ADVERTISEMENT

ಲೋಕೋದ್ಧಾರಕ್ಕೆ ಜೀವನ ನಡೆಸಿ: ಚಂದ್ರಶೇಖರಸ್ವಾಮಿ

ಮಾಗಡಿಯಲ್ಲಿ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ

​ಪ್ರಜಾವಾಣಿ ವಾರ್ತೆ
Published 19 ಮೇ 2019, 14:06 IST
Last Updated 19 ಮೇ 2019, 14:06 IST
ಮಾಗಡಿಯಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ನೇತ್ರತಜ್ಞ ಡಾ.ನರಪತ್‌ ಸೋಳಂಕಿ ಅವರನ್ನು ಶ್ರೀಬೇವಾರಸಂಘ ಯುವಶಾಖಾದ ಅಧ್ಯಕ್ಷ ಲಲಿತ್‌ ಕುಮಾರ್‌ ಡಾಕಲಿಯ ಸನ್ಮಾನಿಸಿದರು.
ಮಾಗಡಿಯಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ನೇತ್ರತಜ್ಞ ಡಾ.ನರಪತ್‌ ಸೋಳಂಕಿ ಅವರನ್ನು ಶ್ರೀಬೇವಾರಸಂಘ ಯುವಶಾಖಾದ ಅಧ್ಯಕ್ಷ ಲಲಿತ್‌ ಕುಮಾರ್‌ ಡಾಕಲಿಯ ಸನ್ಮಾನಿಸಿದರು.   

ಮಾಗಡಿ: ಜ್ಞಾನದೀಪವನ್ನು ಮನಸ್ಸಿನಲ್ಲಿ ಬೆಳಗಿಸಿಕೊಂಡು ಪ್ರತಿಯೊಂದು ಸಮಸ್ಯೆಯನ್ನೂ ಆಟವೆಂದು ತಿಳಿದು, ಲೋಕೋದ್ಧಾರಕ್ಕಾಗಿ ಜೀವನ ನಡೆಸಬೇಕು ಎಂದು ಕೆಂಪೇಗೌಡರ ಗುರುಮಠ ಗುಮ್ಮಸಂದ್ರ ರುದ್ರಮುನೀಶ್ವರ ಮಠಾಧೀಶ ಚಂದ್ರಶೇಖರಸ್ವಾಮಿ ತಿಳಿಸಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬೆಂಗಳೂರಿನ ಡಾ.ಸೋಳಂಕಿ ಕಣ್ಣಿನ ಆಸ್ಪತ್ರೆ ವತಿಯಿಂದ ಭಾನುವಾರ ನಡೆದ ಉಚಿತ ನೇತ್ರಪೊರೆ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚೇಂದ್ರಿಯ ಮತ್ತು ಕರ್ಮೇಂದ್ರಿಗಳಲ್ಲಿ ಕಣ್ಣು ಪ್ರಮುಖ ಅಂಗ. ಕಣ್ಣುಗಳು ಕೆಲಸ ಮಾಡಿದಿದ್ದರೆ ಅವರನ್ನು ಮನುಷ್ಯ ಅನ್ನುವುದಿಲ್ಲ. ಜ್ಞಾನ ಚಕ್ಷು ಶಿವಬಾಬಾ ಹೆಸರಿನಲ್ಲಿ ಉಚಿತವಾಗಿ ನೇತ್ರ ಚಿಕಿತ್ಸೆ ಮಾಡಿ ಬಡವರಿಗೆ ದೇವರ ದರ್ಶನ ಮಾಡಿಸುತ್ತಿರುವ ನೇತ್ರ ತಜ್ಞ ಡಾ.ನರಪತ್‌ ಸೋಳಂಕಿ ಅವರ ಸೇವೆ ನಿಜವಾದ ಜೀವಂತ ದೇವರ ಸೇವೆಯಾಗಿದೆ.ಮನಸ್ಸಿನಿಂದ ಶಿವಪರಮಾತ್ಮನ್ನು ನೆನಪು ಮಾಡಿಕೊಳ್ಳಬೇಕು.ಕಣ್ಣಿನ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ADVERTISEMENT

ನೇತ್ರ ತಜ್ಞ ಡಾ.ನರಪತ್‌ ಸೋಳಂಕಿ ಮಾತನಾಡಿ, ಗ್ರಾಮಾಂತರದಲ್ಲಿ ಕಣ್ಣಿನ ತೊಂದರೆ ಇರುವವರಿಗೆ ಉಚಿತವಾಗಿ ಚಿಕಿತ್ಸೆ ಮಾಡಿ, ಕನ್ನಡಕ ನೀಡುತ್ತಿದ್ದೇವೆ. ಕಣ್ಣಿನ ತೊಂದರೆ ಇರುವ 2.60 ಲಕ್ಷ ಜನರಿಗೆ ರಾಜ್ಯದಲ್ಲಿ ಚಿಕಿತ್ಸೆ ಮಾಡಿ ಬೆಂಗಳೂರಿನ ಶ್ರೀ ಬೇವಾರ್‌ಸಂಘ ಯುವ ಶಾಖಾದ ಸಹಕಾರದಿಂದ ಉಚಿತ ಕನ್ನಡಕ ನೀಡಿ ಗುಣಮುಖರನ್ನಾಗಿಸಿದ್ದೇವೆ ಎಂದರು.

‘ನಮ್ಮ ಆಸ್ಪತ್ರೆಯ ವತಿಯಿಂದ ಆಫ್ರಿಕಾ ಖಂಡದ ವಿವಿಧ ದೇಶಗಳಲ್ಲೂ ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಿದ್ದೇವೆ. ಕಣ್ಣಿನ ಮೂಲಕ ಬಡವರನ್ನು ದೇವರಂತೆ ನೋಡಿ ಪ್ರೀತಿ ಅನುಕಂಪ, ಸೌಹಾರ್ಧದಿಂದ ಬದುಕುವಂತಾಗಲಿ ಎಂಬುದು ನಮ್ಮೆಲ್ಲರ ಉದ್ದೇಶವಾಗಿದೆ’ ಎಂದರು.

ಶ್ರೀ ಬೇವಾರ್‌ಸಂಘ ಯುವ ಶಾಖಾದ ಅಧ್ಯಕ್ಷ ಲಲಿತ್‌ ಕುಮಾರ್‌ ಡಾಕಲಿಯ ಮಾತನಾಡಿ, ‘ನಮ್ಮ ಸಂಘದ ವತಿಯಿಂದ ನಿಸ್ವಾರ್ಥವಾಗಿ ಬಡವರ ಸೇವೆಗೆ ಸ್ವಲ್ಪಭಾಗ ಹಣವನ್ನು ಮೀಸಲಿಟ್ಟಿದ್ದೇವೆ. ಕಣ್ಣಿನ ತೊಂದರೆಯಿಂದ ಬಳಲುವವರಿಗೆ ಬೆಳಕು ನೀಡುವುದು ನಮ್ಮೆಲ್ಲರ ಉದ್ದೇಶವಾಗಿದೆ’ ಎಂದರು.

ನಂದಿ ಚಾಲನಾ ತರಬೇತಿ ಕೇಂದ್ರದ ಪ್ರಾಂಶುಪಾಲ ನರಸಿಂಹ ಮೂರ್ತಿ ಮಾತನಾಡಿ, ರೈತಾಪಿವರ್ಗದವರು ಕಣ್ಣಿನ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಬೇಕು. ವರನಟ ಡಾ.ರಾಜ್‌ ಕುಮಾರ್‌ ನೇತ್ರದಾನ ಮಾಡಿದಂತೆ, ಮೃತವ್ಯಕ್ತಿಯ ಕಣ್ಣನ್ನು ಮಣ್ಣಲ್ಲಿ ಹೂತುಹಾಕದೆ ನೇತ್ರದಾನ ಮಾಡಿ ಮತ್ತೊಬ್ಬರಿಗೆ ಬೆಳಕು ನೀಡಬೇಕು ಎಂದರು.

ಬ್ರಹ್ಮಕುಮಾರಿ ತ್ರಿವೇಣಿ ಮಾತನಾಡಿ, ನಮ್ಮ ಆಶ್ರಮದ ವತಿಯಿಂದ ಪ್ರತಿವರ್ಷವೂ ಉಚಿತ ನೇತ್ರ ಚಿಕಿತ್ಸೆ ಶಿಬಿರ ಮಾಡಿ ಶಿವ ಪರಮಾತ್ಮನ ದರ್ಶನಕ್ಕೆ ಬೇಕಾದ ಸೇವೆ ಮಾಡುವಂತೆ ಶಿವಬಾಬಾ ಅವರಿಂದ ಪ್ರೇರಣೆಯಾಗಿದೆ ಎಂದರು.

ವಿದ್ಯಾರ್ಥಿನಿ ಸಿಂಧೂ, ದಾಣುಗಳಾದ ಪುಷ್ಪಾಬಾಯಿ ಸಂಜೀವಕುಮಾರ್‌, ವಿಕಾಶ್‌ ಕುಮಾರ್‌, ಕುಲದೀಪ್‌ ಜಿಕಾರ್ಜಿ, ರಾಜಾಬಾಬು ಫರಾಕ್‌, ಮನೀಶ್‌ ಜೈನ್‌ ಭಾಪನಾ, ನರೇಶ್‌ ಬೋರ್ಹಾ, ಜಿಜೇಂದ್ರ ಖೈರಾರ್‌, ಗಂಗಾಧರಣ್ಣ, ರಮೇಶ್‌, ತಿರುಮಲೆ ಶ್ರೀನಿವಾಸ್‌, ರಂಗಪ್ಪ, ಮುನಿಯಪ್ಪ ಕಣ್ಣಿನ ಆರೋಗ್ಯ ರಕ್ಷಣೆಯ ಬಗ್ಗೆ ಮಾತನಾಡಿದರು. ಶ್ರೀ ಬೇವಾರ್‌ ಸಂಘ ಯುವಶಾಖಾದ ವತಿಯಿಂದ ನೇತ್ರ ತಜ್ಞ ಡಾ.ನರಪತ್‌ ಸೋಳಂಕಿ ಅವರನ್ನು ಸನ್ಮಾನಿಸಲಾಯಿತು. ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದ ನೂರಾರು ಜನರನ್ನು ತಪಾಸಣೆ ಮಾಡಿ, ಆಯ್ದವರಬ್ಬಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.