
ರಾಮನಗರ: ‘ರಾಜ್ಯಪಾಲರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡದ ಕೇಂದ್ರ ಸರ್ಕಾರ, ಅವರನ್ನು ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಕೆಲಸ ಮಾಡುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಮೊಟಕು ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯಪಾಲರು ರಾಜ್ಯ ಸರ್ಕಾರದ ಭಾಷಣ ಓದದೆ ಹೋಗಿರುವುದು ತಪ್ಪು. ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕೇ ಹೊರತು, ಕೇಂದ್ರ ಸರ್ಕಾರದ ಆಣತಿಯಂತಲ್ಲ’ ಎಂದರು.
‘ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಆಯಾ ರಾಜ್ಯದಲ್ಲಿ ಅಧಿಕಾರದಲ್ಲಿರೋ ಸರ್ಕಾರ ತಯಾರಿಸಿ ಕೊಡುವ ಭಾಷಣವನ್ನು ರಾಜ್ಯಪಾಲರು ಓದುವುದು ವಾಡಿಕೆ. ಭಾಷಣದಲ್ಲಿ ಯಾವುದಾದರೂ ಸಾಲು ಇಷ್ಟವಿಲ್ಲದಿದ್ದರೆ, ಅದನ್ನು ಬಿಟ್ಟು ಬೇರೆ ವಿಷಯಗಳನ್ನು ಓದಬಹುದಿತ್ತು. ಅದು ಬಿಟ್ಟು ಭಾಷಣವನ್ನೇ ಮೊಟಕುಗೊಳಿಸಿದ್ದು ಎಷ್ಟು ಸರಿಯಲ್ಲ’ ಎಂದು ಬೇಸರಗೊಂಡರು.
‘ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಈ ರೀತಿ ಮಾಡುವುದಿಲ್ಲ. ಆದರೆ, ದಕ್ಷಿಣ ಭಾರತದಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ರಾಜ್ಯಪಾಲರು ಮಾತ್ರ ಈ ರೀತಿ ಮಾಡುತ್ತಾರೆ. ರಾಜ್ಯಪಾಲರು ಸಂವಿಧಾನಕ್ಕಿಂತ ದೊಡ್ಡವರಲ್ಲ ಎಂಬುದನ್ನು ಅರಿಯಬೇಕು. ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು’ ಎಂದರು.
‘ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ರಾಜ್ಯ ಬಿಜೆಪಿಯವರು ಸುಳ್ಳುಗಾರರು. ಅವರಿಗೆ ಸಂವಿಧಾನ ಮತ್ತು ಕಾನೂನಿನ ಅರಿವಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಕುರಿತು ಬಾಯಿ ಬಿಡದ ಅವರು, ಇದೀಗ ರಾಜ್ಯ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಬಿಜೆಪಿಯವರು ಹಿಂದೆ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ್ದರು. ಸ್ಪೀಕರ್ ವಿರುದ್ಧವೂ ಘೋಷಣೆ ಕೂಗಿ ಕಲಾಪದ ಪತ್ರಗಳನ್ನು ಹರಿದು ಎಸೆದಿದ್ದರು. ಅಂತಹವರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ. ರಾಜ್ಯಪಾಲರ ಇಂದಿನ ನಡೆ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕು ಎಂಬುದನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ತೀರ್ಮಾನಿಸುತ್ತಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.