ರಾಮನಗರ: ಶಾಲಾ ಆವರಣದಲ್ಲಿ ಅಚ್ಚ ಹಸಿರಿನ ಪರಿಸರ ಹಾಗೂ ಸ್ವಚ್ಛತೆ ಕಾಯ್ದುಕೊಂಡಿರುವ ತಾಲ್ಲೂಕಿನ ಲಕ್ಷ್ಮೀಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು, ರಾಜ್ಯಮಟ್ಟದ ‘ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ’ ಪ್ರಶಸ್ತಿಗೆ ಪಾತ್ರವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀಸಾಯಿ ಅನ್ನಪೂರ್ಣ ಟ್ರಸ್ಟ್ ನೀಡುವ ಈ ಪ್ರಶಸ್ತಿಗೆ, ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಶಾಲೆಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ, ಲಕ್ಷ್ಮೀಪುರ ಶಾಲೆ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ, ತಾಲ್ಲೂಕಿಗೆ ಹಮ್ಮೆ ತಂದಿದೆ. ಪ್ರಶಸ್ತಿಯು ₹10 ಸಾವಿರ ನಗದು, ಪ್ರಮಾಣಪತ್ರ, ಶಿಕ್ಷಕರಿಗೆ ಡೈರಿ ಹಾಗೂ ಮುಖ್ಯ ಶಿಕ್ಷಕರಿಗೆ ಕೈಗಡಿಯಾರ ಹೊಂದಿದೆ.
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಶಾಲೆಯ ಮುಖ್ಯ ಶಿಕ್ಷಕಿ ದೀಪಾ ಆರ್. ಅವರು ಸದ್ಗುರು ಮಧುಸೂದನ ಸಾಯಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ವಿ.ಎನ್. ನರಸಿಂಹಮೂರ್ತಿ ಇದ್ದರು.
ಶಾಲೆಗೆ ಮೊದಲ ಬಾರಿಗೆ ರಾಜ್ಯಮಟ್ಟದ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಸಂಭ್ರಮಾಚರಿಸಲಾಯಿತು. ಶಿಕ್ಷಕರು, ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಶಾಲೆಯಲ್ಲಿ ಪರಸ್ಪರ ಸಿಹಿ ಹಂಚಿದರು.
ಸುಸಜ್ಜಿತ ಶಾಲೆ: ‘ಲಕ್ಷ್ಮೀಪುರ ಕ್ಲಸ್ಟರ್ ವ್ಯಾಪ್ತಿಯಲ್ಲಿರುವ ಶಾಲೆ ಸುಸಜ್ಜಿತವಾಗಿದೆ. 1ರಿಂದ 7ನೇ ತರಗತಿವರೆಗೆ 88 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಲ್ಲಿ 1ರಿಂದ 5ರವರೆಗೆ ಇಂಗ್ಲಿಷ್ ಮಾಧ್ಯಮ ಮತ್ತು 6ರಿಂದ 7ರವರೆಗೆ ಕನ್ನಡ ಮಾಧ್ಯಮದ ಶಿಕ್ಷಣ ನೀಡಲಾಗುತ್ತಿದೆ. ಸುಸಜ್ಜಿತ ತರಗತಿಗಳು, ಗ್ರಂಥಾಲಯ ಹಾಗೂ ಕಂಪ್ಯೂಟರ್ ಪ್ರಯೋಗಾಲಯವಿದೆ. ಶಾಲಾವರಣದಲ್ಲಿ ಕೈತೋಟ, ಸಭಾಂಗಣ, ಅಡುಗೆ ಮನೆ, ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯೊಂದಿಗೆ ಶಾಲಾ ಪರಿಸರವು ಉತ್ತಮವಾಗಿದೆ. ಇದೇ ಕಾರಣಕ್ಕೆ ಶಾಲೆಯು ರಾಜ್ಯ ಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ’ ಎಂದು ಮುಖ್ಯ ಶಿಕ್ಷಕಿ ದೀಪಾ ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಶಸ್ತಿ ಬಂದಿರುವ ವಿಷಯ ತಿಳಿದು ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ಮತ್ತು ಕ್ಲಸ್ಟರ್ ಸಮೂಹ ಸಂಪನ್ಮೂಲ ಅಧಿಕಾರಿ ಸತೀಶ್ ಕುಮಾರ್ ಶಾಲೆಗೆ ಭೇಟಿ ನೀಡಿ, ಸಿದ್ದಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.