ರಾಮನಗರ: ‘ಸಮಾಜದ ಅಭಿವೃದ್ಧಿಗೆ, ಅಸ್ಪೃಶ್ಯತೆ ನಿವಾರಿಸಲು ಶ್ರಮಿಸಿದ ಮಹಾಪುರುಷರಲ್ಲಿ ಮಡಿವಾಳ ಮಾಚಿದೇವರು ಒಬ್ಬರು’ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಭಿಪ್ರಾಯಪಟ್ಟರು.
ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಮಾತನಾಡಿದರು.
‘ಮಾಚಿದೇವ ಕೇವಲ ಒಂದೇ ಜನಾಂಗಕ್ಕೆ ಸೀಮಿತರಲ್ಲ. ದುರ್ಬಲರ ಶೋಷಣೆ, ಮೇಲು ಕೀಳು, ತಾರತಮ್ಯ, ಅಸ್ಪೃಶ್ಯತೆ ಹೀಗೆ ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಜನರಿಗೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳನ್ನು ಒದಗಿಸಲು ಶ್ರಮಿಸಿದ ಅವರ ವಚನಗಳ ಸಾರಾಂಶಗಳನ್ನು ಅರ್ಥಮಾಡಿಕೊಳ್ಳಬೇಕು’ ಎಂದರು.
ಜನಪದ ವಿದ್ವಾಂಸ ಡಾ.ಬೈರೇಗೌಡ ಮಾತನಾಡಿ, ‘ಮಡಿವಾಳ ಮಾಚಿದೇವರ ವಚನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವಚನಗಳಾಗಿವೆ. ಜಾನಪದೀಯ ಹಿನ್ನೆಲೆಯೊಳಗೆ ಮಡಿವಾಳ ಮಾಚಿದೇವರನ್ನು ಅಧ್ಯಯನ ಮಾಡಲು ಬೇಕಾದ ಸರಕುಗಳು ಲಭ್ಯವಿದೆ. ಸಂಶೋಧಕರು ಮಡಿವಾಳ ಮಾಚಿದೇವರ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಮತ್ತಷ್ಟು ವಿಚಾರಗಳನ್ನು ಸಮಾಜಕ್ಕೆ ನೀಡಬೇಕು’ ಎಂದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜು ಗಾಣಕಲ್, ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಬಾಬು, ಸಮುದಾಯದ ಅಧ್ಯಕ್ಷ ಮಂಟೇದಯ್ಯ, ರಾಘವೇಂದ್ರ, ಬೈರಪ್ಪ, ವೀರಭದ್ರಯ್ಯ, ಲೋಕೇಶ್, ಸಂತೋಷ್ ಕುಮಾರ್, ಪುಟ್ಟಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.