ADVERTISEMENT

ತುಂಗಣಿ ಗ್ರಾಮ: ಶುದ್ಧ ನೀರಿನ ಘಟಕ ಸ್ಥಗಿತ

ಪ್ರತಿ ನಿತ್ಯ ತೊಪ್ಪಗನಹಳ್ಳಿ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 3:06 IST
Last Updated 29 ಜೂನ್ 2022, 3:06 IST
ತೊಪ್ಪಗನಹಳ್ಳಿಯಲ್ಲಿ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕ
ತೊಪ್ಪಗನಹಳ್ಳಿಯಲ್ಲಿ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕ   

ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿ ತುಂಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಪ್ಪಗನಹಳ್ಳಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು 10 ದಿನಗಳು ಕಳೆದರೂ ದುರಸ್ತಿಗೊಂಡಿಲ್ಲ.

ಗ್ರಾಮದಲ್ಲಿ ಪಂಚಾಯಿತಿಯಿಂದ ಈ ಘಟಕವನ್ನು ನಿರ್ಮಾಣ ಮಾಡಿದ್ದು ಪಂಚಾಯಿತಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಇದ್ದಕ್ಕಿದ್ದಂತೆ ಘಟಕ ಕೆಟ್ಟು ಹೋಗಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಪಂಚಾಯಿತಿ ಆಡಳಿತವು ಗ್ರಾಮಸ್ಥರ ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದೆ. ರಿಪೇರಿ ಬಗ್ಗೆ ಗಮನ ಹರಿಸುತ್ತಿಲ್ಲ. ನೀರುಗಂಟಿಯನ್ನು ಕೇಳಿದರೆ ಪಂಚಾಯಿತಿಯಲ್ಲಿ ಕೇಳಿ ಎನ್ನುತ್ತಾರೆ. ಪಂಚಾಯಿತಿಯಲ್ಲಿ ಕೇಳಿದರೆ ತಮಗೇನು ಗೊತ್ತಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ತೊಪ್ಪಗನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT

ಶುದ್ಧ ಕುಡಿಯುವ ನೀರು ಸಿಗದಿರುವುದರಿಂದ ನೀರಿಗಾಗಿ ತುಂಗಣಿ, ರೈಸ್‌ಮಿಲ್‌ಗೆ ಹೋಗಬೇಕಿದೆ. ಅಷ್ಟು ದೂರಕ್ಕೆ ಹೋಗಲಾರದವರು ನಲ್ಲಿಯಲ್ಲಿ ಬರುವ ಕ್ಷಾರಯುಕ್ತ ನೀರನ್ನೇ ಕುಡಿಯಬೇಕಿದೆ. ಈ ನೀರು ಕುಡಿದು ಕೆಲವರಿಗೆ ಆರೋಗ್ಯ ಸಮಸ್ಯೆಯಾಗಿದೆ. ಗ್ರಾಮದಲ್ಲಿ ತಲೆದೋರಿರುವ ಶುದ್ಧ ಕುಡಿಯುವ ನೀರು ಪೂರೈಕೆ ಸಮಸ್ಯೆ ಬಗ್ಗೆ ಜನರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅವರ ಗಮನಕ್ಕೂ ತಂದಿದ್ದಾರೆ.

‘ಇಒ ಅವರು ಸೋಮವಾರ ಅಥವಾ ಮಂಗಳವಾರ ರಿಪೇರಿ ಮಾಡಿಸುವುದಾಗಿ ಹೇಳಿದ್ದರು. ಆದರೆ, ಅವರು ದುರಸ್ತಿಗೆ ಕ್ರಮವಹಿಸಿಲ್ಲ. ಗ್ರಾಮದಲ್ಲಿನ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹರಿಸುತ್ತಿಲ್ಲ. ಶೀಘ್ರವೇ ಬಗೆಹರಿಸಬೇಕು. ಇಲ್ಲವಾದರೆ ಪಂಚಾಯಿತಿ ಮುಂಭಾಗ ಧರಣಿ ನಡೆಸಲಾಗುವುದು’ ಎಂದು ಗ್ರಾಮದ ಮುಖಂಡರಾದ ಟಿ.ಕೆ. ಚಿಕ್ಕರಾಜು, ದೊಡ್ಡತಿಮ್ಮಯ್ಯ, ಗೋಪಾಲ್‌, ಶ್ರೀನಿವಾಸ್‌, ವೆಂಕಟಾಚಲ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.