ADVERTISEMENT

ಗುಡಿಸರಗೂರು: ಕೊಂಡ ಮಹೋತ್ಸವ

ಸುತ್ತಮುತ್ತಲ 28 ಹಳ್ಳಿಗಳ 10 ಸಾವಿರಕ್ಕೂ ಹೆಚ್ಚು ಜನ ಭಾಗಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 6:52 IST
Last Updated 8 ಫೆಬ್ರುವರಿ 2023, 6:52 IST
ಚನ್ನಪಟ್ಟಣ ತಾಲ್ಲೂಕಿನ ಗುಡಿಸರಗೂರು ಗ್ರಾಮದ ಬಸವೇಶ್ವರ ಸ್ವಾಮಿಯ ಕೊಂಡ ಮಹೋತ್ಸವಕ್ಕೆ ಸಿದ್ಧಪಡಿಸಲಾದ 20 ಅಡಿಗೂ ಹೆಚ್ಚು ಎತ್ತರದ ಸೌದೆಯ ಕೊಂಡ
ಚನ್ನಪಟ್ಟಣ ತಾಲ್ಲೂಕಿನ ಗುಡಿಸರಗೂರು ಗ್ರಾಮದ ಬಸವೇಶ್ವರ ಸ್ವಾಮಿಯ ಕೊಂಡ ಮಹೋತ್ಸವಕ್ಕೆ ಸಿದ್ಧಪಡಿಸಲಾದ 20 ಅಡಿಗೂ ಹೆಚ್ಚು ಎತ್ತರದ ಸೌದೆಯ ಕೊಂಡ   

ಚನ್ನಪಟ್ಟಣ: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಗುಡಿಸರಗೂರು ಗ್ರಾಮದ ಬಸವೇಶ್ವರ ಸ್ವಾಮಿಯ ಕೊಂಡ ಮಹೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮವು ಮಂಗಳವಾರ ವಿಜೃಂಭಣೆಯಿಂತ ನೆರವೇರಿತು.

ಬೆಳಗಿನ ಜಾವ ಕಳಶಗಳನ್ನು ಹೊತ್ತ ಅರ್ಚಕರು ಕೊಂಡ ಪ್ರವೇಶಿಸುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದರು. ಸುಮಾರು 20 ಅಡಿಗೂ ಹೆಚ್ಚುಎತ್ತರಕ್ಕೆ ಹಾಕಲಾಗಿದ್ದ ಸೌದೆಯಿಂದಾದ ಕೆಂಡದ ಮೇಲೆ ಕಳಶ ಹೊತ್ತ ಅರ್ಚಕರು ಬರಿಗಾಲಲ್ಲಿ ನಡೆಯುವ ದೃಶ್ಯವನ್ನು ಸುತ್ತಮುತ್ತಲ 28 ಹಳ್ಳಿಗಳಿಂದ ಬಂದಿದ್ದ 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದರು.

ಕೊಂಡದ ಅಂಗವಾಗಿ ಸೋಮವಾರದಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದವು.

ADVERTISEMENT

ಸಂಜೆ ಕೊಂಡಕ್ಕೆ ಹಾಕಿದ್ದ ಸೌದೆಗೆ ಬೆಂಕಿ ಹಚ್ಚಿ ಮಂಗಳವಾರ ಬೆಳಿಗ್ಗೆ ಕೊಂಡ ಹಾಯಲಾಯಿತು. ಕೊಂಡಕ್ಕೆ ತಾಲ್ಲೂಕಿನಲ್ಲಷ್ಟೇ ಅಲ್ಲದೆ ಜಿಲ್ಲೆ, ವಿವಿಧ ಜಿಲ್ಲೆಯ ಭಕ್ತರು ಸೌದೆ ತಂದು ಕೊಡುವುದು ವಾಡಿಕೆ. ಭಾನುವಾರದಿಂದಲೇ ಸೌದೆ ಹಾಕುವುದು ಇಲ್ಲಿನ ವಿಶೇಷ.

ಬಸವೇಶ್ವರಸ್ವಾಮಿಯ ಬಳಿ ಭಕ್ತರು ತಮ್ಮ ರಾಸುಗಳ ಒಳಿತಿಗಾಗಿ ಹರಕೆ ಹೊರುತ್ತಾರೆ. ತಮ್ಮ ರಾಸುಗಳಿಗೆ ಕೆಡಕು ಉಂಟಾದಾಗ ಬಸವೇಶ್ವರನ ನೆನೆದು ಕೊಂಡಕ್ಕೆ ಹರಳು ಹಾಕುತ್ತೇನೆ ಮತ್ತು ಕೊಂಡಕ್ಕೆ ಸೌದೆ ಹಾಕುತ್ತೇನೆ ಎಂದು ಭಕ್ತರು ಹರಕೆ ಹೊರುತ್ತಾರೆ.

ರಾಸುಗಳು ಗುಣಮುಖವಾದಾಗ ಹಬ್ಬದ ದಿನದಂದು ಇಲ್ಲಿಗೆ ಆಗಮಿಸಿ, ತಮ್ಮ ಹರಕೆಯನ್ನು ತೀರಿಸಿಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.

ಸೋಮವಾರ ದಿನಪೂರ್ತಿ ವಿವಿಧ ಗ್ರಾಮಗಳಿಂದ ಬಂದ ಜಾನಪದ ಕಲಾವಿದರು ಕೋಲಾಟ, ಕೀಲು ಕುದುರೆ, ತಮಟೆ ಕುಣಿತ, ಒನಕೆ ಕುಣಿತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮಂಗಳವಾರ ಹರಕೆ ಹೊತ್ತ ಭಕ್ತರು ಬಾಯಿಬೀಗ ಹಾಕುವುದು, ಪಾನಕದ ಬಂಡಿ ಉತ್ಸವ, ರಥೋತ್ಸವ, ಜಾತ್ರಾ ಮಹೋತ್ಸವ, ಸಂಜೆ ಚಿಕ್ಕಬೋರೇಗೌಡನದೊಡ್ಡಿ ಗ್ರಾಮಸ್ಥರಿಂದ ತೆಪ್ಪೋತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.