ಚನ್ನಪಟ್ಟಣ ತಾಲ್ಲೂಕಿನಲ್ಲಿ ಉಚಿತವಾಗಿ ಹಂಚಲು ಸಿದ್ಧವಾಗಿರುವ ಗಣೇಶ ಮೂರ್ತಿ
ಚನ್ನಪಟ್ಟಣ: ಗೌರಿ ಗಣೇಶ ಹಬ್ಬ ಹತ್ತಿರವಾಗುತ್ತಿರುವಂತೆ ತಾಲ್ಲೂಕಿನ ಪ್ರಮುಖ ನಾಯಕರು ತಾಲ್ಲೂಕಿನ ಜನತೆಗೆ ಗಣೇಶ ಮೂರ್ತಿಗಳನ್ನು ಉಚಿತವಾಗಿ ಹಂಚುವ ಕಾರ್ಯಕ್ಕೆ ಮುಂದಾಗಿದ್ದು, ಇದು ಗಣೇಶಮೂರ್ತಿ ತಯಾರಿಸಿ ಮಾರಾಟ ಮಾಡುವ ವ್ಯಾಪಾರಸ್ಥರ ಬದುಕಿನ ಮೇಲೆ ಬರೆ ಎಳೆದಿದೆ.
ಶಾಸಕ ಸಿ.ಪಿ.ಯೋಗೇಶ್ವರ್ ಅವರು ವೈಯಕ್ತಿಕವಾಗಿ 600ಕ್ಕೂ ಹೆಚ್ಚು ಮೂರ್ತಿಗಳನ್ನು ಹಾಗೂ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ.ಜಯಮುತ್ತು ಅವರು ಚನ್ನಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ 700 ಗಣೇಶ ಮೂರ್ತಿ ಹಂಚಲು ಈಗಾಗಲೇ ಪ್ರಕಟಣೆ ಹೊರಡಿಸಿದ್ದಾರೆ. ಇಬ್ಬರೂ ನೋಂದಣಿ ಕಾರ್ಯ ಆರಂಭಿಸಿದ್ದಾರೆ.
ಜಯಮುತ್ತು ಅವರು 2009ರಿಂದ ತಾಲ್ಲೂಕಿನ ಜನತೆಗೆ ಗಣೇಶಮೂರ್ತಿಗಳನ್ನು ವಿತರಿಸುತ್ತಿದ್ದಾರೆ. 2023ರಲ್ಲಿ ಮಾತ್ರ ಹಂಚಿಕೆ ಮಾಡಿಲ್ಲ. 2024ರಲ್ಲಿ 1001 ಗಣೇಶ ಮೂರ್ತಿಗಳನ್ನು ಹಂಚಿದ್ದರು. 2024ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾದ ನಂತರ ಅವರ ರಾಜೀನಾಮೆಯಿಂದ ತೆರವಾಗಿದ್ದ ಶಾಸಕ ಸ್ಥಾನಕ್ಕೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಾಗಾಗಿ ಹೆಚ್ಚು ಗಣೇಶ ಮೂರ್ತಿ ಹಂಚಿ ಯುವಜನರ ಮನಗೆಲ್ಲಲು ಪ್ರಯತ್ನಿಸಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಟಿಕೆಟ್ ನಿಖಿಲ್ ಕುಮಾರಸ್ವಾಮಿ ಪಾಲಾಗಿತ್ತು.
ಶಾಸಕ ಸಿ.ಪಿ.ಯೋಗೇಶ್ವರ್ ಅವರು 2022ರಲ್ಲಿ ಒಮ್ಮೆ 500ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಹಂಚಿದ್ದರು. 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸೋತಿದ್ದ ಯೋಗೇಶ್ವರ್ 2023ರ ವಿಧಾನಸಭಾ ಚುನಾವಣೆ ಮನಸ್ಸಿನಲ್ಲಿಟ್ಟುಕೊಂಡು ಗಣೇಶ ಮೂರ್ತಿ ವಿತರಣೆ ಕಾರ್ಯಕ್ಕೆ ಮುಂದಾಗಿದ್ದರು. ನಂತರ 2024ರಲ್ಲಿ 1000 ಗಣೇಶ ಮೂರ್ತಿ ವಿತರಿಸಿದ್ದರು. ಜೊತೆಗೆ ಈ ಬಾರಿ ಗಣೇಶ ಮೂರ್ತಿ ವಿತರಣೆಗೆ ಸಿದ್ಧತೆ ನಡೆಸಿದ್ದಾರೆ.
ಇಬ್ಬರು ನಾಯಕರು ಗಣೇಶ ಮೂರ್ತಿ ವಿತರಣೆಗೆ ಮುಂದಾಗಿ ರುವುದು ಗಣೇಶ ತಯಾರಿ ಮಾರಾಟ ಮಾಡುವವರ ಬದುಕಿನ ಮೇಲೆ ಬರೆ ಎಳೆದಿದೆ. ಗಣೇಶ ಮೂರ್ತಿಗಳ ಮಾರಾಟವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಮಂದಿಗೆ ಇದು ನುಂಗಲಾರದ ತುತ್ತಾಗಿದೆ.
‘ಪ್ರತಿ ವರ್ಷ ಗಣೇಶ ಮೂರ್ತಿಗಳನ್ನು ಈ ರೀತಿ ತಾಲ್ಲೂಕಿನ ಜನತೆಗೆ ಉಚಿತವಾಗಿ ವಿತರಿಸಿದರೆ ಯುವಕರು ಗಣೇಶಮೂರ್ತಿ ಖರೀದಿಸುವ ಗೋಜಿಗೆ ಹೋಗುವುದಿಲ್ಲ. ಇದರಿಂದ ನಮ್ಮ ವ್ಯಾಪಾರದ ಮೇಲೆ ಹೊಡೆತ ಬೀಳುತ್ತಿದೆ. ರಾಜಕೀಯ ನಾಯಕರು ಈ ವೃತ್ತಿಯನ್ನು ಅವಲಂಬಿಸಿರುವ ತಾಲ್ಲೂಕಿನ ಗಣೇಶ ತಯಾರಿಕರಿಂದಲೇ ಮೂರ್ತಿ ಖರೀದಿಸಿ ಹಂಚಿಕೆ ಮಾಡಿದರೆ ನಮ್ಮ ಬದುಕಿಗೆ ಆಸರೆಯಾಗುತ್ತದೆ ಎಂಬುದು ಗಣೇಶ ತಯಾರಕ ಅಳಲಾಗಿದೆ‘.
ಗಣೇಶ ತಯಾರಕರ ಬದುಕಿನ ಬಗ್ಗೆಯೂ ರಾಜಕಾರಣಿಗಳು ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಗಣೇಶ ತಯಾಕರಿಗೆ ಆಸರೆಯಾಗಲಿ ಎಂಬುದು ಸಾರ್ವಜನಿಕರ ಮಾತಾಗಿದೆ.
ಸ್ಥಳೀಯ ತಯಾರಕರನ್ನು ಪರಿಗಣಿಸಿ
ಗಣೇಶಮೂರ್ತಿಗಳ ಉಚಿತ ಹಂಚಿಕೆ ವಿಚಾರವಾಗಿ ಸ್ಥಳೀಯ ಮೂರ್ತಿ ತಯಾರಕರನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ಸ್ಥಳೀಯ ಗಣೇಶ ಮೂರ್ತಿ ತಯಾರಕರ ಬದುಕು ಸಮಸ್ಯೆಗೆ ಸಿಲುಕಿದೆ. ನೂರಾರು ಮೂರ್ತಿಗಳನ್ನು ಖರೀದಿಸುವ ರಾಜಕಾರಣಿಗಳು ಸ್ಥಳೀಯ ತಯಾರಕರನ್ನು ಪರಿಗಣಿಸಬೇಕು.
-ವೆಂಕಟೇಶ್, ಗಣೇಶ ಮೂರ್ತಿ ತಯಾರಕ, ಚನ್ನಪಟ್ಟಣ
ಹೆಚ್ಚು ಮೂರ್ತಿ ದೊರೆಯುತ್ತಿಲ್ಲ
ಸ್ಥಳೀಯವಾಗಿ ದೊಡ್ಡಮಟ್ಟದಲ್ಲಿ ಗಣೇಶಮೂರ್ತಿ ತಯಾರಿಕರಲ್ಲ. ಹಾಗಾಗಿ ನಾವು ಹೊರಗಿನ ವ್ಯಾಪಾರಸ್ಥರಿಂದ ಖರೀಸುತ್ತಿದ್ದೇವೆ. ಹೆಚ್ಚು ಗಣೇಶ ಮೂರ್ತಿ ತಯಾರಿಸಿಕೊಡುವವರು ಸ್ಥಳೀಯವಾಗಿ ಮುಂದೆ ಬಂದರೆ ಮುಂದಿನ ವರ್ಷದಿಂದ ಅವರಿಂದಲೇ ಖರೀದಿಸಲಾಗುವುದು.
-ಎಚ್.ಸಿ.ಜಯಮುತ್ತು, ಚನ್ನಮ್ಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಚನ್ನಪಟ್ಟಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.