ರಾಮನಗರ ನಗರಸಭೆಯು ಪಿಯು ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಾದ ಜೆಇಇ, ನೀಟ್ ಹಾಗೂ ಸಿಇಟಿ ತರಬೇತಿ ಕಾರ್ಯಕ್ರಮಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಚಾಲನೆ ನೀಡಿದರು.
ರಾಮನಗರ: ಎಂಜಿನಿಯರಿಂಗ್ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದ ವೃತ್ತಿಪರ ಕೋರ್ಸ್‌ಗಳು ಬಡವರಿಗಲ್ಲ. ಅವು ಶ್ರೀಮಂತರಿಗಷ್ಟೇ ಎಂಬುದು ಬಡ, ಮಧ್ಯಮ ವರ್ಗದಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತು. ಇದೇ ಕಾರಣಕ್ಕೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದಿದರೂ, ಬಹುತೇಕ ಬಡ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳ ಬದಲು ಪದವಿ ಕೋರ್ಸ್‌ಗಳತ್ತ ಗಮನ ಹರಿಸುತ್ತಾರೆ.
ಇದಕ್ಕೆ ಮುಖ್ಯ ಕಾರಣ ಈ ಕೋರ್ಸ್‌ಗಳಿಗೆ ನಡೆಯುವ ಪ್ರವೇಶ ಪರೀಕ್ಷೆಗಳಾದ ಜೆಇಇ, ನೀಟ್ ಹಾಗೂ ಸಿಇಟಿ! ಪಿಯುಸಿಲ್ಲಿ ಉತ್ತಮ ಅಂಕ ಪಡೆದರೂ, ಕಬ್ಬಿಣದ ಕಡಲೆಯಾದ ಪ್ರವೇಶ ಪರೀಕ್ಷೆಯಲ್ಲಿ ಬಡ ವಿದ್ಯಾರ್ಥಿಗಳು ಸೂಕ್ತ ತರಬೇತಿ ಇಲ್ಲದೆ ಹಿಂದೆ ಬೀಳುತ್ತಾರೆ.
ಈ ರೀತಿ ಕಮರುವ ಬಡ ವಿದ್ಯಾರ್ಥಿಗಳ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳ ಕನಸಿಗೆ ನೀರೆರೆಯಲು ರಾಮನಗರ ನಗರಸಭೆ ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳ ಕನಸಿಗೆ ನೀರೆರೆಯಲು ಉಚಿತವಾಗಿ ತರಬೇತಿ ನೀಡಲು ಮುಂದಾಗಿದೆ. ಅದಕ್ಕಾಗಿ, ಬೆಂಗಳೂರಿನ ಅಕ್ಕಾ ಐಎಎಸ್ ಅಕಾಡೆಮಿ ಜೊತೆ ಒಪ್ಪಂದ ಮಾಡಿಕೊಂಡಿದೆ.
ಅದ್ಧೂರಿ ಚಾಲನೆ: ಪ್ರಸಕ್ತ ಸಾಲಿನಲ್ಲಿ 8 ತಿಂಗಳು ನಡೆಯಲಿರುವ ತರಬೇತಿ ಕಾರ್ಯಕ್ರಮಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಚಾಲನೆ ನೀಡಲಾಯಿತು. ನಗರದಲ್ಲಿರುವ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಕಿಕ್ಕಿರಿದು ಸೇರಿದ್ದು, ಇಂತಹದ್ದೊಂದು ತರಬೇತಿಗಾಗಿ ಎಷ್ಟು ಹಸಿದಿದ್ದರು ಎಂಬುದಕ್ಕೆ ಸಾಕ್ಷಿಯಾಗಿತ್ತು. ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತರಬೇತಿಗೆ ಚಾಲನೆ ನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪೌರಾಯುಕ್ತ ಡಾ. ಜಯಣ್ಣ, ‘ಬಡ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಗರಸಭೆಯು ಈ ತರಬೇತಿ ಹಮ್ಮಿಕೊಂಡಿದೆ. ಬಡ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ತರಬೇತಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ನುರಿತ ತರಬೇತುದಾರರು ಮಾರ್ಗದರ್ಶನ ಮಾಡಲಿದ್ದಾರೆ’ ಎಂದರು.
ಎಡಿಸಿ ಆರ್. ಚಂದ್ರಯ್ಯ, ‘ವಿದ್ಯಾರ್ಥಿಗಳು ಶಿಸ್ತು ಮತ್ತು ಬದ್ದತೆಯೊಂದಿಗೆ ತರಬೇತಿಯಲ್ಲಿ ಭಾಗವಹಿಸಬೇಕು. ಆಗಷ್ಟೇ ಪರೀಕ್ಷೆ ಪಾಸು ಮಾಡುವಷ್ಟು ಪರಿಣತಿ ಸಾಧಿಸಲು ಸಾಧ್ಯ’ ಎಂದರು. ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ಶೇಖರ್ ಜಿ.ಡಿ, ‘ಉಚಿತವಾದ ತರಬೆತಿ ಬಗ್ಗೆ ವಿದ್ಯಾರ್ಥಿಗಳು ನಿರ್ಲಕ್ಷ್ಯ ತೋರಬಾರದು’ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ‘ಬದುಕಿನಲ್ಲಿ ಎದುರಾಗುವ ತಿರುವುಗಳು ಮನುಷ್ಯನನ್ನು ಸಾಧನೆಗೆ ಪ್ರೇರೇಪಿಸುತ್ತವೆ. ವಿದ್ಯಾರ್ಥಿಗಳು ಅಂತಹ ತಿರುವುಗಳಿಂದ ಪ್ರೇರಣೆ ಪಡೆದು ಸಾಧಿಸಬೇಕು’ ಎಂದು ಸಲಹೆ ನೀಡಿದರು.
ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ. ಶಿವಣ್ಣ, ಖಜಾಂಚಿ ಪಿ. ಮಹೇಶ್, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಇತರರು ಇದ್ದರು. ಕಂದಾಯ ನಿರೀಕ್ಷಕ ಆರ್. ನಾಗರಾಜು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ಶಿವಸ್ವಾಮಿ ನಿರೂಪಣೆ ಮಾಡಿದರು. ಬ್ಯಾಡರಹಳ್ಳಿ ಶಿವಕುಮಾರ್ ಅವರ ತಂಡ ಗಾಯನ ನಡೆಸಿಕೊಟ್ಟಿತು.
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ದ್ವಿತೀಯ ಪಿಯು ಫಲಿತಾಂಶದಷ್ಟೇ ಅದಕ್ಕೆ ನಡೆಯುವ ಪ್ರವೇಶ ಪರೀಕ್ಷೆಗಳಲ್ಲಿನ ರ‍್ಯಾಂಕಿಂಗ್ ಕೂಡ ಮುಖ್ಯ. ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು.– ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ ಓದಿನ ಕಡೆಗೆ ತಮ್ಮ ಚಿತ್ತವನ್ನು ಹರಿಸಬೇಕು. ಈಗ ಗುರಿ ಕಡೆಗೆ ಗಮನ ಕೊಡದಿದ್ದರೆ ಮುಂದೆ ಜೀವನವಿಡೀ ಪರದಾಡಬೇಕಾಗುತ್ತದೆ.– ಸಿ.ಎಂ. ಲಿಂಗಪ್ಪ ಮಾಜಿ ಶಾಸಕ
‘ತರಬೇತಿಗೆ ವಿದ್ಯಾರ್ಥಿಗಳ ಮಿತಿ ಇಲ್ಲ’
‘ಬಡ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಗರಸಭೆಯು ರಾಜ್ಯದಲ್ಲೇ ಮೊದಲ ಪ್ರಯೋಗವಾಗಿ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಷ್ಟೇ ವಿದ್ಯಾರ್ಥಿಗಳು ಬಂದರೂ ತರಬೇತಿ ನೀಡಲಾಗುವುದು. ನಮ್ಮೂರಿನವರು ಹೆಚ್ಚಿನ ಸಂಖ್ಯೆಯಲ್ಲಿ ಎಂಜಿನಿಯರ್ ಮತ್ತು ವೈದ್ಯರಾಗಬೇಕು. ಆಗ ಈ ತರಬೇತಿ ಸಾರ್ಥಕವಾಗುತ್ತದೆ. ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿತ್ಯ ಸಂಜೆ 4ರಿಂದ 6 ಗಂಟೆವರೆಗೆ ತರಬೇತಿ ನಡೆಯಲಿದೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.
‘ಖಾಸಗಿ ತರಬೇತಿಗೆ ಕನಿಷ್ಠ ₹1 ಲಕ್ಷ ಬೇಕು’
‘ಖಾಸಗಿ ಕೋಚಿಂಗ್ ಸೆಂಟರ್‌ಗಳಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಕನಿಷ್ಠ ₹1 ಲಕ್ಷವಾದರೂ ಬೇಕು. ಬಡವರಿಗೆ ಅಷ್ಟು ಮೊತ್ತ ಭರಿಸಲು ಆಗದು. ಅದೇ ಕಾರಣಕ್ಕೆ ನಗರಸಭೆಯು ಉಚಿತವಾಗಿ ತರಬೇತಿ ನೀಡುತ್ತಿದೆ. ಸೆ. 15ರಿಂದ ಮುಂದಿನ ಏಪ್ರಿಲ್‌ವರೆಗೆ ತರಬೇತಿಗಳು ನಡೆಯಲಿದೆ. ಜೊತೆಗೆ ಸಂವಹನ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಯನ್ನೂ ನೀಡಲಾಗುವುದು’ ಎಂದು ಅಕ್ಕಾ ಐಎಎಸ್ ಅಕಾಡೆಮಿ ಅಧ್ಯಕ್ಷ ಡಾ. ಶಿವಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.