ಕನಕಪುರ: ಸಮಾಜದಲ್ಲಿ ಬದಲಾವಣೆ ಆಗಿದೆ. ಆದರೆ, ಬದಲಾದ ಸಮಾಜದಲ್ಲೂ ಸವಿತಾ ಸಮಾಜದ ಮೇಲಿನ ಭಾವನೆ ಮಾತ್ರ ಇನ್ನೂ ಬದಲಾಗಿಲ್ಲ ಎಂದು ಗ್ರೇಡ್-2 ತಹಶೀಲ್ದಾರ್ ಎಚ್.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಶುಕ್ರವಾರ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸವಿತಾ ಸಮಾಜ ಸಮಾಜದಲ್ಲಿ ತನ್ನದೇ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಸಮಾಜದ ಒಂದು ಭಾಗವಾಗಿದ್ದಾರೆ. ಆದರೂ, ಸಮಾಜದವರನ್ನು ಕೀಳರಿಮೆಯಿಂದ ನೋಡುವುದನ್ನು ಮೋದಲು ಬಿಡಬೇಕು. ಅವರ ಮೇಲಿನ ಭಾವನೆ ಬದಲಾಗಬೇಕೆಂದು ಹೇಳಿದರು.
ಬಸವಣ್ಣ ಅವರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಹಡಪದ ಅಪ್ಪಣ್ಣ ಅವರನ್ನು ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡು ಜಾತಿಭೇದ ಹೋಗಲಾಡಿಸುವ ಕೆಲಸ ಮಾಡಿದರು. ಆದರೂ, ಸಮಾಜದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆ ಆಗಿಲ್ಲ ಎಂದರು.
ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಹಡಪದ ಅಪ್ಪಣ್ಣ ಬಸವಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಯಾರೇ ಅನುಭವ ಮಂಟಪದ ಪ್ರವೇಶ ಪಡೆಯಬೇಕಿದ್ದರೂ ಹಡಪದ ಅಪ್ಪಣ್ಣ ಅವರನ್ನು ನೋಡಿಯೇ ಬರಬೇಕು ಎಂದು ಬಸವಣ್ಣ ಕಟ್ಟಾಜ್ಞೆ ಹೊರಡಿಸಿದ್ದರು ಎಂದು ತಿಳಿಸಿದರು.
ಹಡಪದ ಅಪ್ಪಣ್ಣ ಅವರ ಕೈಯಿಂದ ತಾಂಬೂಲ ಅರೆಸಿಕೊಂಡು ತಿನ್ನುತ್ತಿದ್ದ ಬಸವಣ್ಣ, ಅನಿಷ್ಟ ಜಾತಿ ಪದ್ಧತಿ ಆಚರಣೆಗೆ 12ನೇ ಶತಮಾನದಲ್ಲೇ ತಿಲಾಂಜಲಿ ಇಡುವ ಪ್ರಯತ್ನ ನಡೆಸಿದ್ದರು. ಸಮಾಜ ಈಗಲಾದರೂ ಬದಲಾಗಬೇಕು. ಜಾತಿ ವ್ಯವಸ್ಥೆ ಹೋಗಬೇಕು ಎಂದರು.
ವಿವಿಧ ಇಲಾಖೆ ಅಧಿಕಾರಿಗಳು, ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ ಗಿರಿಯಪ್ಪ, ಸವಿತ ಸಮಾಜದ ಅಧ್ಯಕ್ಷ ಶಿವರಾಜು, ಪದಾಧಿಕಾರಿಗಳಾದ ಪ್ರೇಮ್ ಕುಮಾರ್, ವೈರಮುಡಿ ಹಾಗೂ ವಿವಿದ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.