೆ ಪಶು ಆಹಾರ  ನೀಡುತ್ತಿದ್ದು ಉತ್ತಮ ಹಾಲಿನ ಇಳುವರಿ ಪಡೆಯುತ್ತಿದ್ದಾರೆ.

ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳಿಂದ ಬೆಳೆ ಪೂರಕವಾದ ತಾಂತ್ರಿಕ ಮಾಹಿತಿ, ನೀರಾವರಿ ವಿಧಾನ, ಸಮರ್ಪಕ ಗೊಬ್ಬರ ನಿರ್ವಹಣೆ, ಹೂಗಳ ಮಾರುಕಟ್ಟೆ ಸಂಪರ್ಕ ಇತ್ಯಾದಿ ವಿಷಯ ತಿಳಿದುಕೊಂಡಿದ್ದಾರೆ.

ವನಜಾಕ್ಷಿ ತೋಟಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು

ಈಗ ತಿಂಗಳಿಗೆ ₹20 ಸಾವಿರದಿಂದ ₹ 25 ಸಾವಿರದವರೆಗೆ ಆದಾಯ ಬರುತ್ತಿದೆ. ಸ್ಥಳೀಯ ಮಾರುಕಟ್ಟೆಗೂ ಪೂರೈಕೆ ಮಾಡುತ್ತಾರೆ. ಹಬ್ಬದ ಸಂದರ್ಭದಲ್ಲಿ ತಾವೇ ಹೂಗಳನ್ನು ಕಟ್ಟಿ ಮಾರಾಟ ಮಾಡುತ್ತಾರೆ.

ವನಜಾಕ್ಷಿ ಅವರ ಗುಲಾಬಿ ತೋಟ
ಹೂವಿನಂತೆ ತಮ್ಮ ಬದುಕನ್ನೂ ಅರಳಿಸಿಕೊಂಡಿರುವ ವನಜಾಕ್ಷಿ ಮಹಿಳೆಯ ಕೈಯಲ್ಲಿ ಹೂವಿನ ಶಕ್ತಿ ಬದುಕಿನ ಶಕ್ತಿ ಎಂಬುದನ್ನು ಸಾಬೀತುಪಡಿಸಿದ್ದಾರೆ
ಡಾ.ಸೌಜನ್ಯ ಎಸ್ ಕೃಷಿ ವಿಸ್ತರಣಾ ವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.