ADVERTISEMENT

ಹಾರೋಹಳ್ಳಿ: ಕಾಡಾನೆ ಕಾಟಕ್ಕೆ ನಲುಗಿದ ‘ಗುಳ್ಳಹಟ್ಟಿ ಕಾವಲು’

ನಿತ್ಯ ನೆಂಟರಂತಾದ ಕಾಡಾನೆಗಳು; ಮನೆ ಆವರಣ, ಬೆಳೆ ನಾಶ; ಊರು ಬಿಡುತ್ತಿರುವ ಜನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 2:31 IST
Last Updated 18 ಆಗಸ್ಟ್ 2025, 2:31 IST
ಕಾಡಾನೆ ದಾಳಿಯಿಂದ ಗುಳ್ಳಹಟ್ಟಿ ಗ್ರಾಮದ ಮನೆಯೊಂದರ ಗೇಟ್ ಮುರಿದಿರುವುದು
ಕಾಡಾನೆ ದಾಳಿಯಿಂದ ಗುಳ್ಳಹಟ್ಟಿ ಗ್ರಾಮದ ಮನೆಯೊಂದರ ಗೇಟ್ ಮುರಿದಿರುವುದು   

ಹಾರೋಹಳ್ಳಿ: ಆ ಊರಿನಲ್ಲಿ ಹಗಲು–ರಾತ್ರಿಯೂ ಜನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಾರೆ. ಎಲ್ಲಿ, ಯಾವಾಗ, ಯಾವ ಕಡೆಯಿಂದ ಕಾಡಾನೆಗಳು ಬರುತ್ತವೊ ಎಂಬ ಆತಂಕದಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಮನೆ  ಆವರಣ ಮತ್ತು ಜಮೀನಿಗೆ ನಿತ್ಯ ನೆಂಟರಂತಾಗಿರುವ ಕಾಡಾನೆಗಳ ಹಾವಳಿಗೆ ಬೇಸತ್ತಿರುವ ಕೆಲವರು ಊರನ್ನೇ ಬಿಟ್ಟಿದ್ದಾರೆ.

ತಾಲ್ಲೂಕಿನ ಗುಳ್ಳಹಟ್ಟಿ ಕಾವಲು ಗ್ರಾಮದ ಸ್ಥಿತಿ ಇದು. ಕಾಡಾನೆಗಳ ಹಾವಳಿಗೆ ನಲುಗಿರುವ ಈ ಊರಿನಲ್ಲಿ 70ಕ್ಕೂ ಹೆಚ್ಚು ಕುಟುಂಬಗಳಿವೆ. ಅಲ್ಪಸ್ವಲ್ಪ ಜಮೀನು ಹೊಂದಿರುವ ಬಹುತೇಕರು ರೈತರು. ಅದರಲ್ಲೇ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ ಮಾಡಿಕೊಂಡು ಬದುಕುತ್ತಿದ್ದವರು ಈಗ ಕಾಡಾನೆ ಕಾಟಕ್ಕೆ ಬೇಸತ್ತಿದ್ದಾರೆ.

ಜಮೀನಿನಲ್ಲಿ ಬೆಳೆದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನೆಲ್ಲ ಕಾಡಾನೆಗಳು ಹಾನಿ ಮಾಡುತ್ತಿವೆ. ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಗ್ರಾಮಕ್ಕೆ ಕಾಡಾನೆಗಳು ಬರುವುದು ಸಾಮಾನ್ಯವಾಗಿದೆ. ಅರಣ್ಯದಂಚಿನಲ್ಲಿರುವ ಜಮೀನಿಗಷ್ಟೇ ಅಲ್ಲದೆ, ಊರಿಗೂ ಬರುವ ಹಾನಿಗಳು ಮನೆಗಳನ್ನು ಹಾನಿ ಮಾಡುತ್ತಿವೆ.

ADVERTISEMENT

ಗ್ರಾಮ ತೊರೆದರು: ಎರಡು ದಶಕಗಳಿಂದ ಹೆಚ್ಚಾಗಿರುವ ಕಾಡಾನೆಗಳಿಂದ ರೋಸಿ ಹೋಗಿರುವ ಜನರು ತಮ್ಮ ಜಮೀನಿನಲ್ಲಿ ಏನೂ ಬೆಳೆಯಲಾಗದ ಸ್ಥಿತಿ ತಲುಪಿದ್ದಾರೆ. ವಿಧಿ ಇಲ್ಲದೆ ಜಮೀನನ್ನು ಪಾಳು ಬಿಟ್ಟು ಬದುಕಿಗಾಗಿ ಉದ್ಯೋಗ ಅರಸಿ ಉರು ಬಿಟ್ಟು ಬೆಂಗಳೂರು ಸೇರಿದ್ದಾರೆ. ಉಳಿದವರು ಅಕ್ಕಪಕ್ಕದ ಊರುಗಳಲ್ಲಿ ಕೂಲಿ ಮಾಡು ಬದುಕು ದೂಡುತ್ತಿದ್ದಾರೆ.

‘ರಾತ್ರಿ, ಹಗಲೆನ್ನದೆ ಮನೆ ಹತ್ತಿರ ಬರುವ ಕಾಡಾನೆಗಳು, ಮನೆಯ ಕಾಂಪೌಂಡ್ ಕೆಡವಿ ಹೋಗುತ್ತವೆ. ಬಾಳೆ ಸೇರಿದಂತೆ ಇತರ ಬೆಳೆಗಳಿದ್ದರೆ ಅವುಗಳನ್ನು ಧ್ವಂಸಗೊಳಿಸುತ್ತವೆ. ಇದರಿಂದಾಗುವ ನಷ್ಟ ಕೇಳುವವರೇ ಇಲ್ಲವಾಗಿದೆ. ಊರಿನವರು ಜೀವ ಕೈಯಲ್ಲಿಡಿದುಕೊಂಡೇ ಬದುಕಬೇಕಿದೆ’ ಎಂದು ಗ್ರಾಮದ ಡಾ. ಸತ್ಯಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಸ್ತೆಗಳಲ್ಲಿ ಓಡಾಟ: ಆನೆಗಳು ಊರುಗಳ ರಸ್ತೆಗಳಲ್ಲಿ ಓಡಾಡುತ್ತಿರುವುದರಿಂದ ಜನರು ಭಯದಿಂದ ಓಡಾಡುವಂತಾಗಿದೆ. ಕೆಲವು ದಿನಗಳ ಹಿಂದೆ ಬಿಎಂಟಿಸಿ ಬಸ್ಸಿಗೆ ಅಡ್ಡಲಾಗಿ ಆನೆ ಬಂದಿತ್ತು. ಇದರಿಂದ ಶಾಲಾ– ಕಾಲೇಜು ಮಕ್ಕಳು ಮತ್ತು ಸಾರ್ವಜನಿಕರು ಭಯಭೀತರಾಗಿದ್ದಾರೆ.

ಅಕ್ಕಪಕ್ಕದ ಹಳ್ಳಿಗಳಲ್ಲಿ ತರಕಾರಿ, ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಹಸುಗಳನ್ನು ಸಾಕಿ ಹಾಲನ್ನು ಡೈರಿಗೆ ಹಾಕುತ್ತಾ ಬದುಕುತ್ತಿದ್ದಾರೆ. ಆದರೆ, ಗುಳ್ಳಹಟ್ಟಿ ಕಾವಲ್‌ ಗ್ರಾಮದಲ್ಲಿರುವವರು ಮಾತ್ರ ಎಲ್ಲಾ ಇದ್ದರೂ, ಏನೂ ಮಾಡಲಾಗದಂತೆ ಬದುಕುತ್ತಿದ್ದಾರೆ.

‘ಕಾಡನೆಗಳ ಕಾಟಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಅರಣ್ಯ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಕೊಟ್ಟು ಸಾಕಾಗಿದೆ. ಊರಿಗೆ ಕಾಡಾನೆಗಳು ಬಂದಾಗಲೆಲ್ಲಾ, ಇಲಾಖೆಯವರಿಗೆ ಕರೆ ಮಾಡಿದರೂ ಪ್ರಯೋಜನವಾಗುವುದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಜನ ರೋಸಿದ್ದಾರೆ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಮನೆಯ ಬಳಿಯ ಬೆಳೆ ನಾಶ ಮಾಡಿರುವ ಕಾಡಾನೆಗಳು
ಗುಳ್ಳಹಟ್ಟಿ ಗ್ರಾಮದಲ್ಲಿ ಬಿಎಂಟಿಸಿ ಬಸ್ ಅಡ್ಡವಾಗಿ ಬಂದಿದ್ದ ಕಾಡಾನೆ
ಮುಂಚೆ ಕಾಡಾನೆಗಳು ಬಂದರೂ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ಮಾತ್ರ ತಿಂದು ಹೋಗುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಊರಿಗೆ ನುಗ್ಗಿ ದಾಂದಲೆ ಮಾಡುತ್ತಿವೆ. ಇತ್ತೀಚೆಗೆ ನಮ್ಮ ಮನೆಯ ಗೇಟ್ ಮತ್ತು ಕಾಂಪೌಂಡ್ ಉರುಳಿಸಿವೆ
– ಡಾ. ಸತ್ಯಮೂರ್ತಿ ಗುಳ್ಳಹಟ್ಟಿ ಕಾವಲು ಗ್ರಾಮಸ್ಥ
ಆನೆಗಳು ಊರಿಗೆ ಬಂದಾಗ ಮಾಹಿತಿ ನೀಡಿದರೂ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬರುವುದೇ ಇಲ್ಲ. ಅವರಿಗೆ ಬೇಕಾದಾಗ ಬಂದು ಪಟಾಕಿಗಳನ್ನ ಒಡೆದು ಹೋಗುತ್ತಾರೆ. ಕಾಡಾನೆಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆಯವರ ನಿರ್ಲಕ್ಷ್ಯ ಎದ್ದು ಕಾಣುತ್ತದೆ
– ಮಹೇಶ್ ಗುಳ್ಳಹಟ್ಟಿ ಕಾವಲು ಗ್ರಾಮಸ್ಥ
ಕಾಡಾನೆಗಳ ಕಾಟಕ್ಕೆ ಬದುಕು ಸಾಕೆನಿಸಿದೆ. ಹುಟ್ಟಿದ ಊರು ಬಿಡಲು ಆಗದೆ ಬೇರೆ ಕಡೆಯೂ ಹೋಗಿ ಬದುಕಲಾಗದ ತ್ರಿಶಂಕು ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಅರಣ್ಯ ಇಲಾಖೆಯವರು ಕಾಡಾನೆಗಳು ನಮ್ಮ ಗ್ರಾಮಕ್ಕೆ ಬರದಂತೆ ಕ್ರಮ ಕೈಗೊಳ್ಳಬೇಕು
– ರಾಮಮೂರ್ತಿ ಗುಳ್ಳಹಟ್ಟಿ ಕಾವಲು ಗ್ರಾಮಸ್ಥ

ಶಾಶ್ವತ ಪರಿಹಾರಕ್ಕೆ ಆಗ್ರಹ:

ಅರಣ್ಯದಂಂಚಿನಿಂದ ಕಾಡಾನೆಗಳು ಗ್ರಾಮ ಪ್ರವೇಶಿಸದಂತೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು. ಕೃಷಿ ಭೂಮಿಗೆ ಆನೆಗಳು ನುಗ್ಗದಂತೆ ತಡೆಯಲು ಆನೆ ಕಂದಕಗಳನ್ನು ನಿರ್ಮಿಸಬೇಕು. ಅರಣ್ಯದಂಚಿನಲ್ಲಿ ಸೌರ ವಿದ್ಯುತ್ ಬೇಲಿ ಹಾಗೂ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಎಐ ಆಧಾರಿತ ಸೈರನ್ ಅಥವಾ ಇತರ ಎಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸಬೇಕು. ಕಾಡಾನೆ ಬಗ್ಗೆ ಮಾಹಿತಿ ನೀಡಿದಾಗ ಅರಣ್ಯ ಇಲಾಖೆಯವರು ಕೂಡಲೇ ಸ್ಥಳಕ್ಕೆ ಆನೆ ಕಾರ್ಯಪಡೆಯನ್ನು ಕಳಿಸಿ ಆನೆಗಳನ್ನು ವಾಪಸ್ ಕಾಡಿಗೆ ಓಡಿಸಬೇಕು. ಕಾಡಾನೆಗಳ ದಾಳಿಯಿಂದ ಆಗುವ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗುಳ್ಳಹಟ್ಟಿ ಕಾವಲು ಗ್ರಾಮಸ್ಥರು ಆಗ್ರಹಿಸಿದರು.  

‘ನಿಗಾಕ್ಕೆ ಸಿಬ್ಬಂದಿ ನೇಮಕ’:

ಕಾಡಾನೆಗಳು ಗ್ರಾಮದ ಬಳಿ ಬಾರದಂತೆ ನೋಡಿಕೊಳ್ಳಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಕೆಲವು ದಿನಗಳಿಂದ ಯಾವುದೇ ತೊಂದರೆಯಾಗಿರುವ ವರದಿಯಾಗಿಲ್ಲ. ಗ್ರಾಮದಲ್ಲಿ ತಂತಿಬೇಲಿ ಹಾಕಿದರೆ ಕಾಡಾನೆಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಬನ್ನೇರುಘಟ್ಟ ವಲಯ ಅರಣ್ಯಾಧಿಕಾರಿ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.