ಮಾಗಡಿ: ‘ಗೌರಮ್ಮನ ಕೆರೆ ಬಳಿ ಇರುವ ಎರಡು ಎಕರೆ ಮಡಿಕಟ್ಟೆ ಜಾಗವನ್ನು ತಾಲ್ಲೂಕು ಮಡಿವಾಳ ಸಂಘಕ್ಕೆ ನೀಡುವ ಮೂಲಕ ತಾಲ್ಲೂಕು ಆಡಳಿತ ಅನುಕೂಲ ಮಾಡಿಕೊಡಬೇಕು’ ಎಂದು ಮಡಿವಾಳ ಸಂಘದ ತಾಲ್ಲೂಕು ಅಧ್ಯಕ್ಷ ತಿರುಮಲೆ ಶ್ರೀನಿವಾಸ್ ಹೇಳಿದರು.
ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಶನಿವಾರ ನಡೆದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಮಾತನಾಡಿದರು.
‘ಗೌರಮ್ಮನಕೆರೆ ಬಳಿ ಇರುವ ಮಡಿಕಟ್ಟೆ ಬಳಿ ಮಾಚಿದೇವರ ದೇವಸ್ಥಾನವಿದೆ. ಅಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಎರಡು ಎಕರೆ ಜಾಗವನ್ನು ಮಡಿಕಟ್ಟೆಗೆ ನೀಡಿದರೆ ಜನಾಂಗಕ್ಕೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಕ್ರಮವಹಿಸಬೇಕು. ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡುವ ಮೂಲಕ ಮುಖ್ಯವಾಹಿನಿಗೆ ಬರುವ ಕೆಲಸ ಆಗಬೇಕು’ ಎಂದರು.
‘ತಾಲ್ಲೂಕಿನಲ್ಲಿ 4 ಸಾವಿರಕ್ಕೂ ಹೆಚ್ಚು ಸಮುದಾಯದವರು ಇರುವುದರಿಂದ ತಾಲ್ಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ಬೇಡಿಕೆ ಈಡೇರಿಸುವ ಕೆಲಸ ಮಾಡಬೇಕು. ಮಾಚಿದೇವರು ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣರ ಬಟ್ಟೆಯನ್ನು ಮಡಿಯನ್ನು ನಿಷ್ಠೆಯಿಂದ ಮಾಡಿ ವಚನಗಳ ಮೂಲಕ ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಮುಖ ಪಾತ್ರ ವಹಿಸಿದ್ದಾರೆ. ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಆರ್ಥಿಕವಾಗಿ ಮುಂದೆ ಬರಲು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಗ್ರೇಡ್ 2 ತಹಶೀಲ್ದಾರ್ ಪ್ರಭಾಕರ್ ಮಾತನಾಡಿ, ‘ಮಾಚಿದೇವರು 339ಕ್ಕೂ ಹೆಚ್ಚು ವಚನಗಳನ್ನು ರಚನೆ ಮಾಡಿದ್ದಾರೆ. ಮಡಿವಾಳ ಸಂಘ ನೀಡಿರುವ ಮನವಿಯನ್ನು ತಾಲ್ಲೂಕು ಆಡಳಿತದ ಮುಂದೆ ಇಟ್ಟು ಬೇಡಿಕೆ ಈಡೇರಿಸುವ ಕೆಲಸ ಮಾಡಲಾಗುವುದು’ ಎಂದು ತಿಳಿಸಿದರು.
ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಸನ್ನ ಗೌಡ ಮಾತನಾಡಿ, ‘ಅಕ್ಕಸಾಲಿಗರು ಮಡಿವಾಳ ಜನಾಂಗದ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಮಾಡಿಸಿ ನೀಡಲಾಗುವುದು. ಫೆ.10 ರಂದು ಮಾಗಡಿಯಲ್ಲಿ ದಾಖಲಾತಿ ನೀಡಬೇಕು ಎಂದರು.
ನಿವೃತ್ತ ವಾಯು ಸೇನಾಧಿಕಾರಿ ಶಿವಲಿಂಗಯ್ಯ ಮಾತನಾಡಿ, ‘ಮಾಚಿದೇವರು ಸಾಹಿತ್ಯ ಭಂಡಾರವನ್ನೇ ತುಂಬಿಕೊಂಡಿದ್ದರು. ಬಸವಣ್ಣನವರ ಅವಧಿಯಲ್ಲಿ ವಚನಗಳ ಮೂಲಕ ತಮ್ಮ ಸಮಾಜದ ಜನಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದರು.
ತಾ.ಪಂ ಮಾಜಿ ಸದಸ್ಯ ಮಾಡಬಾಳ್ ಜಯರಾಂ, ಜಿಲ್ಲಾ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಅಧ್ಯಕ್ಷ ಆನಂದ್, ವೀರಭದ್ರಯ್ಯ, ಚಂದ್ರಶೇಖರ್, ವೆಂಕಟೇಶ್, ಮಹಾಲಿಂಗಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.