ಚನ್ನಪಟ್ಟಣ: ಗೌರಿ ಗಣೇಶ ಹಬ್ಬದ ಅಂಗವಾಗಿ ತಾಲ್ಲೂಕಿನ ಚೆನ್ನಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲ್ಲೂಕಿನ ದೊಡ್ಡಮಳೂರು ಸಾಯಿಮಂದಿರದಲ್ಲಿ ಮಂಗಳವಾರ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ಜನತೆಗೆ 700 ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ.ಜಯಮುತ್ತು ತಮ್ಮ ತಾಯಿಯ ನೆನಪಿನಲ್ಲಿ ಟ್ರಸ್ಟ್ ಸ್ಥಾಪಿಸಿ ಪ್ರತಿ ವರ್ಷ ತಾಲ್ಲೂಕಿನಲ್ಲಿ ಗಣೇಶ ಮೂರ್ತಿಗಳನ್ನು ವಿತರಿಸುತ್ತಿದ್ದಾರೆ. ಈ ವರ್ಷ 700 ಮೂರ್ತಿಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಜಯಮುತ್ತು, ಕಳೆದ 15 ವರ್ಷಗಳಿಂದ ಟ್ರಸ್ಟ್ ವತಿಯಿಂದ ತಾಲ್ಲೂಕಿನಲ್ಲಿ ಪಕ್ಷಾತೀತವಾಗಿ ಗಣೇಶ ಮೂರ್ತಿಗಳನ್ನು ವಿತರಿಸಲಾಗುತ್ತಿದ್ದೇವೆ. ಎಲ್ಲಾ ವರ್ಗದ ಜನರು ಗಣೇಶನ ವಿಗ್ರಹವನ್ನು ಪೂಜಿಸುತ್ತಾರೆ. ಹಾಗಾಗಿ ಪ್ರತಿ ಹಳ್ಳಿಗೂ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹಾಗಾಗಿ ನೂರಾರು ಯುವಕರು ಗಣೇಶ ಮೂರ್ತಿಗಳನ್ನು ಪಡೆದು ಉತ್ಸಾಹದಿಂದ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದರು.
ಗೋವಿಂದಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯರಾಂ, ಡಿಎಂಕೆ ಕುಮಾರ್, ಇ.ತಿ.ಶ್ರೀನಿವಾಸ್, ಗಂಗರಾಜು, ಮಳೂರುಪಟ್ಟಣ ರವಿ, ಇತರರು ಹಾಜರಿದ್ದರು
600 ಮೂರ್ತಿ ವಿತರಣೆ
ಶಾಸಕ ಸಿ.ಪಿ.ಯೋಗೇಶ್ವರ್ ಕಡೆಯಿಂದ 600 ಗಣೇಶ ಮೂರ್ತಿಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಮಂಗಳವಾರ ವಿತರಿಸಲಾಯಿತು. ಶಾಸಕರ ಅನುಪಸ್ಥಿತಿಯಲ್ಲಿ ಅವರ ಆಪ್ತರು ನಗರದ ಕುವೆಂಪುನಗರ ಐದನೇ ಅಡ್ಡರಸ್ತೆಯ ಶಾಸಕರ ನಿವಾಸದ ಬಳಿ ಗಣೇಶ ಮೂರ್ತಿಗಳನ್ನು ವಿತರಿಸಿದರು. 2022ರಲ್ಲಿ ಮೊದಲ ಬಾರಿಗೆ 500ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿತರಿಸಿದ್ದ ಯೋಗೇಶ್ವರ್ 2023ರಲ್ಲಿ ಮೂರ್ತಿ ವಿತರಣೆ ಮಾಡಿರಲಿಲ್ಲ. ಕಳೆದ ವರ್ಷ 1001 ಮೂರ್ತಿಗಳನ್ನು ವಿತರಿಸಿದ್ದರು. ಜೊತೆಗೆ ಯೋಗೇಶ್ವರ್ ನೀಡಿದ ಗಣೇಶ ಮೂರ್ತಿಗಳನ್ನು ತಾಲ್ಲೂಕಿನ ಐದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.