ADVERTISEMENT

ರಾಜ್ಯ ಜಾನಪದ ಸಂಭ್ರಮ-2025: ನೆಲಮೂಲ ಸಂಸ್ಕೃತಿ ಉಳಿಸಿ; ಕೆ.ಸತೀಶ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 2:11 IST
Last Updated 31 ಆಗಸ್ಟ್ 2025, 2:11 IST
ಕನಕಪುರ ಕೋಡಿಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ನಡೆದ ಜಾನಪದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರು
ಕನಕಪುರ ಕೋಡಿಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ನಡೆದ ಜಾನಪದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರು   

ಕನಕಪುರ: ಜನಪದ ಉಳಿಸಿ ಬೆಳೆಸುವುದು ಇಂದಿನ ವಿದ್ಯಾರ್ಥಿ ಯುವ ಸಮುದಾಯದ ಆದ್ಯ ಕರ್ತವ್ಯವಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ತಿಳಿಸಿದರು.

ತಾಲ್ಲೂಕಿನ ಕೋಡಿಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಏರ್ಪಡಿಸಿದ್ದ ರಾಜ್ಯ ಜಾನಪದ ಸಂಭ್ರಮ-2025 ಉದ್ಘಾಟಿಸಿ ಮಾತನಾಡಿದರು.

ಅಳಿವಿನಂಚಿನಲ್ಲಿರುವ ಜಾನಪದ ಕಲೆ, ಸಾಹಿತ್ಯ ಸಂಸ್ಕೃತಿ ಮೂಲ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾತೃಶ್ರೀ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದು ಶ್ಲಾಘಿಸಿದರು.

ADVERTISEMENT

ಹಾವೇರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್ ಮತ್ತು ಪರಿಸರ ಪ್ರೇಮಿ ಮರಸಪ್ಪ ರವಿ ಮಾತನಾಡಿ, ಸರ್ವರ ಸಮಾನತೆ, ಸಹೋದರತ್ವದಿಂದ ಬದುಕಲು ಜಾನಪದ ಪ್ರೇರಣೆ ಶಕ್ತಿಯಾಗಿದೆ. ಜಾನಪದ ಹೆಚ್ಚಾಗಿ ಅಧ್ಯಯನ ಮಾಡಿ ಅಪ್ಪಿಕೊಳ್ಳಬೇಕೆಂದರು.

ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ನಮನ ಚಂದ್ರು ಮಾತನಾಡಿ, ಸಂಸ್ಥೆಯು ಹಲವು ವರ್ಷಗಳಿಂದ ಜಾನಪದ ಕಲೆ ಮತ್ತು ಕಲಾವಿದರನ್ನು ಕ್ಷೇತ್ರ ಕಾರ್ಯ ಮಾಡಿ ದಾಖಲಿಕರಿಸಿ ವಿದ್ಯಾರ್ಥಿ ಯುವ ಸಮುದಾಯಕ್ಕೆ ತರಬೇತಿ ನೀಡುವ ಮೂಲಕ ಶ್ರೀಮಂತಗೊಳಿಸಿದೆ. ಜಾನಪದ ಕಲೆ ಉಳಿವಿಗಾಗಿ ಮುಂದಿನ ದಿನಗಳಲ್ಲಿ ಜಾನಪದ ಕಲಾವಿದರ ಸಮ್ಮೇಳನ, ಗ್ರಾಮೀಣ ಕ್ರೀಡೋತ್ಸವ, ಮಹಾಕಾವ್ಯ ಕಮ್ಮಟ ವಿಚಾರ ಸಂಕೀರ್ಣ, ಜಡೆ ಹೆಣೆಯುವ ಸ್ಪರ್ಧೆ ಆಯೋಜಿಸುವ ಗುರಿ ಹೊಂದಲಾಗಿದೆ ಎಂದರು.

ಪ್ರಾಂಶುಪಾಲ ಡಾ.ಕೆ.ಟಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆ ಜತೆಗೆ ತಮ್ಮಲ್ಲಿ ಅಡಕವಾಗಿರುವ ಕಲೆ ಅನಾವರಣಗೊಳಿಸಬೇಕು. ತಮ್ಮ ಮಾನಸಿಕ ಭೌತಿಕ ಗುಣಮಟ್ಟ ಹೆಚ್ಚಿಸಲು ಜಾನಪದ ಪ್ರೇರಕಶಕ್ತಿ ನೀಡುತ್ತದೆ ಎಂದರು.

ರಾಷ್ಟ್ರಮಟ್ಟದ ಕಲಾವಿದರಾದ ನಿಂಗರಾಜು ತಂಡ ತಮಟೆ ವಾದನ, ವಿಜಿ ಪೂಜೆ ಕುಣಿತ, ರವಿ ವೀರಗಾಸೆ, ಮರಿಸ್ವಾಮಿ ಚರ್ಮವಾದ್ಯ, ಪ್ರಬುದ್ಧ ಜಂಬೆ ವಾದನ, ಶಿವು ಚಿಲಿಪಿಲಿ ಗೊಂಬೆ, ಹನುಮಂತ ಕೊಂಬು ಕಹಳೆ, ಮನು ಡೊಳ್ಳು ಕುಣಿತ, ಚಂದ್ರಾಜ್ ಸಿ, ಶಿವರಾಜು, ವಿ.ವಿಜಯ್, ಸಂಜಯ್ ಶೃತಿ, ಲೋಕೇಶ್, ಎಂ.ನಾಗೇಶ ಸಂಗಡಿಗರಿಂದ ಜಾನಪದ ಗೀತೆ, ತತ್ವಪದ ಗೀಗಿಪದ, ಮಂಟೆಸ್ವಾಮಿ ಪದ ಹಾಗೂ ಗೀತಾಂಜಲಿ, ಮನುಶ್ರೀ, ಮಂಜುಳಾ, ವಿದ್ಯಾ ತಂಡದವರು ಜಾನಪದ ನೃತ್ಯ ನಡೆಸಿಕೊಟ್ಟರು.

ಸಾಹಿತಿ ಎಸ್.ಶೋಭಾ ಸ್ವ-ರಚಿತ ಬದುಕು ಬಿರುಗಾಳಿ, ಭಾವ ಚಿಲುಮೆ ಹಾಗೂ ನಮನ ಚಂದ್ರು ಅವರ ಸೃಜನವಂತ ಅಭಿನಂದನ ಕೃತಿ ಬಿಡುಗಡೆ ಮಾಡಲಾಯಿತು.

ಕನ್ನಡ ವಿಭಾಗದ ಮುಖ್ಯಸ್ಥ ಅವಿನಾಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ್, ಲಿಂಗರಾಜು ತಿಬ್ಬೇಗೌಡ, ಸಮಾಜ ಸೇವಕ ನಡಕಲಪುರ ಮಂಜುನಾಥ್, ಸಾಹಿತಿ ಶೋಭಾ ಎಸ್, ಮುಖಂಡರಾದ ಶಾಂತಕುಮಾರ್, ಮರಿಸ್ವಾಮಿ, ನಗೆಮಳೆರಾಜ ಚಂದ್ರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.