ADVERTISEMENT

ಅಂಗವಿಕಲ ಸಿಬ್ಬಂದಿಗೆ ಕನಿಷ್ಠ ವೇತನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 13:26 IST
Last Updated 27 ನವೆಂಬರ್ 2019, 13:26 IST
ಬುಧವಾರ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಅಂಗವಿಕಲರ ವಿವಿದ್ಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬುಧವಾರ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಅಂಗವಿಕಲರ ವಿವಿದ್ಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ರಾಮನಗರ: ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗವಿಕಲರ ವಿವಿಧೋದ್ದೇಶ (ಎಂಆರ್ ಡಬ್ಲ್ಯು) ಮತ್ತು ಗ್ರಾಮೀಣ ಪುನರ್ವಸತಿ (ವಿಆರ್ ಡಬ್ಲ್ಯು) ಕಾರ್ಯಕರ್ತರು ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಅಂಗವಿಕಲರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಪುನರ್ ವಸತಿಗಾಗಿ ಸರ್ಕಾರ ಗ್ರಾಮೀಣ ಪುನರ್ ವಸತಿ ಯೋಜನೆಯನ್ನು 2006-–07ರಲ್ಲಿ ಜಾರಿಗೆ ತಂದಿದೆ. ರಾಜ್ಯದ 176 ತಾಲ್ಲೂಕು ಮತ್ತು 5628 ಗ್ರಾಮ ಪಂಚಾಯಿತಿಗಳಿಗೆ ಅನುಕ್ರಮವಾಗಿ ಪದವೀಧರ ಅಂಗವಿಕಲರನ್ನು (ಎಂಆರ್ ಡಬ್ಲ್ಯು) ಆಗಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ, ಗ್ರಾಮ ಪಂಚಾಯಿತಿಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಂಗವಿಕಲರನ್ನು (ವಿಆರ್ ಡಬ್ಲ್ಯು) ಆಗಿ ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಲಾಗಿತ್ತು. ಆರಂಭದಲ್ಲಿ ₨750 ಗೌರವ ಧನ ಇದ್ದು, ಈಗ ₨3 ಸಾವಿರ ಬರುತ್ತಿದೆ. ಇಷ್ಟು ಕಡಿಮೆ ಹಣದಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದರು.

ಗೌರವಧನದ ಬದಲು ವೇತನ ನಿಗದಿ ಪಡಿಸಿದರೆ ನಮ್ಮಗಳ ಜೀವನ ಮಟ್ಟ ಸುಧಾರಿಸುತ್ತದೆ. ಆದ್ದರಿಂದ ವೇತನ ನಿಗದಿ ಮಾಡಬೇಕು. 2011ರ ಜನಗಣತಿಯಂತೆ ರಾಜ್ಯದಲ್ಲಿ 13,29,204 ಅಂಗವಿಕಲ ಕುಟುಂಬಗಳಿದ್ದು, ತಾಲ್ಲೂಕಿಗೆ 5 ರಿಂದ 6 ಸಾವಿರ ಅಂಗವಿಕಲರು ಇದ್ದಾರೆ. ಇವರ ಅವಲಂಬಿತ ಕುಟುಂಬ ಸೇರಿ ತಾಲ್ಲೂಕಿನಲ್ಲಿ 18 ರಿಂದ 20 ಸಾವಿರ ಜನಸಂಖ್ಯೆ ಇದೆ. ಇವರಿಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್ ಡಬ್ಲ್ಯು ಮತ್ತು ವಿಆರ್ ಡಬ್ಲ್ಯು ಗಳಿಗೆ ಇಂದಿನ ಜೀವನದ ಸ್ಥಿತಿ ಗತಿಗಳಿಗೆ ಅನುಗುಣವಾಗಿ ಉದ್ಯೋಗ ಭದ್ರತೆ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಈ ಯೋಜನೆಯಿಂದ 11– 12 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಬಹು ಜನಸಂಖ್ಯೆಯ ಪುನರ್ ವಸತಿ ಜವಾಬ್ದಾರಿಯು ತಾಲ್ಲೂಕಿನಲ್ಲಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಾವುಗಳೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದ್ದರಿಂದ ಸ್ಥಳೀಯ ಇಲಾಖೆಯ ಸಿಬ್ಬಂದಿಯೂ ಇಲ್ಲದೇ ಇರುವುದರಿಂದ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್ ಡಬ್ಲ್ಯು ಅವರನ್ನು ತಾಲ್ಲೂಕು ಅಂಗವಿಕಲ ಕಲ್ಯಾಣ ಅಧಿಕಾರಿಗಳನ್ನಾಗಿ ಹಾಗೂ ವಿಆರ್ ಡಬ್ಲ್ಯು ಅವರನ್ನು ಅಂಗವಿಕಲರ ಅಭಿವೃದ್ಧಿ ಸಹಾಯಕರನ್ನಾಗಿ ಹುದ್ದೆಗಳನ್ನು ಸೃಷ್ಟಿಸಬೇಕು. ಇದಕ್ಕಾಗಿ ವಿವಿದ್ದೋದೇಶ ಮತ್ತು ಗ್ರಾಮೀಣ ಪುನರ್ವಸತಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೊಳಿಸಿ ಕಾಯಂಗೊಳಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಅವರಿಗೆ ಮನವಿ ಸಲ್ಲಿಸಿದರು. ಒಕ್ಕೂಟದ ಅಧ್ಯಕ್ಷ ಅಸ್ಲಂ ಪಾಷಾ, ಉಪಾಧ್ಯಕ್ಷ ಚಿಕ್ಕಮಳುರಯ್ಯ, ಕಾರ್ಯದರ್ಶಿ ನಟರಾಜು, ಇಮ್ತಿಯಾಜ್ ಪಾಷಾ, ಹರೀಶ್, ಮಹದೇವ, ಎಚ್.ಪಿ. ಪ್ರೇಮಾ, ಲಕ್ಷ್ಮಿ, ಪುಷ್ಪಲತಾ, ಜಯಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.