ADVERTISEMENT

ಮೌಢ್ಯ ಬದಿಗೊತ್ತಿ ಚಿಕಿತ್ಸೆ ಪಡೆಯಿರಿ: ಸಾಗರ್ ಗೌಡ

​ಪ್ರಜಾವಾಣಿ ವಾರ್ತೆ
Published 4 ಮೇ 2021, 4:44 IST
Last Updated 4 ಮೇ 2021, 4:44 IST
ಸಾಗರ್‌ ಗೌಡ
ಸಾಗರ್‌ ಗೌಡ   

ಮಾಗಡಿ: ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ತಾಲ್ಲೂಕಿನ ಮರೂರು ಗ್ರಾಮದ ನಿವಾಸಿ ಸಾಗರ್ ಗೌಡ.

ಮೃತ್ಯುವಿನ ದವಡೆಯಿಂದ ಮರಳಿ ಬಂದ ಅವರು ಅನುಭವ ಹಂಚಿಕೊಂಡಿದ್ದು ಹೀಗೆ; ‘ಕುದೂರು ಹೋಬಳಿಯ ಮರೂರು ರಾಷ್ಟ್ರೀಯ ಹೆದ್ದಾರಿ– 75ರ ಪಕ್ಕದಲ್ಲಿದೆ. ಬೆಂಗಳೂರು-ಮಂಗಳೂರು ಮೂಲದವರು ವಾಹನಗಳಲ್ಲಿ ಸಂಚರಿಸುವಾಗ ನಮ್ಮೂರಿನ ಹ್ಯಾಂಡ್‌ಪೋಸ್ಟ್ ಬಳಿ ವಾಹನ ನಿಲ್ಲಿಸಿ, ಹೋಟೆಲ್‌ಗಳಲ್ಲಿ ಊಟ, ತಿಂಡಿ ತಿನ್ನುವುದು ವಾಡಿಕೆ’.

‘ನಮ್ಮೂರಿಗೆ ಸೋಂಕು ಬಂದ ಬಗೆಯು ವಿಚಿತ್ರವಾದರೂ ಸತ್ಯ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಸೋಂಕು ತಗುಲಿದ ಕೂಡಲೇ ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ್ ಅವರ ಸಲಹೆ ಮೇರೆಗೆ ತಡಮಾಡದೆ ಚಿಕಿತ್ಸೆ ಪಡೆಯಲು ಆರಂಭಿಸಿದೆ. 10 ದಿನಗಳ ಹಿಂದೆ ನೆಗಡಿಯಾಗಿತ್ತು. ಕೆಮ್ಮು ಕಾಣಿಸಿಕೊಂಡು, ಜ್ವರ ಬಂದ ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಿಕೊಂಡೆ. ಸೋಂಕು ಇರುವುದು ದೃಢಪಟ್ಟಿತು’.

ADVERTISEMENT

‘ರಾಮನಗರದ ಕಂದಾಯ ಭವನದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಾಗಿ 8 ದಿನ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖನಾಗಿ ಸೋಮವಾರ ಮನೆಗೆ ಬಂದಿದ್ದೇನೆ. ಸೋಂಕು ಯಾರಿಗೂ ಬರುವುದು ಬೇಡ. ನೆಗಡಿ, ಜ್ವರ, ಕೆಮ್ಮು ಕಾಣಿಸಿಕೊಂಡ ಕೂಡಲೇ ಮುಂಜಾಗ್ರತೆವಹಿಸಬೇಕು. ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ.

ಸೋಂಕು ದೃಢಪಟ್ಟ ಕೂಡಲೇ ಭಯಪಡದೆ, ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕು. ಕಟ್ಟುನಿಟ್ಟಾಗಿ ವೈದ್ಯರ ಸಲಹೆ ಪಾಲಿಸಬೇಕು. ಫಲ್ಸ್‌ರೇಟ್‌ ಕಡಿಮೆಯಾಗದಂತೆ ಎಚ್ಚರಿಕೆವಹಿಸಬೇಕು. ಸೋಂಕಿಗಿಂತ ಭಯ, ಗಾಬರಿಯಿಂದಲೇ ಕೆಲವರು ಸಾವನ್ನಪ್ಪುತ್ತಿದ್ದಾರೆ. ಕಂದಾಯ ಭವನದ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಅಗತ್ಯ ಕ್ರಮಕೈಗೊಂಡರು. ಆಸ್ಪತ್ರೆಯಲ್ಲಿನ ಕುಂದುಕೊರತೆ ಪರಿಹರಿಸಲು ಡಿಸಿಎಂ ಡಾ.ಅಶ್ವತ್ಥನಾರಾಯಣ, ಶಾಸಕ ಎ. ಮಂಜುನಾಥ್‌, ಸಂಸದ ಡಿ.ಕೆ. ಸುರೇಶ್‌ ಮುಂದಾಗಬೇಕು ಎಂಬುದು ಅವರ ಮನವಿ.

‘ಪಿಪಿಇ ಕಿಟ್ ಧರಿಸಿದ ವೈದ್ಯಕೀಯ ಸಿಬ್ಬಂದಿ ಕಂಡು ಗಾಬರಿಪಡುವುದು ಬೇಡ. ಸೋಂಕು ತಗುಲಿದ ಮೇಲೆ ಪರಿತಪಿಸುವ ಬದಲು ಲಕ್ಷಣ ಕಂಡಕೂಡಲೇ ಜಾಗೃತರಾಗುವುದು ಅಗತ್ಯ. ಆಮ್ಲಜನಕದ ಲೆವೆಲ್ 90ಕ್ಕಿಂತ ಕಡಿಮೆಯಾಗದಂತೆ ಎಚ್ಚರಿಕೆವಹಿಸಬೇಕು. ವೈದ್ಯರು, ಸಿಬ್ಬಂದಿಯ ಸಹಕಾರ, ಸಕಾಲಿಕ ಚಿಕಿತ್ಸೆಯಿಂದ ಮರುಜನ್ಮ ಪಡೆದು ಬಂದಿದ್ದೇನೆ. ಸೋಂಕು ನಿವಾರಿಸುವ ಶಕ್ತಿ ದೇವರಿಗೂ ಇಲ್ಲ. ಸೋಂಕು ದೃಢಪಟ್ಟ ಮೇಲೂ ಮಾಟ, ಮಂತ್ರ, ದೇವರು ಎಂಬ ಮೌಢ್ಯದ ಆಚರಣೆ ಬೇಡ. ಆಮ್ಲಜನಕದ ಕೊರತೆ ಹೇಳಲಾರದ, ತಾಳಲಾರದ ವೇದನೆ ಉಂಟು ಮಾಡುತ್ತದೆ. ಶತ್ರುಗಳಿಗೂ ಸೋಂಕು ಬಾರದಿರಲಿ’ ಎಂದು
ಹೇಳಿದರು.

ಸರ್ಕಾರ ಮಠಮಾನ್ಯಗಳಿಗೆ ನೀಡುವ ಹಣವನ್ನು ಸ್ಥಗಿತಗೊಳಿಸಬೇಕು. ಅದೇ ಹಣದಲ್ಲಿ ಸುಸಜ್ಜಿತ ಆಧುನಿಕ ಸವಲತ್ತು ಇರುವ ಸರ್ಕಾರಿ ಆಸ್ಪತ್ರೆಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಿರ್ಮಿಸಬೇಕು. ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಚಲನಚಿತ್ರ ನಟರು, ಕ್ರೀಡಾಪಟುಗಳು ಮತ್ತು ಸಿರಿವಂತರು ತಮ್ಮ ಆದಾಯದಲ್ಲಿ ಅಲ್ಪಭಾಗವನ್ನು ಸರ್ಕಾರಿ ಆಸ್ಪತ್ರೆಗಳನ್ನು ಕಟ್ಟಿಸಲು ಉದಾರವಾಗಿ ನೀಡಿ, ಸಮಾಜದ ಆರೋಗ್ಯ ಸುಧಾರಣೆಗೆ ಕಂಕಣತೊಡಬೇಕು ಎಂಬುದು ಸಾಗರ್‌ ಗೌಡ ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.