ADVERTISEMENT

ಚನ್ನಪಟ್ಟಣ: ಗಾಂಧಿ ಸ್ಮಾರಕ ಭವನ ಅವ್ಯವಸ್ಥೆಯ ಆಗರ

₹5 ಕೋಟಿ ಬಿಡುಗಡೆಯಾಗಿದ್ದರೂ, ಸ್ಮಾರಕ ಅಭಿವೃದ್ಧಿಗೆ ಅಡ್ಡಿ

ಎಚ್.ಎಂ.ರಮೇಶ್
Published 15 ಆಗಸ್ಟ್ 2022, 4:15 IST
Last Updated 15 ಆಗಸ್ಟ್ 2022, 4:15 IST
ಚನ್ನಪಟ್ಟಣದ ಹೃದಯ ಭಾಗದಲ್ಲಿರುವ ಗಾಂಧಿ ಸ್ಮಾರಕ ಭವನದ ದುಃಸ್ಥಿತಿ
ಚನ್ನಪಟ್ಟಣದ ಹೃದಯ ಭಾಗದಲ್ಲಿರುವ ಗಾಂಧಿ ಸ್ಮಾರಕ ಭವನದ ದುಃಸ್ಥಿತಿ   

ಚನ್ನಪಟ್ಟಣ: ನಗರದಲ್ಲಿರುವ ಗಾಂಧಿ ಸ್ಮಾರಕವು ದೇಶದ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ತಾಲ್ಲೂಕಿನ ಏಕೈಕ ಸ್ಮಾರಕವಾಗಿದೆ ಎಂದರೆ ತಪ್ಪಾಗಲಾರದು.

ಮಹಾತ್ಮ ಗಾಂಧೀಜಿಯವರು 1936ರಲ್ಲಿ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಅವರು ತಾಲ್ಲೂಕಿನಲ್ಲಿನ ಸ್ವಾತಂತ್ರ್ಯ ಯೋಧರನ್ನು ಒಟ್ಟುಗೂಡಿಸಿ, ಖಾಲಿ ಇದ್ದ ಇದೇ ಜಾಗದಲ್ಲಿ ಅಂದು ಸಭೆಯೊಂದನ್ನು ನಡೆಸಿದ್ದರು. ಇದರ ನೆನಪಿನಾರ್ಥವಾಗಿಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲೇ ನಗರದ ಹೃದಯ ಭಾಗದಲ್ಲಿ ಗಾಂಧಿ ಸ್ಮಾರಕ ಭವನವನ್ನು ನಿರ್ಮಿಸಲಾಗಿದೆ.

ಇತಿಹಾಸ: ಕುವೆಂಪುನಗರದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಆರ್ಯಪುತ್ರ ಎಂಬುವರು ಈಗಿರುವ ಗಾಂಧಿ ಭವನದ ಖಾಲಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಗಾಂಧೀಜಿ ಬರುವಿಕೆಗಾಗಿ ಕಾದಿದ್ದರು. ಆಗ ಗಾಂಧೀಜಿಯವರು ಕರ್ನಾಟಕ ಪ್ರವಾಸ ಮಾಡಿಕೊಂಡು ಮೈಸೂರು ಮಾರ್ಗವಾಗಿ ಚನ್ನಪಟ್ಟಣಕ್ಕೆ ಬಂದಾಗ ಆರ್ಯಪುತ್ರ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಜೊತೆ ಮಾತುಕತೆ ನಡೆಸಿ ನಂತರ ಅವರು ಖಾಲಿ ಜಾಗದಲ್ಲಿ ಹಾಕಿದ್ದ ಗುಡಿಲಿನವರೆಗೆ ಪಾದಯಾತ್ರೆ ಮಾಡಿದ್ದರು.

ADVERTISEMENT

ನಂತರ ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಿಟ್ಟಮಾರನಹಳ್ಳಿ ವಿ.ವೆಂಕಟಪ್ಪ, ಕೆಂಗಲ್ ಹನುಮಂತಯ್ಯ, ಅಬ್ಬೂರು ಗೋಪಣ್ಣ, ಮತ್ತೀಕೆರೆ ಡಿ.ಲಿಂಗಯ್ಯ, ನಾಗವಾರ ಎನ್.ತಿಮ್ಮಯ್ಯ, ಅಬ್ಬೂರು ಕೃಷ್ಣಮೂರ್ತಿ, ಸಿಂಗರಾಜಪುರದ ಎಸ್.ಸಿ. ಲಿಂಗಪ್ಪ ಅವರು ಸೇರಿದಂತೆ ಹೋರಾಟಗಾರರ ಜೊತೆ ಸಭೆಯೊಂದನ್ನು ನಡೆಸಿದ್ದರು.

1950ರಲ್ಲಿ ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಕಟ್ಟಡದ ನಿರ್ಮಾಣ ಉಸ್ತುವಾರಿಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ವೆಂಕಟಪ್ಪ ಅವರಿಗೆ ವಹಿಸಲಾಗಿತ್ತು. ಕಟ್ಟಡ ನಿರ್ಮಾಣವಾದ ನಂತರ ಕಟ್ಟಡ ನಿರ್ವಹಣೆ ಹೊಣೆಯನ್ನು ನಗರದ ವೆಂಕಟೇಶ ಅಯ್ಯಂಗಾರ್ ಎಂಬುವರಿಗೆ ವಹಿಸಿದ್ದರು ಎಂದು ತಿಳಿದುಬರುತ್ತದೆ. ಈ ಸ್ಮಾರಕವನ್ನು ಆನಂತರ ಕೇಂದ್ರ ಗ್ರಂಥಾಲಯವನ್ನಾಗಿ ಮಾರ್ಪಾಡು ಮಾಡಿ, ಓದುಗರು ಮತ್ತು ಸಾಹಿತ್ಯಾಭಿಮಾನಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು.

₹5 ಕೋಟಿ ಬಿಡುಗಡೆ: ಗಾಂಧಿಭವನ ಶಿಥಿಲವಾಗಿ ಬೀಳುವ ಹಂತ ತಲುಪಿರುವ ಕಾರಣ ಕಟ್ಟಡವನ್ನು ಕೆಡವಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲು ಎಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹5 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದು ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಗೂ ಜಮಾವಣೆಗೊಂಡಿದೆ.ಆದರೆ ಜಾಗ ಗಾಂಧಿಭವನದ ಹೆಸರಿನಲ್ಲಿ ಇಲ್ಲದ ಕಾರಣ ಕಟ್ಟಡ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ.

ಈ ಬಗ್ಗೆ ಗಾಂಧಿ ಭವನ ನಿರ್ಮಾಣ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ್ದಾರೆ. ಆದರೂ ಯಾವುದೇ ಬೆಳವಣಿಗೆ ಆಗಿಲ್ಲ.ಈ ಜಾಗದಲ್ಲಿ ಗಾಂಧೀಜಿ ಹೆಸರಿನಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಭವನ ನಿರ್ಮಾಣ ಮಾಡಬೇಕು ಎನ್ನುವುದು ಹೋರಾಟ ಸಮಿತಿ ಪದಾಧಿಕಾರಿಗಳ ಆಶಯವಾಗಿದ್ದು, ಶೀಘ್ರ ಕಟ್ಟಡ ನಿರ್ಮಾಣವಾಗಲಿ ಎನ್ನುವುದು ಎಲ್ಲರ ಒತ್ತಾಯವಾಗಿದೆ.

ಕಟ್ಟಡ ದುರಸ್ತಿಗೆ ಒತ್ತಾಯ

ಗಾಂಧೀಜಿಯವರ ನೆನಪಿಗಾಗಿ ನಿರ್ಮಾಣ ಮಾಡಿರುವ ಈ ಕಟ್ಟಡ ಈಗ ಶಿಥಿಲಾವಸ್ಥೆ ತಲುಪಿದ್ದು, ಕುಸಿದು ಬೀಳುವ ಆತಂಕ ಎದುರಿಸುತ್ತಿದೆ. ಈ ಕಟ್ಟಡವು ಇದೀಗ ಬಿರುಕು ಬಿಟ್ಟಿದೆ. ಈ ಆವರಣವು ಸೋಮಾರಿಗಳ ಮಲಗುವ ತಾಣವಾಗಿ ಮಾರ್ಪಾಡು ಆಗಿದೆ. ಸರಿಯಾದ ನಿರ್ವಹಣೆಯಿಲ್ಲದ ಪರಿಣಾಮ ಗಿಡಗಂಟಿಗಳು ಬೆಳೆದು ನಿಂತಿವೆ. ಈಗ ಇದನ್ನು ಬೆಂಗಳೂರಿಗೆ ತೆರಳುವ ಕೆಲವರು ಬೈಕ್ ನಿಲ್ಲಿಸುವ ಜಾಗವನ್ನಾಗಿ ಮಾಡಿಕೊಂಡಿದ್ದು, ಭವನದ ಆವರಣದ ದುಃಸ್ಥಿತಿಯನ್ನು ಸಾರುತ್ತಿದೆ.

ಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಂಥಾಲಯವನ್ನು ಈಗ ಸ್ಥಳಾಂತರಿಸಲಾಗಿದೆ. ಕಟ್ಟಡದ ಮೇಲ್ಛಾವಣಿ ಅಲ್ಲಲ್ಲಿ ಕಿತ್ತು ಬಿದ್ದಿದೆ. ಕಟ್ಟಡವನ್ನು ಕೆಡವಿ ಇಲ್ಲಿ ಸುಸಜ್ಜಿತವಾದ ಭವನ ನಿರ್ಮಾಣ ಮಾಡಬೇಕು ಎನ್ನುವ ಕೂಗು ಎದ್ದಿದೆ. ಈ ಬಗ್ಗೆ ಹೋರಾಟಗಳೂ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.