ADVERTISEMENT

‘ಜೆನರಿಕ್‌’ ಬಂದ್‌: ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಮೇ 2019, 13:11 IST
Last Updated 22 ಮೇ 2019, 13:11 IST
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಜೆನರಿಕ್ ಔಷಧ ಮಳಿಗೆ ಬಾಗಿಲು ಮುಚ್ಚಿರುವುದು
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಜೆನರಿಕ್ ಔಷಧ ಮಳಿಗೆ ಬಾಗಿಲು ಮುಚ್ಚಿರುವುದು   

ರಾಮನಗರ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಜೆನರಿಕ್ ಔಷಧ ಮಳಿಗೆಯ ಬಾಗಿಲು ಯಾವಾಗಲೂ ಮುಚ್ಚೇ ಇರುತ್ತದೆ. ಇದರಿಂದಾಗಿ ಅಗತ್ಯವಿರುವ ಔಷಧಗಳು ದೊರೆಯದೇ ರೋಗಿಗಳು, ಅವರ ಸಂಬಂಧಿಕರು ಪರದಾಡುತ್ತಿದ್ದಾರೆ.

ಔಷಧ ಅಗತ್ಯವಿರುವ ಸಂದರ್ಭದಲ್ಲೆಲ್ಲ ಈ ಮಳಿಗೆಯ ಬಾಗಿಲು ಮುಚ್ಚಿಯೇ ಇರುತ್ತದೆ. ಇದರಿಂದಾಗಿ ದುಬಾರಿ ಬೆಲೆ ಕೊಟ್ಟು ಖಾಸಗಿ ಔಷಧ ಮಳಿಗೆಗಳಲ್ಲಿ ಖರೀದಿಸಬೇಕಾಗಿದೆ. ಖಾಸಗಿ ಔಷಧ ಮಳಿಗೆಗಳಲ್ಲಿ ₨30ಕ್ಕೆ ಸಿಗುವ ಔಷಧ ಜೆನರಿಕ್ ನಲ್ಲಿ ₨15–20ಕ್ಕೆ ಸಿಗುತ್ತದೆ.

ಜನಸಾಮಾನ್ಯರಿಗೆ ಉಪಯೋಗವಾಗಲೆಂದೇ ಸರ್ಕಾರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಜನರಿಕ್ ಔಷಧ ಮಳಿಗೆ ತೆರಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಇಲ್ಲಿರುವ ಔಷಧ ಮಳಿಗೆಯಿಂದ ತಮಗೇನು ಉಪಯೋಗವೇ ಆಗುತ್ತಿಲ್ಲ ಎಂಬುದು ರೋಗಿಗಳ ಆರೋಪ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸುವ ಸರ್ಕಾರಿ ಆಸ್ಪತ್ರೆಯ ಕೆಲವು ವೈದ್ಯರು ಮತ್ತು ಸಿಬ್ಬಂದಿ, ‘ಈ ಬಗ್ಗೆ ರೋಗಿಗಳು ನಮ್ಮಲ್ಲಿ ದೂರುತ್ತಾರೆ. ಆದರೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಜನೌಷಧ ಕೇಂದ್ರಕ್ಕೆ ಸ್ಥಳವಿಲ್ಲ: ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರಗಳನ್ನು ಪರಿಚಯಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಿಸಿದ ತಯಾರಿಕಾ ಸಂಸ್ಥೆಗಳಿಂದ ಪಡೆದುಕೊಂಡ ಮತ್ತು ಎನ್‌ಎಬಿಎಲ್ (ನ್ಯಾಷನಲ್ ಅಕ್ರೆಡೆಷನ್‌ ಬೋರ್ಡ್‌ ಫಾರ್‌ ಟೆಸ್ಟಿಂಗ್ ಅಂಡ್‌ ಕ್ಯಾಲಿಬಿರೇಷನ್) ಮೂಲಕ ಪುನಃ ಪರೀಕ್ಷೆಗೆ ಒಳಪಡಿಸಿ, ಈ ಸಂಸ್ಥೆ ಯಿಂದ ಒಪ್ಪಿಗೆಯ ಪತ್ರ ಪಡೆದುಕೊಂಡ ನಂತರವಷ್ಟೇ ಔಷಧಗಳನ್ನು ಜನೌಷಧ ಕೇಂದ್ರಗಳಲ್ಲಿ ಮಾರಾಟಕ್ಕೆ ಲಭ್ಯವಾಗುತ್ತಿದೆ.

ಸಾಮಾನ್ಯ ಖಾಸಗಿ ಬ್ರಾಂಡ್‌ಗಳಿಗಿಂತ ಸರಿ ಸುಮಾರು ಶೇ 70 ರಿಂದ 80ರಷ್ಟು ಕಡಿಮೆ ಬೆಲೆಗೆ ಸಿಗುವ ಔಷಧ ಗುಣಮಟ್ಟ ಪ್ರಮಾಣೀಕರಿಸಿಕೊಂಡಿದೆ. ಇಂತಹ ಮಳಿಗೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಅವಕಾಶ ಮಾಡಿಕೊಡುವಂತೆ ಸರ್ಕಾರ ಆದೇಶಿಸಿದೆ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಜನರಿಕ್ ಔಷಧ ಮಳಿಗೆಗೆ ಅವಕಾಶ ಮಾಡಿ ಕೊಟ್ಟಿರುವುದರಿಂದ ಜನೌಷಧ ಕೇಂದ್ರಕ್ಕೆ ಸ್ಥಳಾವಕಾಶ ಇಲ್ಲದಂತಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಇಲ್ಲಿನ ಕೆಂಪೇಗೌಡ ವೃತ್ತದ ಬಳಿ ಜನೌಷಧ ಕೇಂದ್ರವಿದೆ. ನೂರಾರು ರೋಗಿ ಗಳು ಜನೌಷಧ ಮಳಿಗೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ಮಧುಮೇಹ, ರಕ್ತದೊತ್ತಡದವರು ಹೀಗೆ ದೀರ್ಘಕಾಲದ ಔಷಧೋಪಚಾರ ಬೇಕಾಗಿರುವ ರೋಗಿಗಳು ಜನೌಷಧ ಕೇಂದ್ರದ ಮೊರೆ ಹೋಗಿದ್ದಾರೆ. ಚನ್ನಪಟ್ಟಣ ಮತ್ತು ಮಾಗಡಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.