
ರಾಮನಗರ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ಟೋಲ್ ಪಾವತಿಸಲು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗಿಲ್ಲ. 117 ಕಿ.ಮೀ ಉದ್ದದ ಹೆದ್ದಾರಿಯಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ.
ವಾಹನಗಳ ತಡೆ ರಹಿತ ಸಂಚಾರದೊಂದಿಗೆ ಪ್ರಯಾಣದ ಅವಧಿ ತಗ್ಗಿಸುವ ಬಹುಪಥ ಮುಕ್ತ ಹರಿವಿನ ವ್ಯವಸ್ಥೆ ಜಾರಿಗೊಳಿಸಲಿರುವ ರಾಜ್ಯದ ಮೊದಲ ಹೆದ್ದಾರಿ ಇದಾಗಲಿದೆ. ಹೊಸ ವ್ಯವಸ್ಥೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಯೋಗಿಕವಾಗಿ ಅನುಷ್ಠಾನವಾಗಲಿರುವ ಈ ವ್ಯವಸ್ಥೆ ಯಶಸ್ವಿಯಾದರೆ ಟೋಲ್ ಬೂತ್ ಮುಕ್ತ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ರೀತಿಯ ದೇಶದ ಮೊದಲ ಹೆದ್ದಾರಿ ಟೋಲ್ ಗುಜರಾತ್‌ನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದೇ ಮಾದರಿ ರಾಜ್ಯದಲ್ಲಿಯೂ ಜಾರಿಗೆ
ಬರಲಿದೆ.
ಏನಿದು ವ್ಯವಸ್ಥೆ?:
‘ಸ್ವಯಂಚಾಲಿತವಾಗಿ ವಾಹನಗಳ ಸಂಖ್ಯಾಫಲಕ ಗುರುತಿಸುವಿಕೆ (ಎಎನ್‌ಪಿಆರ್) ಕ್ಯಾಮೆರಾ, ಉಪಗ್ರಹ ಆಧರಿತ ಜಿಪಿಎಸ್ ವ್ಯವಸ್ಥೆಯಡಿ ಫಾಸ್ಟ್ಯಾಗ್ ಮೂಲಕವೇ ಟೋಲ್ ಸಂಗ್ರಹಿಸಲಾಗುತ್ತದೆ. ವಾಹನಗಳು ಸಂಚರಿಸುತ್ತಿರುವ ವೇಗದಲ್ಲೇ ಅವುಗಳ ನೋಂದಣಿ ಸಂಖ್ಯೆ ರೀಡ್ ಆಗಿ ಟೋಲ್ ಕಡಿತವಾಗಲಿದೆ.
‘ಪ್ರಾಯೋಗಿಕ ಹಂತದಲ್ಲಿ ಹೊಸ ವ್ಯವಸ್ಥೆಯ ಸಾಧಕ–ಬಾಧಕಗಳನ್ನು ಗುರುತಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಅಲ್ಲಿಯವರೆಗೆ ಫಾಸ್ಟ್ಯಾಗ್ ಬೂತ್ ಇರಲಿವೆ. ಬಳಿಕ, ಪೂರ್ಣವಾಗಿ ಹೊಸ ವ್ಯವಸ್ಥೆ ಅಳವಡಿಸಿ ಹಂತ ಹಂತವಾಗಿ ಟೋಲ್ ಬೂತ್‌ಗಳನ್ನು ತೆಗೆಯಲಾಗುವುದು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಯುವಿಕೆ, ದಟ್ಟಣೆಗೆ ಬ್ರೇಕ್
‘ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯಿಂದ ಟೋಲ್‌ಗಳಲ್ಲಿ ವಾಹನಗಳ ಕಾಯುವಿಕೆ, ದಟ್ಟಣೆ ತಪ್ಪಲಿದೆ. ಪ್ರಯಾಣದ ಅವಧಿ ತಗ್ಗಿಸಿ, ಇಂಧನ ಕ್ಷಮತೆ ಹೆಚ್ಚಿಸಲಿದೆ’ ಎಂದು ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ. ಬ್ರಹ್ಮಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಳೆದ ವರ್ಷ ಗುಜರಾತ್‌ನ ರಾಷ್ಟ್ರೀಯ ಹೆದ್ದಾರಿ 48ರ ಟೋಲ್ ಪ್ಲಾಜಾದಲ್ಲಿ ಇಂತಹ ವ್ಯವಸ್ಥೆಯನ್ನು ಮೊದಲ ಬಾರಿಗೆ ಪ್ರಾಧಿಕಾರ ಜಾರಿಗೊಳಿಸಿತ್ತು. ಎಐ ಆಧಾರಿತ ಎನ್‌ಪಿಆರ್ ಮತ್ತು ಆರ್‌ಎಫ್‌ಐಡಿ ಫಾಸ್ಟ್ಯಾಗ್‌ನ ಈ ವ್ಯವಸ್ಥೆಯಿಂದ ತಡೆರಹಿತ ಸಂಚಾರ ಸಾಧ್ಯವಾಗಿದೆ. ಅಲ್ಲಿ ಟೋಲ್ ಬೂತ್‌ಗಳು ತೆರವಾಗಿವೆ. ದಟ್ಟಣೆ, ಪ್ರಯಾಣದ ಅವಧಿ ಇಳಿಕೆಯಾಗಿದೆ.
ಫಾಸ್ಟ್ಯಾಗ್ ಇದ್ದರೂ ತಪ್ಪದ ಕಿರಿಕಿರಿ
ಟೋಲ್‌ಗಳಲ್ಲಿ ಹಿಂದೆ ಇದ್ದ ನಗದು ಪಾವತಿ ವ್ಯವಸ್ಥೆಗೆ ಪರ್ಯಾಯವಾಗಿ ಈಗಿರುವ ಆರ್‌ಎಫ್‌ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಆಧರಿತ ಫಾಸ್ಟ್ಯಾಗ್ ರೀಡಿಂಗ್ ವ್ಯವಸ್ಥೆ ಐದು ವರ್ಷದ ಹಿಂದೆ ಜಾರಿಗೆ ಬಂತು. ಆದರೂ, ಬೂತ್‌ಗಳಲ್ಲಿ ಸವಾರರು ಕಾಯುವುದು ತಪ್ಪಿಲ್ಲ.
ತಡೆರಹಿತ ಟೋಲ್ ಸಂಗ್ರಹಕ್ಕಾಗಿ ಭಾರತೀಯ ಹೆದ್ದಾರಿಗಳ ನಿರ್ವಹಣಾ ಕಂಪನಿ ಹೊಸ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಿದೆ.– ವಿಲಾಸ್ ಪಿ. ಬ್ರಹ್ಮಂಕರ್, ಪ್ರಾದೇಶಿಕ ಅಧಿಕಾರಿ, ಎನ್‌ಎಚ್‌ಎಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.