ADVERTISEMENT

ಹಾರೋಹಳ್ಳಿ | ‘ಗೃಹ ಲಕ್ಷ್ಮಿ’ ಯೋಜನೆ: ವಾರದಲ್ಲಿ 62.24 ಲಕ್ಷ ನೋಂದಣಿ

ಬೆಂಗಳೂರು ಗ್ರಾಮಾಂತರ ಹೆಚ್ಚು ಪ್ರಗತಿ; ಬೆಂಗಳೂರು ನಗರದಲ್ಲಿ ಅತಿ ಕಡಿಮೆ

ಕೆ.ವಿ.ಗೋವಿಂದರಾಜು
Published 28 ಜುಲೈ 2023, 15:24 IST
Last Updated 28 ಜುಲೈ 2023, 15:24 IST
ರಾಮನಗರದ ಗ್ರಾಮ ಒನ್‌ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಲು ಬಂದಿದ್ದ ಮಹಿಳೆಯರು
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ರಾಮನಗರದ ಗ್ರಾಮ ಒನ್‌ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಲು ಬಂದಿದ್ದ ಮಹಿಳೆಯರು ಪ್ರಜಾವಾಣಿ ಚಿತ್ರ: ಚಂದ್ರೇಗೌಡ   

ಹಾರೋಹಳ್ಳಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹ ಲಕ್ಷ್ಮಿ’ ಯೋಜನೆಗೆ ಒಂದು ವಾರದಲ್ಲಿ ರಾಜ್ಯದಾದ್ಯಂತ 62.24 ಲಕ್ಷ ಮಹಿಳೆಯರು ನೋಂದಣಿ (ಜುಲೈ 26ರವರೆಗೆ) ಮಾಡಿಕೊಂಡಿದ್ದಾರೆ. 1.28 ಕೋಟಿ ಫಲಾನುಭವಿಗಳಿದ್ದು ನೋಂದಣಿಯಲ್ಲಿ ಇದುವರೆಗೆ ಶೇ 48.43ರಷ್ಟು ಪ್ರಗತಿಯಾಗಿದೆ.

ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2 ಸಾವಿರ ಪಾವತಿಸುವ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಗೆ ಜುಲೈ 19ರಿಂದ ನೋಂದಣಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಾಲನೆ ನೀಡಲಾಗಿದೆ.

ಬೆಂ. ಗ್ರಾಮಾಂತರ ಮುಂದು: ನೋಂದಣಿಯಲ್ಲಿ ಇಡೀ ರಾಜ್ಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಮುಂದಿದೆ. ಇಲ್ಲಿ 2.33 ಲಕ್ಷ ಫಲಾನುಭವಿಗಳಿದ್ದು, ಶೇ 68ರಷ್ಟು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಹಾವೇರಿ ಶೇ 65 ಹಾಗೂ ಚಿಕ್ಕಮಗಳೂರು ಶೇ 58ರಷ್ಟು ನೋಂದಣಿಯಾಗಿದೆ.

ADVERTISEMENT

ಅತಿ ಹೆಚ್ಚು 12.19 ಲಕ್ಷ ಫಲಾನುಭವಿಗಳಿರುವ ಬೆಂಗಳೂರು ನಗರ ಜಿಲ್ಲೆಯು ಕೇವಲ ಶೇ 17ರಷ್ಟು ಪ್ರಗತಿ ಸಾಧಿಸಿದೆ. ಉಡುಪಿಯಲ್ಲಿ ಶೇ 40 ಹಾಗೂ ವಿಜಯನಗರದಲ್ಲಿ ಶೇ 42ರಷ್ಟು ಪ್ರಗತಿಯಾಗಿದೆ.

ನೇರ ನೊಂದಣಿ: ‘ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಫಲಾನುಭವಿಗಳು ಯಾವ ಕೇಂದ್ರಕ್ಕೆ, ಎಷ್ಟು ಹೊತ್ತಿಗೆ ತೆರಳಿ ನೋಂದಣಿ ಮಾಡಿಸಬೇಕು ಎನ್ನುವ ಮಾಹಿತಿ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಲಾಗುತ್ತಿದೆ. ಆ ವೇಳಾಪಟ್ಟಿಯಂತೆ ನೋಂದಣಿ ಮಾಡಿಸುವ ಜೊತೆಗೆ, ಸಂದೇಶಕ್ಕೆ ಕಾಯದೆ ನೇರವಾಗಿ ನೋಂದಣಿ ಕೇಂದ್ರಗಳಿಗೆ ತೆರಳಿ, ಅಗತ್ಯ ದಾಖಲೆ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ’ ಎಂದು ರಾಮನಗರ ಸಿಡಿಪಿಒ ನಾರಾಯಣಸ್ವಾಮಿ ತಿಳಿಸಿದರು.

‘ನೋಂದಣಿಗೆ ಸರ್ಕಾರ ಗಡುವು ವಿಧಿಸಿಲ್ಲ. ಫಲಾನುಭವಿಗಳು ಆತುರ ಮಾಡುವ ಅಗತ್ಯವಿಲ್ಲ. ನಿಧಾನವಾಗಿ ನೋಂದಣಿ ಮಾಡಬಹುದು. ನೋಂದಾಯಿತ ಫಲಾನುಭವಿಗಳಿಗೆ ಆಗಸ್ಟ್ 16ರ ನಂತರ ಪ್ರತಿ ತಿಂಗಳು ₹2 ಸಾವಿರ ಮೊತ್ತ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ’ ಎಂದು ಹೇಳಿದರು.

ಗೌರವಧನ ಹೆಚ್ಚಳಕ್ಕೆ ಒತ್ತಾಯ: ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ನಡೆಸುವರಿಗೆ ಗೃಹ ಲಕ್ಷ್ಮಿ ನೋಂದಣಿಗೆ ನೀಡುವ ಗೌರವಧನವನ್ನು ಹೆಚ್ಚಿಸಬೇಕು. ಸದ್ಯ ಯಾವುದೇ ಶುಲ್ಕ ಪಡೆಯದೆ ನೋಂದಣಿ ಮಾಡಲಾಗುತ್ತಿದೆ. ಸರ್ಕಾರ ಗೌರವಧನ ಹೆಚ್ಚಿಸದಿದ್ದರೆ, ಕೇಂದ್ರ ನಿರ್ವಹಣೆಗೆ ಸಮಸ್ಯೆಯಾಗಲಿದೆ ಎಂದು  ಎಂದು ಗ್ರಾಮ ಒನ್ ಸಿಬ್ಬಂದಿ ಅಳಲು ತೋಡಿಕೊಂಡರು.

ಸರ್ವರ್ ವಿದ್ಯುತ್ ಸಮಸ್ಯೆ
ಯೋಜನೆಗೆ ಚಾಲನೆ ಸಿಕ್ಕ ಬಳಿಕ ನೋಂದಣಿಗೆ ಸರ್ವರ್ ಸಮಸ್ಯೆಯೂ ಕಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಮೊಬೈಲ್‌ ಸಂಖ್ಯೆಗೆ ತಕ್ಷಣ ಒಟಿಪಿ ಬರುವುದು ತಡವಾಗುತ್ತಿದೆ. ಹೀಗಾಗಿ ಗ್ರಾಮ ಒನ್ ಕೇಂದ್ರಗಳ ಬಳಿ ಜನಸಂದಣಿ ಸಾಮಾನ್ಯವಾಗಿದೆ. ‘ಮೊಬೈಲ್‌ಗೆ ಒಟಿಪಿ ಬಂದರೂ ಅದನ್ನು ಎಂಟ್ರಿ ಮಾಡುವ ಹೊತ್ತಿಗೆ ಸರ್ವರ್ ಕೈ ಕೊಡುತ್ತಿದೆ. ಇದರಿಂದಾಗಿ ಮತ್ತೆ ಆರಂಭದಿಂದ ಎಲ್ಲಾ ಪ್ರಕ್ರಿಯೆ ಮಾಡಬೇಕಾಗುತ್ತದೆ. ಹಾಗಾಗಿ ಮಹಿಳೆಯರು ಸೆಂಟರ್ ಮುಂದೆ ಅನಿವಾರ್ಯವಾಗಿ ಕಾಯುತ್ತಾ ಕೂರಬೇಕಾಗುತ್ತದೆ’ ಎಂದು ಗ್ರಾಮ ಒನ್ ಸೇವಾ ಕೇಂದ್ರದ ಸಿಬ್ಬಂದಿ ಹೇಳಿದರು. ‘ಇನ್ನು ಕೆಲವರು ತಮ್ಮ ಬ್ಯಾಂಕ್ ಖಾತೆಗೆ ಮತ್ತು ಪಡಿತರ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡಿಸದಿರುವುದಿಲ್ಲ. ಕೇಂದ್ರಕ್ಕೆ ನೋಂದಣಿಗಾಗಿ ಬಂದಾಗ ವಿಷಯ ಗೊತ್ತಾಗುತ್ತಿದ್ದಂತೆ ಆಧಾರ್ ಲಿಂಕ್ ಮಾಡಿಸಲು ಬ್ಯಾಂಕ್‌ಗೆ ಕಳಿಸುತ್ತೇವೆ’ ಎಂದರು. ಪ್ರಜಾ ಪ್ರತಿನಿಧಿಯಾಗಲು ನಿರಾಸಕ್ತಿ ಯೋಜನೆಗೆ ಫಲಾನುಭವಿಗಳ ನೋಂದಣಿಗೆ ನೆರವಾಗಲು ಗೌರವಧನದ ಆಧಾರದ ಮೇಲೆ ಪ್ರಜಾ ಪ್ರತಿನಿಧಿಗಳನ್ನು ನೇಮಿಸುವುದಾಗಿ ಸರ್ಕಾರ ಹೇಳಿದೆ. ಆದರೆ ಗೌರವಧನ ಸಿಗುವುದಿಲ್ಲ ಎಂಬ ಕಾರಣಕ್ಕೆ ಪ್ರಜಾ ಪ್ರತಿನಿಧಿಯಾಗಿ ಕೆಲಸ ಮಾಡಲು ಅಭ್ಯರ್ಥಿಗಳು ನಿರಾಸಕ್ತಿ ತೋರುತ್ತಿದ್ದಾರೆ. ‘ಗೌರವಧನ ಕೊಡುತ್ತೇವೆ ಎಂದು ಹೇಳಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ಎಷ್ಟೊ ತಿಂಗಳಾದ ಮೇಲೆ ಪಾವತಿಸುತ್ತಾರೆ. ಅದಕ್ಕೂ ನಾವು ಕಚೇರಿಗಳನ್ನು ಸುತ್ತಿ ಅಧಿಕಾರಿಗಳಿಗೆ ಸಲಾಂ ಹೊಡೆಯಬೇಕು’ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.