ರಾಮನಗರ: ಜನಪದ ಕಲೆಯು ಮನುಷ್ಯರಲ್ಲಿ ಉತ್ಸಾಹ ತುಂಬುವ ಜೀವನಮುಖಿ ಕಲೆಯಾಗಿದೆ ಎಂದು ಗಾಯಕ ಮೈಸೂರು ಗುರುರಾಜು ಹೇಳಿದರು.
ಇಲ್ಲಿನ ಗಾಂಧೀನಗರದ ಭಜನೆ ಕಲಾವಿದರ ತಂಡದ ಸಮನ್ವಯ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಆಯೋಜಿಸಿದ್ದ ಕೋವಿಡ್ ಕುರಿತ ಜಾಗೃತಿ ಮೇಳ, ಚರ್ಮವಾದ್ಯ, ಸಂಗೀತ ಮೇಳ ಹಾಗೂ ಜಾನಪದ ಕಲಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿಯು ನಮ್ಮ ಜೀವನದ ಅವಿಭಾಜ್ಯ ಅಂಗ. ಹೀಗಾಗಿ ನಾವೆಲ್ಲ ಅದನ್ನು ಸದಾಕಾಲ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಂಗ್ರೆಸ್ ಮುಖಂಡ ಶಿವಕುಮಾರ ಸ್ವಾಮಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಕಲಾವಿದರಿಗೆ ಹೆಚ್ಚು ಮನ್ನಣೆ ದೊರೆಯಬೇಕಾಗಿದೆ. ಸದ್ಯ ಸಂಕಷ್ಟದಲ್ಲಿ ಇರುವ ಕಲಾವಿದರಿಗೆ ಸಮನ್ವಯ ಟ್ರಸ್ಟ್ ನೆರವಾಗುತ್ತಿದೆ ಎಂದು
ಹೇಳಿದರು.
ಕೋವಿಡ್ ಕುರಿತು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮಾತನಾಡಿ, ಕಲಾವಿದರು ಸುಶಿಕ್ಷಿತವಾಗಿದ್ದರೆ ನಮ್ಮ ಕಲೆ, ಸಂಸ್ಕೃತಿ ಸಂರಕ್ಷಣೆ ಆಗುತ್ತದೆ. ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದರು.
ಜೆಡಿಎಸ್ ಜಿಲ್ಲಾ ಪದವೀಧರ ಘಟಕದ ಅಧ್ಯಕ್ಷ ಜಿ.ಟಿ. ಕೃಷ್ಣ ಕಲಾ ಜಾಥಾಕ್ಕೆ ಚಾಲನೆ ನೀಡಿದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕೆಂಪರಾಜು, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಾಂತರಾಜ್, ಪತ್ರಕರ್ತೆ ಸುಧಾರಾಣಿ, ಹಾಡುಗಾರ್ತಿ ಮಂಡ್ಯ ಮೀನಾಕ್ಷಿ, ಡಿ.ಎಸ್.ಎಸ್. ಬೆಂಗಳೂರು ವಿಭಾಗದ ಪ್ರಧಾನ ಸಂಚಾಲಕ ಸೋಮಶೇಖರ್, ತತ್ವಪದ ಕಲಾವಿದರಾದ ಗಿರಿಜಮ್ಮ ರಾಚಯ್ಯ, ಸಂಕಲಗೆರೆ ಕೃಷ್ಣ ಭಾಗವಹಿಸಿದ್ದರು. ಇದೇ ಸಂದರ್ಭ ಸಾಹಿತ್ಯ ಗೋಷ್ಠಿ ಹಾಗೂ ಕನ್ನಡ ನಾಡು, ನುಡಿ ಗೀತೆಗಳ ಗಾಯನ ನಡೆಯಿತು.
ಅಂಕನಹಳ್ಳಿ ಪಾರ್ಥ, ನಾರಾಯಣಸ್ವಾಮಿ, ಹರೀಶ್ ಬಾಲು, ವಿ. ಲಿಂಗರಾಜು ಭಾಗವಹಿಸಿದ್ದರು. ಟ್ರಸ್ಟ್‌ನ ಬಿ.ಆರ್. ಶಿವಕುಮಾರ್ ಕಾರ್ಯಕ್ರಮ ಸಂಯೋಜಿಸಿದರು. ಎಸ್. ಕುಮಾರ್ ನಿರೂಪಿಸಿದರು. ಅವಿನಂದ ಭೈರವ ಪ್ರಾರ್ಥಿಸಿದರು. ಹನುಮಂತ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.