ADVERTISEMENT

ಬಾಲ ಕಳೆದುಕೊಂಡಿದ್ದ ಸಲಗಕ್ಕೆ ಚಿಕಿತ್ಸೆ: ಇಲಾಖೆ ನಿಗಾ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 19:18 IST
Last Updated 6 ನವೆಂಬರ್ 2020, 19:18 IST
ಅರಣ್ಯ ಇಲಾಖೆ ಸಿಬ್ಬಂದಿ ಸಲಗಕ್ಕೆ ಚಿಕಿತ್ಸೆ ನೀಡಿದರು
ಅರಣ್ಯ ಇಲಾಖೆ ಸಿಬ್ಬಂದಿ ಸಲಗಕ್ಕೆ ಚಿಕಿತ್ಸೆ ನೀಡಿದರು   

ರಾಮನಗರ: ಕಾವೇರಿ ವನ್ಯಜೀವಿಧಾಮ ಸಂಗಮ ವಲಯದಲ್ಲಿ ಕಾದಾಟದಿಂದ ಬಾಲ ಕಳೆದುಕೊಂಡಿದ್ದ ಸಲಗಕ್ಕೆ ಶುಕ್ರವಾರ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಡಲಾಯಿತು.

ನೋವು ಮತ್ತು ನೊಣಗಳಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ನಿಂತಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ದಿನಗಳಿಂದ ನಿಗಾ ಇಟ್ಟಿದ್ದರು. ಗೋಪಾಲಸ್ವಾಮಿ ಹಾಗೂ ಅಭಿಮನ್ಯು ಆನೆಗಳ ಸಹಾಯ ಪಡೆದು ಡಾ.ಉಮಾಶಂಕರ್ ಮತ್ತು ಡಾ.ಮಂಜುನಾಥ ಸಲಗಕ್ಕೆ ಅರವಳಿಕೆ ನೀಡಿ ಆ್ಯಂಟಿಬಯೋಟಿಕ್ ಮತ್ತು ನೋವು ನಿವಾರಕ ಚುಚ್ಚುಮದ್ದು ನೀಡಿದ್ದಾರೆ. ಗಾಯ ಮಾಯುವ ತನಕ ನಿರಂತರ ನಿಗಾ ಇಡಲು ಅರಣ್ಯ ಇಲಾಖೆ ಸೂಚಿಸಿದೆ. ಸಲಗಕ್ಕೆ 25 ವರ್ಷ ವಯಸ್ಸಾಗಿದ್ದು ಲದ್ದಿ, ಗಂಜಲದಿಂದಾಗಿ ಗಾಯ ಹರಡಿ ಹುಳು ಬಂದಿತ್ತು. 50 ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.

‘ಆನೆಯ ಬಾಲ ಮಾತ್ರ ಮುರಿದಿಲ್ಲ. ಪೃಷ್ಠ ಭಾಗಕ್ಕೂ ಏಟಾಗಿದೆ. ಚಿಕಿತ್ಸೆ ನೀಡಲಾಗಿದ್ದು, ಗುಣವಾಗಲಿದೆ ಎಂಬ ವಿಶ್ವಾಸವಿದೆ’ ಎಂದು ಚಾಮರಾಜನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ‘ಪ್ರಜಾವಾಣಿ’ ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.