ADVERTISEMENT

ರಾಮನಗರ: ಬೇರೆ ಗುಂಪಿನ ರಕ್ತ ಪಡೆದ ರೋಗಿ ಆರೋಗ್ಯದಲ್ಲಿ ಏರುಪೇರು

ವರದಿಯಲ್ಲಿ ರಕ್ತದ ಗುಂಪಿನ ತಪ್ಪು ಮಾಹಿತಿ ನೀಡಿದ ಡಯಾಗ್ನಾಸ್ಟಿಕ್ ಸೆಂಟರ್ ಸಿಬ್ಬಂದಿ ಯಡವಟ್ಟು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 0:30 IST
Last Updated 1 ಡಿಸೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಮನಗರ: ರಕ್ತದ ಮಾದರಿ ಪರೀಕ್ಷೆ ಮಾಡಿದ ಡಯಾಗ್ನಾಸ್ಟಿಕ್ ಸೆಂಟರ್‌ನವರು ತಮ್ಮ ವರದಿಯಲ್ಲಿ ರಕ್ತದ ಗುಂಪಿನ ಮಾಹಿತಿಯನ್ನು ತಪ್ಪಾಗಿ ನಮೂದಿಸಿದ್ದರಿಂದಾಗಿ, ತಮ್ಮದಲ್ಲದ ಗುಂಪಿನ ರಕ್ತ ಪಡೆದ ರೋಗಿಯೊಬ್ಬರ ಆರೋಗ್ಯದಲ್ಲಿ ಏರುಪೇರಾಗಿದೆ. ಸದ್ಯ ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಅವರು, ಹಾಸಿಗೆ ಹಿಡಿದಿದ್ದಾರೆ.

ಅನಾರೋಗ್ಯದಿಂದಾಗಿ ಶಿವಮ್ಮ ಎಂಬುವವರು ಸೆ. 2ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಕುಟುಂಬದವರು ರೋಗಿಯ ರಕ್ತ ಪರೀಕ್ಷೆಯನ್ನು ಐಜೂರಿನ ಪೂಜಿತಾ ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ ಮಾಡಿಸಿದ್ದರು. ಸಿಬ್ಬಂದಿ ರಕ್ತದ ಗುಂಪು ‘ಎಬಿ ಪಾಸಿಟಿವ್’ ಎಂದು ವರದಿ ನೀಡಿದ್ದರು. ಆ ಮೇರೆಗೆ, ರೋಗಿಗೆ ಅದೇ ಗುಂಪಿನ ಎರಡು ಬಾಟಲಿ ರಕ್ತವನ್ನು ವೈದ್ಯರು ನೀಡಿದ್ದರು.

ADVERTISEMENT

ಆಸ್ಪತ್ರೆಯಲ್ಲಿ ಹತ್ತು ದಿನ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದ ಶಿವಮ್ಮ ಅವರ ಆರೋಗ್ಯದಲ್ಲಿ ಕೆಲ ದಿನಗಳ ಬಳಿಕ ಏರುಪೇರಾಯಿತು. ನಡೆದಾಡಲು ಸಾಧ್ಯವಾಗದ ಸ್ಥಿತಿ ತಲುಪಿದ ಅವರನ್ನು ಕುಟುಂಬದವರು ನ. 28ರಂದು ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ವೈದ್ಯರ ಸೂಚನೆ ಮೇರೆಗೆ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗ, ವರದಿಯಲ್ಲಿ ರಕ್ತದ ಗುಂಪು ‘ಎ ಪಾಸಿಟಿವ್’ ಎಂದು ನಮೂದಾಗಿತ್ತು.

ಮುಂಚೆ, ಪೂಜಿತಾ ಡಯಾಗ್ನಾಸ್ಟಿಕ್ ಸೆಂಟರ್‌ ವರದಿಯಲ್ಲಿ ‘ಎಬಿ ಪಾಸಿಟಿವ್’ ಇದ್ದ ರಕ್ತದ ಗುಂಪು, ಸರ್ಕಾರಿ ಆಸ್ಪತ್ರೆ ವರದಿಯಲ್ಲಿ ಬದಲಾಗಿದ್ದರಿಂದ ಗೊಂದಲಕ್ಕೀಡಾದ ಶಿವಮ್ಮ ಅವರ ಪುತ್ರ ವಿಷಕಂಠಮೂರ್ತಿ ಅವರು, ಅನುಮಾನ ಪರಿಹಾರಕ್ಕಾಗಿ ಮತ್ತೊಂದು ಖಾಸಗಿ ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ ರಕ್ತ ಪರೀಕ್ಷೆ ಮಾಡಿಸಿದರು. ಅಲ್ಲೂ ‘ಎ ಪಾಸಿಟಿವ್’ ಎಂದು ವರದಿ ಬಂತು.

ಈ ಕುರಿತು ಮೊದಲು ರಕ್ತ ಪರೀಕ್ಷೆ ಮಾಡಿದ್ದ ಸೆಂಟರ್‌ನವರನ್ನು ಪ್ರಶ್ನಿಸಿದಾಗ, ಸಿಬ್ಬಂದಿ ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸಿದರು. ನಮ್ಮದೇನೂ ತಪ್ಪಿಲ್ಲ. ಏನಾದರೂ ಮಾಡಿಕೊಳ್ಳಿ ಎಂದು ಉಡಾಫೆಯಿಂದ ಉತ್ತರಿಸಿದರು. ಇದರ ಬೇಸರಗೊಂಡ ವಿಷಕಂಠಮೂರ್ತಿ ಅವರು, ತಪ್ಪು ವರದಿಯಿಂದಾಗಿ ತಾಯಿಯ ಆರೋಗ್ಯದಲ್ಲಿ ಏರುಪೇರಾಗಲು ಕಾರಣವಾದ ಸೆಂಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ. 29ರಂದು ಐಜೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಅನುಮತಿ ಪಡೆದು ಎಫ್‌ಐಆರ್:

‘ದೂರಿಗೆ ಸಂಬಂಧಿಸಿದಂತೆ ಎನ್‌ಸಿಆರ್‌ ಮಾಡಿಕೊಳ್ಳಲಾಗಿದೆ. ಕೋರ್ಟ್‌ನಲ್ಲಿ ಅನುಮತಿ ಪಡೆದು ಪೂಜಿತಾ ಡಯಾಗ್ನಾಸ್ಟಿಕ್ ಸೆಂಟರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು’ ಎಂದು ಐಜೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ತನ್ವೀರ್ ಹುಸೇನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.