ADVERTISEMENT

ಉದ್ಯೋಗ ಕೊಟ್ಟ ಮಾಲೀಕರ ಹತ್ಯೆ! ವಾಯುಸೇನೆ ನಿವೃತ್ತ ಪೈಲಟ್‌ ಕೊಲೆ ಆರೋಪಿ ಬಂಧನ

ಸಹಚರ ಪರಾರಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 20:41 IST
Last Updated 9 ಫೆಬ್ರುವರಿ 2022, 20:41 IST
ರಾಜನ್‌ ದಂಪತಿ ವಾಸವಿದ್ದ ಮನೆ
ರಾಜನ್‌ ದಂಪತಿ ವಾಸವಿದ್ದ ಮನೆ   

ರಾಮನಗರ: ಹಣದ ಆಸೆಗೆ ಬಿದ್ದು ತನಗೆ ಉದ್ಯೋಗ ಕೊಟ್ಟಿದ್ದ ಮನೆ ಮಾಲೀಕರನ್ನೇ ಹತ್ಯೆ ಮಾಡಿದ ಆರೋಪಿ ಇದೀಗ ಜೈಲಿನಲ್ಲಿ ಉಳಿದ ಜೀವನ ಕಳೆಯುವಂತೆ ಆಗಿದೆ.

ಈಗಲ್‌ಟನ್‌ ಲೇಔಟ್‌ ಆವರಣದಲ್ಲಿರುವ ಸಿ–21 ವಿಲ್ಲಾದಲ್ಲಿ ಮಂಗಳವಾರ ದಂಪತಿ ಹತ್ಯೆ ಮಾಡಿದ್ದ ಬಿಹಾರ ಮೂಲದ ಜೋಗಿಂದರ್ ಕುಮಾರ್‌ ಯಾದವ್‌ (21) ಎಂಬ ಆರೋಪಿಯನ್ನು ಘಟನೆ ನಡೆದ 24 ಗಂಟೆ ಒಳಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಕೃತ್ಯಕ್ಕೆ ಸಹಕರಿಸಿದ್ದ ಮತ್ತೊಬ್ಬ ಆರೋಪಿ ರವಿ ಕುಮಾರ್‌ ಯಾದವ್‌ ತಲೆಮರಿಸಿಕೊಂಡಿದ್ದಾನೆ.

ತನಗೆ ಹಣದ ಅವಶ್ಯಕತೆ ಇದ್ದು, ರಾಜನ್ ಬಳಿ ಭಾರಿ ಹಣ ಇದೆ ಎಂದು ಹತ್ಯೆ ಮಾಡಿದ್ದಾಗಿ ಆರೋಪಿ ಪೊಲೀಸ್‌ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ADVERTISEMENT

ಚೆನ್ನೈನವರಾದ ರಘುರಾಮ್‌ ರಾಜನ್‌ (65) ವಾಯುಪಡೆಯಲ್ಲಿ ಪೈಲಟ್‌ ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಪತ್ನಿ ಆಶಾ ರಾಜನ್ (60) ಜೊತೆ ಈಗಲ್‌ಟನ್‌ ಲೇಔಟ್‌ನ ವಿಲ್ಲಾವೊಂದರಲ್ಲಿ ವಾಸ್ತವ್ಯ ಹೂಡಿದ್ದರು.

ಆರೋಪಿ ಜೋಗಿಂದರ್‌ ಕುಮಾರ್ ಯಾದವ್‌ ಬಿಹಾರದಿಂದ ಇಲ್ಲಿಗೆ ವಲಸೆ ಬಂದಿದ್ದು, ಕಳೆದ 20 ವರ್ಷದಿಂದ ಈಗಲ್‌ಟನ್ ಲೇಔಟ್‌ ಸುತ್ತಮುತ್ತಲಿನ ಮನೆಗಳಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ. ಜೋಗಿಂದರ್‌ ಬಿಹಾರದ ಮೂಲದವನಾಗಿದ್ದು, ಮೂರು ವರ್ಷದ ಹಿಂದೆ ರಾಜನ್‌ರ ಮನೆಯಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದ.

ತಿಂಗಳ ಹಿಂದೆ ಹಣ ಡ್ರಾ: ತಿಂಗಳ ಹಿಂದೆ ಕೆಲಸದ ವೇಳೆ ಆರೋಪಿಯು ರಾಜನ್‌ರಿಗೆ ಗೊತ್ತಾಗದಂತೆ ಅವರ ಮೊಬೈಲ್‌ ಬಳಸಿ ಅವರ ಗೂಗಲ್‌ ಪೇ ಖಾತೆಯಿಂದ ತನ್ನ ಸ್ನೇಹಿತನ ಖಾತೆಗೆ ₹70 ಸಾವಿರ ಹಣ ವರ್ಗಾಯಿಸಿಕೊಂಡಿದ್ದ. ರಾಜನ್ ದಂಪತಿ ಖಾತೆಯಲ್ಲಿ ಭಾರಿ ಹಣ ಇರಬಹುದು ಎಂಬ ನಿರ್ಧಾರಕ್ಕೆ ಬಂದ ಆರೋಪಿ ಆ ಹಣ ಲಪಟಾಯಿಸುವ ಸಲುವಾಗಿ ಸ್ನೇಹಿತನ ಜೊತೆಗೂಡಿ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ

ಒಡವೆ ಗಂಟು ಬಿಟ್ಟು ಹೋದರು!
ರಾಜನ್‌ ದಂಪತಿ ಬ್ಯಾಂಕ್‌ ಖಾತೆಗಳಲ್ಲಿ ಭಾರಿ ಮೊತ್ತದ ಹಣ ಹಾಗೂ ಮನೆಯಲ್ಲಿ ನಗದು, ಒಡವೆ ಇದೆ ಎಂಬ ಆಸೆಯಿಂದ ಆರೋಪಿ ಜೋಗಿಂದರ್‌ ಹತ್ಯೆಗೆ ಸಂಚು ರೂಪಿಸಿದ್ದ. ಮೊದಲ ಬಾರಿ ರಾಜನ್ ಮೊಬೈಲ್‌ನಿಂದ ಹಣ ವರ್ಗಾವಣೆ ಮಾಡಿಕೊಳ್ಳುವ ವೇಳೆ ಯಾವುದೇ ಪಾರ್ಸ್‌ವರ್ಡ್‌ ಕೇಳಿರಲಿಲ್ಲ. ಕೇವಲ ಒಟಿಪಿ ಆಧರಿಸಿ ಹಣ ವರ್ಗಾವಣೆ ಆಗಿತ್ತು. ಹೀಗಾಗಿ ಈ ಬಾರಿಯೂ ಅಷ್ಟೇ ಸುಲಭವಾಗಿ ಹಣ ಕಳುಹಿಸಿಕೊಳ್ಳಬಹುದು ಎಂಬುದು ಆರೋಪಿಗಳ ಅಂದಾಜಾಗಿತ್ತು. ಆದರೆ ಈ ಬಾರಿ ಪಾಸ್‌ವರ್ಡ್ ಬದಲಾಗಿದ್ದು, ಆ್ಯಪ್‌ ಲಾಕ್‌ ಆದ ಕಾರಣಕ್ಕೆ ಆನ್‌ಲೈನ್‌ ಮೂಲಕ ಹಣ ವರ್ಗಾವಣೆ ಸಾಧ್ಯವಾಗಲಿಲ್ಲ. ಕಡೆಗೆ ಮನೆಯಲ್ಲಿದ್ದ ಒಡವೆಗಳನ್ನು ಗಂಟು ಕಟ್ಟಿಟ್ಟುಕೊಂಡಿದ್ದ ಆರೋ‍ಪಿ ಅದರ ಜೊತೆ ಪರಾರಿ ಆಗಲು ಯೋಜಿಸಿದ್ದ. ಆದರೆ ಕಡೆಯ ಅವಧಿಯಲ್ಲಿ ಭದ್ರತಾ ಸಿಬ್ಬಂದಿ ಮನೆಗೆ ಬಂದ ಕಾರಣಕ್ಕೆ ಗಾಬರಿಯಲ್ಲಿ ಒಡವೆ ಗಂಟು ಅಲ್ಲಿಯೇ ಬಿಟ್ಟು ₹50 ಸಾವಿರ ನಗದು ಜೊತೆ ಅಲ್ಲಿಂದ ಪರಾರಿ ಆಗಿದ್ದ.

ಕೊಂದು ವಾಂತಿ ಮಾಡಿಕೊಂಡರು
ರಾಜನ್‌ ದಂಪತಿ ಹತ್ಯೆ ಮಾಡಿದ ಆರೋಪಿಗಳಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ. ಹಣದ ಆಸೆಗೆ ಬಿದ್ದು ಮೊದಲ ಬಾರಿಗೆ ಕೊಲೆ ಕೃತ್ಯಕ್ಕೆ ಮುಂದಾಗಿದ್ದರು. ರಾಜನ್‌ರನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ ವೇಳೆ ಅದನ್ನು ನೋಡಲಾಗದೇ ಕೊಠಡಿಯಲ್ಲಿ ವಾಂತಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ಒಡವೆ ಗಂಟು ಬಿಟ್ಟು ಹೋದರು!
ರಾಜನ್‌ ದಂಪತಿ ಬ್ಯಾಂಕ್‌ ಖಾತೆಗಳಲ್ಲಿ ಭಾರಿ ಮೊತ್ತದ ಹಣ ಹಾಗೂ ಮನೆಯಲ್ಲಿ ನಗದು, ಒಡವೆ ಇದೆ ಎಂಬ ಆಸೆಯಿಂದ ಆರೋಪಿ ಜೋಗಿಂದರ್‌ ಹತ್ಯೆಗೆ ಸಂಚು ರೂಪಿಸಿದ್ದ. ಮೊದಲ ಬಾರಿ ರಾಜನ್ ಮೊಬೈಲ್‌ನಿಂದ ಹಣ ವರ್ಗಾವಣೆ ಮಾಡಿಕೊಳ್ಳುವ ವೇಳೆ ಯಾವುದೇ ಪಾರ್ಸ್‌ವರ್ಡ್‌ ಕೇಳಿರಲಿಲ್ಲ, ಆದರೆ ಎರಡನೇ ಬಾರಿ ಪಾಸ್‌ವರ್ಡ್ ಬದಲಾಗಿದ್ದು, ಆ್ಯಪ್‌ ಲಾಕ್‌ ಆದ ಕಾರಣಕ್ಕೆ ಹಣ ವರ್ಗಾವಣೆ ಸಾಧ್ಯವಾಗಲಿಲ್ಲ. ಕಡೆಗೆ ಮನೆಯಲ್ಲಿದ್ದ ಒಡವೆಗಳನ್ನು ಗಂಟು ಕಟ್ಟಿಟ್ಟುಕೊಂಡಿದ್ದ ಆರೋ‍ಪಿ, ಭದ್ರತಾ ಸಿಬ್ಬಂದಿ ಮನೆಗೆ ಬಂದ ಕಾರಣಕ್ಕೆ ಗಾಬರಿಯಲ್ಲಿ ಒಡವೆ ಗಂಟು ಅಲ್ಲಿಯೇ ಬಿಟ್ಟು ₹50 ಸಾವಿರ ನಗದು ಜೊತೆ ಅಲ್ಲಿಂದ ಪರಾರಿ ಆಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.